ಬದುಕಿನುದ್ದಕ್ಕೂ ಸದಾ ಅವ್ವ ನೆನಪಾಗುತ್ತಲೇ ಇರುತ್ತಾಳೆ. ಅವಳ ಮಾತು ಅಂದರೆ ವೇದ ವಾಕ್ಯವಿದ್ದಂತೆ. ಅದು ಸತ್ಯ ಅಂದರೆ ಸತ್ಯ ಅಷ್ಟೆ. ಏಕೆಂದರೆ ಸತ್ಯ ಯಾವತ್ತೂ ಸತ್ಯ! ಅದಕ್ಕೆ ಇನ್ನೊಂದು ಪರ್ಯಾಯವೇನೂ ಇರುವುದಿಲ್ಲ.

ಅವಳು ಹೇಳುತ್ತಿದ್ದ ವಾಕ್ಯ ಹೀಗಿತ್ತು. ಯಾರಿಗಾದ್ರು ಪಾಪ ಅಂದ್ರೆ ಸಾಕು ಆರು ತಿಂಗಳು ಆಯಸ್ಸು ಕಮ್ಮಿಯಾಗೋದು ನಮ್ಮದೇ. ಇದು ನೆನಪಾಗಲು ಕಾರಣ ಕೆಲಸದಾಕೆ ಸರೂಬಾಯಿಯ ಕತೆ. ಅಕ್ಕಾವ್ರೆ, ನಾಳೆ ಬರಂಗಿಲ್ರಿ. ಹಮೇಶಾ ಹೋಗ್ತೀನಲ್ರೀ ಅದೇ ಕೋರಟ್ ಕೇಸದರಿ. ಅದೇನೊ ಕುತೂಹಲಕ್ಕೆ ವಿವರಿಸಲು ಹೇಳಿದೆ ಮಾತಿನ ಮಲ್ಲಿ ಸರೂಬಾಯಿಗೆ. ಶುರು ಹಚ್ಕೊಂಡ್ಳು. ನಮ್ಮ ನಾದಿನಿ ಕೊಲೆ ಆದಾಗ ನಾ ಅಚಾನಕ್ ಹೋಗಿನ್ರಿ. ಖೂನ ಇಲ್ಲ ಗೊತ್ತಿಲ್ಲ ಕೋರ್ಟಿನವ್ರು ಕರ್ದಾಗ ಹೋಗ್ಬೇರೀ ಈಗ. ಅವರವರೇ ಗಂಡ ಹೆಂಡ್ತಿ ಜಗ್ಳಾ ಆಡಾಕ್ಹತ್ತಿದ್ರ. ಅವ ಹಗಲ್ಹೊತ್ತೇ ಕುಡ್ದಿದ್ದ ಬೆಚಾರ್ಯ. ನಮ್ ನಾದಿನಿ ನಾಜೂಕ್ ಹೆಣ್ಮಗಳ್ಳು. ತಪ್ಪ್ ಜಾಗಿಗಿ ಏಟ್ ಬಿದ್ದಿತ್ತ. ಮೆಲ್ಕಿಗಿ ಬಡದ್ರ ಯಾರ್ ಉಳಿತಾರ ಹೇಳ್ರಿ ಅಕ್ಕಾವ್ರೆ? ಈಗ ನಮ್ ಹಣಿಬರ್ಕಾ ಕೋರ್ಟ ಕಛೇರಿ ಮಾಡಾದ ಬಂದಾದ್ರಿ. ಐದ್ವರ್ಷ ಆಯ್ತು. ಆ ಬೈಲ್ ಮುಝೆ ಮಾರ್ ಅಂದಂಗ ಆಯ್ತ್ರಿ. ನಡಿತಿನ್ರಿ. ನಾಳ ನನ್ ಹಾದಿ ನೋಡಬ್ಯಾಡ್ರಿ.

