‘ನಿಜವಾದ ಅಯೋಧ್ಯೆ ಇರುವುದು ಭಾರತದಲ್ಲಲ್ಲ ನೇಪಾಳದಲ್ಲಿ. ದೇವರು ರಾಮ ಭಾರತೀಯನಲ್ಲ, ನೇಪಾಳಿ’ ಎಂದು ನೇಪಾಳ ಪ್ರಧಾನಿ ಪ್ರತಿಪಾದಿಸಿದ್ದಾರೆ.
ನವದೆಹಲಿ: ರಾಮನ ಜನ್ಮಸ್ಥಳ ಎಂದು ಕೋಟ್ಯಂತರ ಹಿಂದೂಗಳು ನಂಬುವ ಪುರಾತನ ಪಟ್ಟಣ ಅಯೋಧ್ಯೆ ನೈಜದಲ್ಲಿ ನೇಪಾಳದ ಕಠ್ಮಂಡುವಿನ ಸಮೀಪದ ಒಂದು ಗ್ರಾಮ ಎಂದು ನೇಪಾಳದ ಪ್ರಧಾನ ಮಂತ್ರಿ ಕೆ.ಪಿ.ಶರ್ಮಾ ಒಲಿ ಸೋಮವಾರ ಹೇಳಿದ್ದು, ರಾಮನ ಅನುಯಾಯಿಗಳ ಪ್ರತಿಕ್ರಿಯೆಗೆ ಪ್ರಚೋದಿಸುವ ಯತ್ನ ಮಾಡಿದ್ದಾರೆ. ರಾಮ ಭಾರತೀಯನೇ ಅಲ್ಲ, ಆತ ನೇಪಾಳಿ ಎಂದು ಅವರು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತವು ಸಾಂಸ್ಕೃತಿಕ ದಬ್ಬಾಳಿಕೆ ಮತ್ತು ಅತಿಕ್ರಮಣ ನಡೆಸುತ್ತಿದೆ. ವಿಜ್ಞಾನಕ್ಕೆ ನೇಪಾಳದ ಕೊಡುಗೆಯನ್ನು ಅಪಮೌಲ್ಯಗೊಳಿಸಲಾಗಿದೆ ಎಂದು ಅಪಾದಿಸಿದ್ದಾರೆ.
‘ಹೊರಗಿನಿಂದ ಸಾಕಷ್ಟು ಜನ ಬರುತ್ತಿರುವುದರಿಂದ ಕೋವಿಡ್ ನಿಯಂತ್ರಣ ಕಷ್ಟವಾಗಿದೆ. ಚೀನಾ ಮತ್ತು ಇಟಾಲಿಯನ್ ವೈರಸ್ ಗಿಂತ ಭಾರತೀಯ ವೈರಸ್ ಹೆಚ್ಚು ಅಪಾಯಕಾರಿ ಎಂದು ಈಗ ಅರ್ಥವಾಗಿದೆ. -ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ (ಮೇ ತಿಂಗಳಿನಲ್ಲಿ ಹೇಳಿದ್ದು)

‘ಸೀತೆಯನ್ನು ರಾಜಕುಮಾರ ರಾಮನಿಗೆ ಕೊಟ್ಟೆವು ಎಂದು ನಾವು ಇಂದಿಗೂ ನಂಬುತ್ತೇವೆ, ಆದರೆ ಅಯೋಧ್ಯೆಯ ರಾಮನನ್ನೂ ನಾವು ಕೊಟ್ಟಿದ್ದೇವೆ, ಆದರೆ ಅದು ಭಾರತದ ಅಯೋಧ್ಯೆಯಲ್ಲ. ನೇಪಾಳದ ಬಿರ್ಗುಂಜ್ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ ಅಯೋಧ್ಯೆ’ ಎಂದು ಪ್ರಧಾನಿ ಒಲಿ ಪ್ರತಿಪಾದಿಸಿದ್ದಾರೆ.
‘ಸ್ವಲ್ಪ ಮಟ್ಟಿಗೆ ನಾವು ಸಾಂಸ್ಕೃತಿಕವಾಗಿ ತುಳಿಯಲ್ಪಟ್ಟಿದ್ದೇವೆ, ಸತ್ಯಗಳನ್ನು ಅತಿಕ್ರಮಿಸಲಾಗಿದೆ’ ಎಂದು ಒಲಿ ಹೇಳಿದರೆಂದು ನೇಪಾಳದ ‘ಸೇತೊಪತಿ ಡಾಟ್ಕಾಂ’ ವರದಿ ಮಾಡಿದೆ.
ನೇಪಾಳ ