ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ @CMofKarnataka ನಿಗದಿಪಡಿಸಿರುವ ವೆಚ್ಚದ ವಿವರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ. ಒಂದು ಜವಾಬ್ದಾರಿಯುತ ಸರ್ಕಾರ ತನ್ನೆಲ್ಲ ಸೂಕ್ಷ್ಮತೆಯನ್ನು ಕಳೆದುಕೊಂಡು ಇಷ್ಟೊಂದು ಅಮಾನವೀಯ, ಇಷ್ಟೊಂದು ಜನವಿರೋಧಿಯಾಗಲು ಹೇಗೆ ಸಾಧ್ಯ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ಪರೀಕ್ಷೆಗೆ ನಿಗದಿ ಮಾಡಿರುವ ದರದ ಕುರಿತು ಅಸಮಾಧಾನ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ ದಿನವೊಂದಕ್ಕೆ ಜನರಲ್ ವಾರ್ಡ್‌ನಲ್ಲಿ ರೂ,10,000, ಐಸೋಲೇಷನ್ ವಾರ್ಡ್ ನಲ್ಲಿ ರೂ.15,000 ಮತ್ತು ವೆಂಟಿಲೇಟರ್ ಸಹಿತ ಐಸಿಯುನಲ್ಲಿ ರೂ.25,000 ಶುಲ್ಕ ನಿಗದಿಪಡಿಸಿರುವ @CMofKarnataka ಉದ್ದೇಶ ಜನರ ಜೀವ ಉಳಿಸುವುದೋ? ಜೀವ ತೆಗೆಯುವುದೋ? ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ಸೋಂಕನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ತಾವು ನಿರ್ವಹಿಸಬೇಕಾಗಿರುವ ಜವಾಬ್ದಾರಿಯನ್ನು ಖಾಸಗಿಯವರ ಹೆಗಲಿಗೆ ವರ್ಗಾಯಿಸಲು ಹೊರಟಿವೆ. ಈ ಮೂಲಕ ಬಡ-ಅಸಹಾಯಕ ಜನರನ್ನು ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬಲಿಪಶುಮಾಡಲು ನಿರ್ಧರಿಸಿದೆ ಎಂದು ಅವರು ಟೀಕಿಸಿದ್ದಾರೆ.
ಕೊರೊನಾ ಸೋಂಕಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ನಿಗದಿಪಡಿಸಿರುವ ಚಿಕಿತ್ಸಾ ಶುಲ್ಕವನ್ನು ಕಣ್ಣುಮುಚ್ಚಿ ಅನುಮೋದಿಸಿ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದಂತಿದೆ. @CMofKarnataka ನೆರವಾಗಲು ಹೊರಟಿರುವುದು ಸೋಂಕಿತರಿಗೋ? ಖಾಸಗಿ ಆಸ್ಪತ್ರೆಗಳಿಗೋ? ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ರೋಗಿಗಳಿಗೆ ಎಲ್ಲ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು. ಸರ್ಕಾರ ಈ ಕೂಡಲೇ ಸ್ಟಾಂಡರ್ಡ್ ಟ್ರೀಟ್ಮೆಂಟ್ ಪ್ರೊಟೊಕಾಲ್ ಜಾರಿಗೆ ತರುವ ಜೊತೆಗೆ ಅದರ ಜಾರಿ ಬಗ್ಗೆ ನಿಗಾ ವಹಿಸಲು ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಜನರ ದುಡಿಮೆಯ ಅವಕಾಶಗಳೆಲ್ಲ ಮುಚ್ಚಿ ಹೋಗಿವೆ. ಅಸಂಖ್ಯಾತ ನೌಕರರನ್ನು ಕಾರ್ಖಾನೆ ಮತ್ತು ಕಂಪೆನಿಗಳು ಕೆಲಸದಿಂದ ತೆಗೆದು ಹಾಕಿವೆ. ಇದರಿಂದಾಗಿ ಜನರ ಬಳಿ ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಿರುವುದು ಅಮಾನವೀಯ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಬಡ ಅಥವಾ ಮಧ್ಯಮ ವರ್ಗದ ಒಂದೇ ಕುಟುಂಬದ ನಾಲ್ಕೈದು ಜನ ಸದಸ್ಯರು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಉಂಟಾದರೆ 10-12 ಲಕ್ಷಕ್ಕೂ ಅಧಿಕ ಮೊತ್ತದ ಹಣ ಕಟ್ಟಬೇಕು, ಇಷ್ಟು ದೊಡ್ಡ ಮೊತ್ತದ ಹಣ ಅವರಿಂದ ತುಂಬಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರದ ಅಧಿಸೂಚನೆ ಪ್ರಕಾರ 2-3 ಜನ ವಾರ್ಡ್‌ಗಳನ್ನು ಹಂಚಿಕೊಂಡು ಚಿಕಿತ್ಸೆ ಪಡೆದರೆ ಅವರಿಗೆ ಸಾಮಾನ್ಯ ದರದ ಜೊತೆಗೆ ಶೇ.25 ರವರೆಗೆ ಹೆಚ್ಚಿನ ದರಗಳನ್ನು ನಿಗದಿಪಡಿಸಬಹುದು. ಅದರ ಜೊತೆಗೆ ಸರ್ಕಾರ ನಿಗದಿಪಡಿಸಿರುವ ದರಗಳು ವಿಮಾ ಪ್ಯಾಕೇಜುಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ ಎಂದಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಜಾಗವೇ ಇಲ್ಲದಂತಾ ಪರಿಸ್ಥಿತಿಯಿದೆ. ಸುಮಾರು 35,000 ವೆಂಟಿಲೇಟರ್ಗಳ ಸರಬರಾಜಿಗೆ ರಾಜ್ಯ ಕೇಂದ್ರಕ್ಕೆ ಮನವಿ ಮಾಡಿದರೆ, ಕೇವಲ 90 ವೆಂಟಿಲೇಟರ್ಗಳನ್ನು ಮಾತ್ರ ನೀಡಿದೆಯೆಂಬ ಮಾಹಿತಿ ಇದೆ. ಕೊರೊನಾ ನಿಯಂತ್ರಣದಲ್ಲಿ @CMofKarnataka ಸಂಪೂರ್ಣ ವಿಫಲವಾಗಿರುವುದಕ್ಕೆ ಬೇರೆ ಸಾಕ್ಷಿ ಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.