ಪರೋಪಕಾರ ಮಾಡಕ್ಕ್ಹೋಗಿ ನೀನೇ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡಿ ಸರೂಬಾಯಿ. ಯಾರಾದ್ರು ವಕೀಲರನ್ನ ಹಿಡ್ದು ಕೇಸ್ ಮುಗುಸ್ಕೊ’ ಎಂದು ಹೇಳುತ್ತ, ನಾವೂ ಊರಿಗೆ ಹೊರಟಿದ್ದರಿಂದ ಅವಳಿಗೆ ಇನ್ನೆರಡು ದಿನ ರಜೆ ಕೊಟ್ಟು ಕಳಿಸಿದೆ. ಸರೂಬಾಯಿ ಖುಶಿಯಿಂದ ಹೋದಳು. ನಮ್ಮ ಪಯಣ ಕಲಬುರಗಿಯಿಂದ ಬೀದರಿಗೆ ಸಾಗಿತು. ಮಗ ಕಾರು ನಡೆಸುತ್ತಿದ್ದ. ಎಂಬತ್ತರ ಅಪ್ಪ ಅವನ ಪಕ್ಕದ ಸೀಟಲ್ಲಿ. ಹಿಂದಿನ ಸೀಟಿನಲ್ಲಿ ಕುಳಿತು ಎಲ್ಲಾ ಗಮನಿಸುತ್ತಿದ್ದೆ. ಊರು ದಾಟಿ ಹತ್ತು ಕಿಲೋಮೀಟರ್ ದೂರ ಸವೆದಿರಲಿಲ್ಲ. ರಸ್ತೆ ಬದಿಯಲ್ಲಿ ಒಂದು ಆ್ಯಕ್ಸಿಡೆಂಟ್.! ನಮ್ಮ ಉಸಿರು ಒಂದು ಕ್ಷಣ ನಿಂತಂತಾಯಿತು.

ಅದನ್ನು ದಾಟಿಕೊಂಡು ಒಂದ್ಹತ್ತು ಅಡಿ ಮುಂದೆ ಬಂದ ಮೇಲೆ ಕಾರು ಗಕ್ಕನೆ ನಿಂತಿತು. ಮಗ ಕೂಡಲೆ ಬ್ರೇಕ್ ಹಾಕಿದ್ದ. ಆ್ಯಕ್ಸಿಡೆಂಟ್ ಆದ ಕಾರಿನಿಂದ ಇಳಿದಿದ್ದ ಮುಸ್ಲಿಮ್ ಮಹಿಳೆ ಹಿಂದಿಯಲ್ಲಿ ಆರ್ತವಾಗಿ ಕೂಗಿಕೊಂಡಿದ್ದು ಕೇಳಿಸಿತ್ತು. ಯಾರಾದರೂ ನನ್ನ ಮಗನಿಗೆ ಕಾಪಾಡ್ರಿ. ನೀರೆಲ್ಲಿ? ನೀರು ಕುಡುಸ್ರಿ. ಅಲ್ಹಾ! ಅಲ್ಹಾ.!

ಮಗ ಕೇಳಿದ. ಅಮ್ಮಾ ಅವ್ರಿಗೆ ಹೆಲ್ಪ್ ಮಾಡ್ಲಾ?

ಒಂದು ಕ್ಷಣ ವಿಚಲಿತಳಾದೆ. ಬೆಳಿಗ್ಗೆ ಸರೂಬಾಯಿ ಹೇಳಿದ ಕತೆ ನೆನಪಾಗಿ ಬೇಡ ಎನಿಸಿತು. ನಾವು ನಂಬಿದ ಸತ್ಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಹೇಗೆ ಎನ್ನುವ ಪ್ರಶ್ನೆ ಕಾಡಿತು. ಬೇಡ ಅನ್ನಲು ಆತ್ಮ ಒಪ್ಪಲಿಲ್ಲ. ಬರೀ ಆದರ್ಶದ ಮಾತುಗಳನ್ನಾಡಿದರೆ ಬದುಕು ಅರ್ಥಪೂರ್ಣ ಆಗುವುದಾದರೂ ಹೇಗೆ. ನುಡಿದಂತೆ ನಡೆಯಬೇಕು ನಿಜ. ಆದರೆ ನಡೆದಂತೆ ನಡೆದೇ ಇತ್ತು ಎಂದರೆ ಆ ತಾಪತ್ರಯ ಕಟ್ಟಿಕೊಂಡು ಏಗುವುದು ಹೇಗೆ.

