ರಾಯಚೂರು : ಮಳೆರಾಯನ ಅಟ್ಟಹಾಸಕ್ಕೆ ಇಡೀ ಉತ್ತರ ಕರ್ನಾಟಕವೇ ನಲುಗಿ ಹೋಗುತ್ತಿದೆ.
ಕಳೆದ ಹಲವು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಅಟ್ಟಹಾಸ ಎಗ್ಗಿಲ್ಲದೆ ಸಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಜನರ ಜೀವನ ಮೂರಾಬಟ್ಟೆಯಾಗಿದೆ. ಅಲ್ಲದೇ, ನದಿ ಪಾತ್ರದ ಜನರ ಬದುಕಂತೂ ಹೇಳತೀರದಾಗಿದೆ.
ಕಳೆದ ಎರಡು ದಿನಗಳಿಂದ ಗಾಳಿ ಸಹಿತ ಸುರಿದ ಮಳೆಯಿಂದಾಗಿ ಈ ಪಾತ್ರದ ಜನರ ಬದುಕು ಮತ್ತೆ ಬೀದಿಗೆ ಬಂದಿದೆ. ಮಾನ್ವಿ, ಲಿಂಗಸುಗೂರು, ರಾಯಚೂರು ತಾಲೂಕುಗಳಲ್ಲಿ ಕೋಟ್ಯಾಂತರ ರೂಪಾಯಿ ಹಾನಿಯಾಗಿದೆ.
ರೈತರು ಬೆಳೆದ ಬೆಳೆಗಳು ಮಳೆಯ ನೀರಿಗೆ ಆಹುತಿಯಾಗಿವೆ. ಇನ್ನೇನು ಫಸಲು ರೈತರ ಕೈಗೆ ಸಿಗಬೇಕು ಎನ್ನುವಷ್ಟರಲ್ಲಿಯೇ ಎಲ್ಲವನ್ನೂ ಮಳೆರಾಯ ಆಪೋಸನ ಮಾಡಿಕೊಂಡಿದ್ದಾನೆ. ಹೀಗಾಗಿ ರೈತರು ಬಿದಿಗೆ ಬಂದು ನಿಂತಿದ್ದಾರೆ.
ನದಿ ನೀರು ಹೆಚ್ಚಾದ ಪರಿಣಾಮ ತೀರದ ಹೊಲಗಳೆಲ್ಲ ನೀರಿನಿಂದ ಕೆರೆಗಳಂತಾಗಿವೆ. ನದಿ ಭಾಗದ ಬಹುತೇಕ ಹಳ್ಳಿಗಳ ಜಮೀನುಗಳಿಗೆ ನೀರು ನುಗ್ಗಿದೆ. ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದ್ದು, ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆಯಿದ್ದು ಜನರಲ್ಲಿ ಆತಂಕ ಮನೆಮಾಡಿದೆ.
ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಜಮೀನುಗಳಲ್ಲಿ ನೀರು ನಿಂತಿದೆ. ಹೀಗಾಗಿ ಹೊಲಗಳೆಲ್ಲ ಕೆರೆಗಳಂತಾಗಿವೆ. ಕೃಷ್ಣಾ ನದಿಯ ಪ್ರವಾಹ ಶುರುವಾಗಿದ್ದು, ನೀರು ಹೆಚ್ಚಳವಾಗಿದ್ದರಿಂದ ಜಮೀನುಗಳಿಗೆ ನೀರು ನುಗ್ಗಿದೆ. ರಾಯಚೂರು ತಾಲೂಕಿನಲ್ಲಿ ಕೃಷ್ಣ ನದಿಯು 4.40 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಭೀಮಾ ನದಿಯಿಂದ ಹರಿದು ಬರುತ್ತಿರುವ 2.85 ಲಕ್ಷ ಕ್ಯೂಸೆಕ್ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಹೊರಬಿಟ್ಟ 1.60 ಲಕ್ಷ ಕ್ಯೂಸೆಕ್ ನೀರು ಪ್ರವಾಹ ಸೃಷ್ಟಿಸುವ ಸಾಧ್ಯತೆಯಿದೆ. ಹೀಗಾಗಿ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.