ವ್ಯಕ್ತಿ ಎತ್ತರಕ್ಕೆ ಏರಿದಂತೆ ಸರಳನಾಗುತ್ತಾನೆ. ‘ಡೌನ್ ಟು ಅರ್ಥ್’ ಅರಿವಾಗುತ್ತ ಹೋಗುತ್ತದೆ. ಕನ್ನಡದಲ್ಲಿ ಇದಕ್ಕೆ ಸರಿ ಸಮಾನವಾದ ರೀತಿಯಲ್ಲಿ ಹೇಳಲಾಗದ ಡೌನ್ ಟು ಅರ್ಥ್ ಕೇವಲ ಅನುಭವಕ್ಕೆ ದಕ್ಕುತ್ತದೆ.

ಬಾಲ್ಯದಿಂದಲೂ ಸಿನೆಮಾ ನೋಡುವ ಹುಚ್ಚು, ರಾಜಕುಮಾರ ಅವರ ನಟನೆ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನದ ಅನುಸಂಧಾನ ಮರೆಯಲಾಗದು.

ನಟ, ಗಾಯಕ, ನಿರ್ಣಾಯಕ ಹೀಗೆ ಹತ್ತಾರು ವಿಭಿನ್ನ ರೀತಿಯಲ್ಲಿ ಪರದೆ ಮೇಲೆ ಮೂಡುತ್ತಿದ್ದ ಎಸ್.ಪಿ. ಅತಿ ಸೂಕ್ಷ್ಮ ಜೀವಿ. ಸಾವಿರಾರು ಹಾಡುಗಳನ್ನು ನೂರಾರು ಗಾಯಕರು ಹಾಡಿ ಕೀರ್ತಿ ಗಳಿಸಿದ್ದಾರೆ. ಆದರೆ ಎಸ್.ಪಿ. ತರಹ ಕಲೆಯ ವಿವಿಧ ಮಗ್ಗುಲುಗಳನ್ನು ಅರ್ಥ ಮಾಡಿಕೊಂಡವರು ವಿರಳ. ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮೂಡಿ ಬಂದ ಜನಪ್ರಿಯ ಶೋ.

ಹೆಚ್ಚು ಜನಮಾನಸ ತಲುಪಲು ಎಸ್.ಪಿ ಅವರ ಮಾತು, ವಿವರಣೆ, ಸರಳತೆ, ಸಂಯಮ, ಆಳ ಜ್ಞಾನ, ಅಪರಿಮಿತ ಜೀವನೋತ್ಸಾಹ, ದಿವ್ಯ ನೆನಪಿನ ಶಕ್ತಿ ಹೀಗೆ ಹತ್ತಾರು ಕಾರಣಗಳು, ಆಗ‌ ಕುತೂಹಲ ಇಟ್ಟುಕೊಂಡು ನೋಡಿ ಆರಾಧಿಸಲಾರಂಭಿಸಿದೆ.

ಹಿಂದೆ ಅನೇಕ ಬಾರಿ ಹೇಳಿಕೊಂಡಂತೆ ನನಗೆ ಬಚ್ಚನ್ ಮತ್ತು ಎಸ್.ಪಿ. ಬಹುದೊಡ್ಡ ವಿಸ್ಮಯ. ಸದಾ ನೋಡಬೇಕು, ಆಲಿಸಬೇಕು ಎನ್ನುವ ಜೀವ ಚೈತನ್ಯಗಳು. ದೇಶದ ಎಲ್ಲ ಭಾಷೆಗಳಲ್ಲಿ ಹಾಡಿದ್ದರೂ ಅವರು ಅಪ್ಪಟ ಕನ್ನಡದ ಗಾಯಕ ಎನಿಸುತ್ತಾರೆ.