ಕ್ಷಣ ಮಾತ್ರದಲ್ಲಿ ಮಿಂಚಿನAತೆ ಮೂಡಿ ಮಾಯವಾದ ಪ್ರಶ್ನೆಗಳನ್ನು ಪಕ್ಕಕ್ಕೆ ಸರಿಸಿ, ಮಗಾ ಹೋಗು ಈ ನೀರಿನ ಬಾಟಲ್ ತೊಗೊ, ಬೇಗ ಹೋಗಿ ವಿಚಾರಿಸು ಎಂದೆ. ಅಷ್ಟು ಹೇಳುವುದನ್ನೇ ಕಾಯುತ್ತಿದ್ದ ಮಗ ಓಡಿದ. ಅಷ್ಟರಲ್ಲಾಗಲೇ ನಾಲ್ಕೈದು ವಾಹನಗಳು ನಮ್ಮನ್ನು ದಾಟಿ ಮುಂದೆ ಹೋಗಿದ್ದವು. ಬೈಕ್ ಮೇಲಿದ್ದ ಇಬ್ಬರು ಹುಡುಗರು ವಿಡಿಯೋ ಮಾಡಿಕೊಂಡು ಬುರ್ರ್ ಅಂತ ಹೋಗಿಯಾಗಿತ್ತು. ಎಲ್ಲಿಯ ಮನುಷ್ಯ. ಎಲ್ಲಿಯ ಮಾನವೀಯತೆ. ಮನಸು ಮೂಕವಾಯಿತು. ಮಗ ಕಾರಿನಿಂದ ಕೆಳಗಿಳಿಯದಂತೆ ಆಜ್ಞೆ ಮಾಡಿದ್ದ. ಆತಂಕ ಪ್ರತಿ ಕ್ಷಣಕ್ಕೂ ದ್ವಿಗುಣವಾಗುತ್ತಿತ್ತು. ಅಪ್ಪ ನಾನೂ ಇಬ್ಬರೂ ಮೌನವಾಗಿದ್ದೆವು. ಮಾತು ಬೇಡವೆನಿಸದ ಅಪ್ಪ ಕೂಡ ಮೌನಕ್ಕೆ ಮೊರೆ ಹೋಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುವಂತೆ ವಿಷಾದ ಆವರಿಸಿತ್ತು.

ಅಲ್ಲಿ ಸಮಯ ಕಳೆಯುವುದು ಬಹಳ ಕಷ್ಟಕರವಾಗಿತ್ತು. ಪೋಲಿಸ್, ಕೇಸ್, ಹಾಸ್ಪಿಟಲ್, ವಿಟ್ನೆಸ್, ಕೋರ್ಟ್, ವಕೀಲರು ಎಲ್ಲಾ ವಿಚಾರಗಳು ಧುಮ್ಮಿಕ್ಕಲಾರಂಭಿಸಿತ್ತು. ಹೀಗೆ ಸಿಕ್ಕಿ ಹಾಕಿಕೊಂಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಗೆ ಉತ್ತರವಿನ್ನೂ ಸ್ಪಷ್ಟವಾಗಲಿಲ್ಲ. ಆದರೂ ಎಲ್ಲಕ್ಕಿಂತ ಮೊದಲು ಮಾನವೀಯತೆ ತಾನೆ. ಯಾರ ನೋವನ್ನು ಯಾರೂ ತೆಗೆದುಕೊಳ್ಳಲಾಗುವುದಿಲ್ಲ. ಕೇವಲ ಹಂಚಿಕೊಂಡು ಹಗುರ ಮಾಡುವ ಪ್ರಕ್ರಿಯೆಯಷ್ಟೆ. ಅಷ್ಟಕ್ಕೇ ಏನೋ ಮಾಡಿದ ಆಗಾಧತೆಯ ಭಾವ. ಮನುಷ್ಯ ಮತ್ತವನ ಮನಸು ಕ್ಷುಲ್ಲಕವೆ. ಇರಲಿ ತಾಳ್ಮೆಯಿಂದ ಸಮಯ ಎಣಿಸುವುದೇ ಸರಿಯಾದ ಮಾರ್ಗವೆಂದುಕೊಂಡು ಸುಮ್ಮನಾದೆ.

ನಡಿಯಮ್ಮ ಮುಗಿಸಿದೆ ಎಂದು ಮಗ ಬಂದಾಗ ನಾವಿಬ್ಬರೂ ಕುತೂಹಲದಿಂದ ಅವನು ಕೊಡಬಹುದಾದ ವಿವರಣೆಗೆ ಕಾದಿದ್ದೆವು. ಪುಣ್ಯ ಮಾಡಿದ್ದ. ಉಳ್ದಿದಾನೆ ಒಂದು ಇಂಚು ವ್ಯತ್ಯಾಸದಲ್ಲಿ. ಇಲ್ಲ ಅಂದ್ರೆ ಇಷ್ಟ್ಹೊತ್ತಿಗೆ ಅಲ್ಲಾ ಕೊ ಪ್ಯಾರೆ ಹೋಗಯೆ ಅನ್ನ ಬೇಕಾಗಿತ್ತು. ಆ್ಯಂಬುಲೆನ್ಸ್ ವ್ಯವಸ್ಥೆ ಆಯ್ತು. ನಾವು ಹೊರಡೋಣ. ಅಷ್ಟರಲ್ಲಿ ಆ್ಯಂಬುಲೆನ್ಸ್ ತನ್ನ ಭಯಾನಕ ಶಬ್ದದೊಂದಿಗೆ ಬಂದು ನನ್ನ ಹೃದಯ ಬಡಿತ ಹೆಚ್ಚಿಸಿತು. ಆದರೂ ನಿರಾಳವಾಗಿ ಮುಂದೆ ಸಾಗಿದೆವು.

ನಿಟ್ಟುಸಿರು ಬಿಡುತ್ತ ಆಪತ್ಬಾಂಧವರಾದುದು ಆಪತ್ತು ತರಲಿಲ್ಲವೆನ್ನುವ ನೆಮ್ಮದಿ ಒಂದು ಕಡೆ. ಆದರೂ ಕೆಲವೊಮ್ಮೆ ಹೀಗೇ ಇರುವುದಿಲ್ಲ ಎನ್ನುವ ವಿಚಾರ ಇನ್ನೊಂದು ಕಡೆ.

–   ಸಿಕಾ, ಕಲಬುರಗಿ

Leave a Reply

Your email address will not be published. Required fields are marked *

You May Also Like

ನಕಲಿ ರೆಮ್ಡಿಸಿವರ್ ಮಾರಾಟ : ಓರ್ವ ಸಿಸಿಬಿ ಬಲೆಗೆ

ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹರಡುತ್ತಿದ್ದು, ಇದೀಗ ಕೆಲವರು ಅದನ್ನೆ ಬಂಡವಾಳವಾಗಿಟ್ಟುಕೊಂಡು ಸೋಂಕಿತರಿಗೆ ನೀಡುವ ರೆಮ್ ಡಿಸಿವರ್ ಚುಚ್ಚುಮದ್ದನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಎಂ: ವರ್ಕ್ ಫ್ರಂ ಹೋಂ?ಅಥವಾ ಹೋಂ ಕ್ವಾರಂಟೈನ್?

ಬೆಂಗಳೂರು: ನಾನು ಆರೋಗ್ಯವಾಗಿರುವೆ. ಗೃಹ ಕಚೇರಿ ಕೃಷ್ಣಾದಲ್ಲಿ ಕೆಲವು ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿದೆ. ಕೆಲವು ದಿನಗಳ…

ಗದಗನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 18ಕ್ಕೇ ಏರಿಕೆ!

ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ದೃಢವಾಗಿದೆ. ಪಿ-1307 ಕೇಸ್ ಪತ್ತೆಯಾಗಿದ್ದು 49 ವರ್ಷದ ಮಹಿಳೆ ಮುಂಬೈನಿಂದ ಇತ್ತಿಚೆಗಷ್ಟೆ ಬಂದಿದ್ದಳು ಎನ್ನಲಾಗಿದ್ದು