ಏಕತಾನವಾಗಿ ಹಾಡದೆ ನಟರ ಧ್ವನಿಗೆ ತಕ್ಕಂತೆ ಸರಾಗವಾಗಿ ಹಾಡುವುದು ಅವರ ಲೀಲಾಜಾಲ ಸಾಮರ್ಥ್ಯಕ್ಕೆ ಸಾಕ್ಷಿ. ಉದಾಹರಣೆಗೆ ಶಂಕರನಾಗ್ ಧ್ವನಿಯ ಏರಿಳಿತಗಳನ್ನು ಅರ್ಥ ಮಾಡಿಕೊಂಡು ತಮಾಷೆಯಾಗಿ ಹಾಡುತ್ತಿದ್ದರು. ಕನ್ನಡ ಭಾಷೆಯ ತುಂಬ ಸೂಕ್ಷ್ಮ ಸಂಗತಿಗಳನ್ನು ಗ್ರಹಿಸಿ ಭಾವಗೀತೆಗಳನ್ನು ಕೂಡ ಹಾಡಿದ್ದಾರೆ.

ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳವರ ಬಯೋ ಪಿಕ್ ಸಿನೆಮಾ ಯಶಸ್ವಿಯಾಗಲು ಅವರ ಹಾಡುಗಳೇ ಕಾರಣ. ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ ವೈಯಕ್ತಿಕ ಆಸಕ್ತಿಯ ಮೂಲಕ ತಮ್ಮ ಸುಪ್ತ ಮನಸ್ಸಿನ ಅಂತಃಶಕ್ತಿಯ ಮೂಲಕ ದನಿಯಾದವರು.

ಸಂಗೀತ ಖಂಡಿತವಾಗಿ ದೇವರ ಆರಾಧನೆಯ ಮಹಾ ಧ್ಯಾನಸ್ಥ ಸ್ಥಿತಿ. ಭಾಷೆಗಿರುವ ತಾಕತ್ತನ್ನು ಹಾಡುಗಾರ ಮಾತ್ರ ಅಭಿವ್ಯಕ್ತಿಸಬಲ್ಲ. ಅದರಲ್ಲೂ ಎಸ್.ಪಿ. ಸೂಕ್ಷ್ಮಾತಿ ಸೂಕ್ಷ್ಮ ಗಾಯಕ. ಆಯಾ ಭಾಷೆಯ ಶಕ್ತಿ, ಸಾಮರ್ಥ್ಯ ಗ್ರಹಿಸಿ ಹಾಡಿದ ಹಿರಿಮೆ.

ದಕ್ಷಿಣ ಭಾರತದ ನಟರು ಹಿಂದಿ ಭಾಷೆಯಲ್ಲಿ ನಟಿಸುವಾಗ ಇವರೇ ಹಾಡುವ ಅನಿವಾರ್ಯತೆ ಉಂಟಾಯಿತು. ಕಮಲ ಹಾಸನ ಹಿಂದಿ ಸಿನಿಮಾದಲ್ಲಿ ನಟಿಸಿದಾಗ ಎಸ್.ಪಿ. ಕಂಠಸಿರಿ ಅಗತ್ಯವೆನಿಸಿತು.

ಆದರೆ ಹಿಂದಿ ಸಿನೆಮಾ ರಂಗದ ಒಳ ರಾಜಕಾರಣ ಅವರಿಗೆ ಅರ್ಥವಾಗಿ ದೂರ ಸರಿದರು. ಅದರಿಂದಾಗಿ ಹಿಂದಿ ಸಿನೆಮಾ ರಂಗ ಒಬ್ಬ ಶ್ರೇಷ್ಠ ಗಾಯಕನಿಂದ ವಂಚಿತವಾಯಿತು. ‘ತೆಲುಗು ಮಾತೃಭಾಷೆ, ಕನ್ನಡ ಅವರ ಹೃದಯ ಭಾಷೆ’ ಎಂಬ ಮಾತನ್ನು ಅವರು ಅನೇಕ ಬಾರಿ ಪ್ರಸ್ತಾಪಿಸಿದ್ದಾರೆ.

ಕನ್ನಡ ಭಾಷೆಯ ಅನೇಕ ಗಾಯಕರನ್ನು ಅವರು ಗುರುತಿಸಿ ಬೆಳೆಸಿದ್ದಾರೆ. ಟ್ಯ್ರಾಕ್ ಗಾಯಕರ ಸಾಮರ್ಥ್ಯ ಅರ್ಥ ಮಾಡಿಕೊಂಡು ಪೂರ್ಣ ಪ್ರಮಾಣದ ಗಾಯಕರಾಗಲು ಕಾರಣರಾಗಿದ್ದಾರೆ.

ಸ್ಥೂಲ ಕಾಯದ ಎಸ್.ಪಿ ಅದನ್ನು ಲೆಕ್ಕಿಸದೆ ತಮ್ಮ ಮನೋಬಲದ ಮೂಲಕ ಜನರಿಗೆ ಆಕರ್ಷಕವಾಗಿ ಕಂಗೊಳಿಸಿದರು. ತಮಗೆ ಸರಿ ಹೊಂದುವ ಪಾತ್ರಗಳಲ್ಲಿ ಭಾವ ಪೂರ್ಣವಾಗಿ ಅಭಿನಯಿಸಿ ನಟರಾಗಿ ಗುರುತಿಸಿಕೊಂಡರು.

ನಾಲ್ಕು ದಶಕಗಳ ಕಾಲದಿಂದ ಅದೇ ಸಾಮರ್ಥ್ಯ ಉಳಿಸಿಕೊಂಡವರು. ಈಗಿನ ತಲೆಮಾರಿನ ನಟರಿಗೂ ಸೂಕ್ತ ದನಿಯಾದರು. ಅವರ ಸರಳತೆ ಹೆಚ್ಚು ಜನರಿಗೆ ತಲುಪಿದ್ದು ರಿ‌ಯ್ಯಾಲಿಟಿ ಶೋಗಳ ಮೂಲಕ. “ಸಂಗೀತ ವಿಶ್ವ ಭಾಷೆ” ಭಾಷೆ, ಗಡಿ, ದೇಶಗಳ ಆಚೆಗೂ ಆಕರ್ಷಿಸುವ ಸೆಳೆತ. ‘ಗಾನಕೆ ಒಲಿಯದ ಮನಸೇ ಇಲ್ಲ’ ಎಸ್.ಪಿ. ಅವರ ಓದುವ, ದೇಶ ನೋಡುವ ಕುತೂಹಲ, ಜನರೊಂದಿಗೆ ಬೆರೆಯುವ  ಚಾಣಾಕ್ಷ ನಡೆ ತುಂಬಾ ಆಕರ್ಷಕ.

ದೇಶದ ಬಹುಪಾಲು ಭಾಷೆಯಲ್ಲಿ, ನಲ್ವತ್ತು ಸಾವಿರ ಹಾಡುಗಳನ್ನು ಹಾಡಿರುವುದು ಕೇವಲ ದಾಖಲೆಗಾಗಿ ಅಲ್ಲ ಅಪ್ಪಟ ಜೀವನೋತ್ಸಾದಿಂದ. ಐದು ದಶಕ ಗಾಯಕ, ನಟ ಮತ್ತು ಪ್ರೇರಕರಾಗಿ ಸಾಂಸ್ಕೃತಿಕ ಲೋಕದ ದೊರೆಯಾದರು.

ಕನ್ನಡಿಗರ ಔದಾರ್ಯವನ್ನು ಮುಕ್ತವಾಗಿ ಕೊಂಡಾಡಿದ್ದು ನಮ್ಮ ಭಾಗ್ಯ. ಅವರ ರಸಮಂಜರಿ ಹಾಡುಗಳನ್ನು ಆಳ್ವಾಸ್ ವಿರಾಸತ್ ಸಂಗೀತ ಮೇಳದಲ್ಲಿ ಕೇಳುವ ಅವಕಾಶ ಲಭಿಸಿತ್ತು.

ಅವರೊಂದಿಗೆ ವೈಯಕ್ತಿಕವಾಗಿ ಚರ್ಚಿಸುವ ಇರಾದೆಯನ್ನು ಸಂಗೀತ ನಿರ್ದೇಶನ ಹಂಸಲೇಖಾರ ಬಳಿ ಹೇಳಿಕೊಂಡಿದ್ದೆ. ಎಸ್.ಪಿ. ಅವರ ಕುರಿತಾದ ಅನಿಸಿಕೆಗಳನ್ನು ಅವರೊಂದಿಗೆ ಮುಖಾ ಮುಖಿಯಾಗುವ ಮಹದಾಸೆಗೆ ಕಾಲ ಕೂಡಿ ಬರಲಿಲ್ಲ. ಆದರೆ ಜೀವನಶೈಲಿ ತರಬೇತಿಯಲ್ಲಿ ಕಡ್ಡಾಯವಾಗಿ ಅಮಿತಾಭ್ ಮತ್ತು ಬಾಲು ಅವರನ್ನು ನೆನಪು ಮಾಡಿಕೊಂಡು ಸಡಗರ ಪಡುತ್ತೇನೆ.

ಪ್ರೊ.ಸಿದ್ದು ಯಾಪಲಪರವಿ

ಹಾಡಿನ ಮೂಲಕ ಮೋಡಿ ಮಾಡಿದ ಮಾಂತ್ರಿಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇನ್ನಿಲ್ಲ. ಆದರೆ ಅವರ ಹಾಡುಗಳು ಮಾತ್ರ ಯವರ್ ಗ್ರೀನ್. ಸದಾ ಹೃದಯದಲ್ಲಿ ಅಚ್ಚಳಿಯದಂತೆ ಉಳಿಯಬಲ್ಲ ಹಾಡುಗಳನ್ನು ಹಾಡುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ಎಸ್ಪಿಬಿ ಚಿರಸ್ಥಾಯಿ. ಎಸ್ಪಿಬಿ ಅವರ ಕುರಿತು ಸಾಹಿತಿ, ಚಿಂತಕ ಪ್ರೊ.ಸಿದ್ದು ಯಾಪಲಪರವಿ ಬರೆದಿದ್ದಾರೆ.

ಸಾಮಾನ್ಯ ಜನರಿಗೂ ಎಸ್.ಪಿ. ಹುಚ್ಚು ವಿಪರೀತ ಎಂಬುದನ್ನು ಒಮ್ಮೆ ಮಂಗಳೂರು ಬಸ್ ನಿಲ್ದಾಣದಲ್ಲಿ ಅನುಭವಿಸಿದೆ. ಅವರು ಹಾಕುವ ಶೈಲಿಯ ಜುಬ್ಬಾ ಹಾಕಿಕೊಂಡು ರಾತ್ರಿ ಮಂಗಳೂರಿನಿಂದ ಊರಿಗೆ ಹೊರಟಿದ್ದೆ. ಹಿಂದಿನ ದಿನ ಮೂಡಬಿದಿರೆಯಲ್ಲಿ ಅವರ ಸಂಗೀತ ಸಂಜೆ ವೀಕ್ಷಿಸಿದ್ದ ವ್ಯಕ್ತಿಯೊಬ್ಬ ‘ಟೈಟ್’ ಆಗಿ ಹಾಡು ಹಾಡುತ್ತ ಏಕಾಂತ ಸಂಭ್ರಮಿಸುತ್ತಿದ್ದ.

ಆಗ ನಾನು ಅವನ ಕಣ್ಣಿಗೆ ಬಿದ್ದದ್ದೇ ತಪ್ಪಾಯಿತು. ಓಡಿ ಬಂದವನೇ ‘ ನೀವು ನನಗೋಸ್ಕರ ಹಾಡಲೇ ಬೇಕು’ ಎಂದು ಒತ್ತಾಯಿಸಲಾರಂಭಿಸಿದಾಗ ದಿಕ್ಕೇ ತೋಚಲಿಲ್ಲ. ‘ನನಗೆ ಹಾಡೋಕೆ ಬರಲ್ಲ’ ಎಂದು ಅಂಗಲಾಚಿದರೂ ಬಿಡಲಿಲ್ಲ. ‘ನಿನ್ನೆ ಅಷ್ಟು ಚಂದ ಹಾಡಿದಿ, ಈಗ ನಂಗೋಸ್ಕರ ಒಂದೇ ಒಂದು ಹಾಡು ಮಾರಾಯ’ ಗಟ್ಟಿಯಾಗಿ ಕೈ ಹಿಡಿದು ಬಿಟ್ಟ.

ಸುತ್ತಮುತ್ತಲಿನ ಜನ ತುಳುವಿನಲ್ಲಿ ಅವನಿಗೆ ತಿಳಿ ಹೇಳಿ ನನ್ನನ್ನು ಬಸ್ಸಿಗೆ ಏರಿಸಿದರು. ಮುಂದೆ ಆ ಸುಂದರ ಜುಬ್ಬಾ ಒಬ್ಬ ಸಂಗೀತ ಕಲಾವಿದನಿಗೆ ಕೊಟ್ಟು ಬಿಟ್ಟೆ. ಹಾಡಲು ಬರುತ್ತಿದ್ದರೆ ಮಾತ್ರ ಆ ತರಹದ ಜುಬ್ಬಾ ತೊಡಬೇಕು ಅನಿಸಿ ಬಿಟ್ಟಿತು.

ನನಗೆ ಸಂಗೀತ ಗೊತ್ತು ಆದರೆ ಹಾಡಲಾರೆ, ಹಾಡುವ ಕಂಠ ಸಿರಿಗೆ ಮಾರು ಹೋಗಿ ಆರಾಧಿಸುವೆ. ಗಂಟೆಗಟ್ಟಲೆ ಹಾಡು ಕೇಳುತ್ತ ಗಾಡಿ ಓಡಿಸುವಾಗ ಮನದ ಮೂಲೆಯಲ್ಲಿ ಎಸ್.ಪಿ. ತಲೆ ದೂಗುತ್ತಲೇ ಇರುತ್ತಾರೆ.

‘ಹಾಡು ಯಾರದಾದರೇನು ಗಾನ ನವ ನವೀನ’

ಸಾವಿರ ಹಾಡುಗಳ‌ ಸರದಾರ ಎಸ್.ಪಿ. ನಮಗೆ ದೊಡ್ಡ ಸಂಪತ್ತನ್ನು ಕೊಟ್ಟಿದ್ದಾರೆ. ನೋವೆಂಬ ನಂಜ ನುಂಗುವ, ಮನಸಿಗೆ ಆಹ್ಲಾದ ನೀಡುವ ಹಾಡುಗಳ ಸರಮಾಲೆ ಧರಿಸಿ ನಮ್ಮ ನೋವ ಮರೆಯುವಾಗಲೆಲ್ಲ ಚಿರಸ್ಥಾಯಿಯಾಗಿ ನೆಲೆಗೊಳ್ಳುತ್ತಾರೆ; ಕೇಳುಗರ ಕಿವಿಯಲ್ಲಿ, ಹಾಡುವವರ ಕಂಠ ಸಿರಿಯಲ್ಲಿ.

ಎಸ್ಪಿಬಿ ಅವರ ಕೆಲವು ಹಿಟ್ ಹಾಡುಗಳನ್ನು ಕೇಳಿ…

https://www.youtube.com/watch?v=Pnovtrq9FEI
Leave a Reply

Your email address will not be published. Required fields are marked *

You May Also Like

ಈ ನಟ ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲಿಗ!

ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ.

ಪ್ರಕಾಶ್ ರೈಗೆ ಧನ್ಯವಾದ ಅರ್ಪಿಸಿದ ನಟ ಧನುಷ್!

ನಟ ಪ್ರಕಾಶ್‌ ರೈಗೆ ದೇಶದ ಬಹುತೇಕ ಭಾಷೆಗಳ ಅಭಿಮಾನಿಗಳಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಪ್ರೇಕ್ಷಕರಿಗೂ ಪರಿಚಿತರು. ಸದ್ಯ ಇಂತಹ ನಟ ಧನುಷ್ ಅವರಿಗೆ ಕಂಗ್ರಾಟ್ಸ್ ಹೇಳಿದ್ದಾರೆ.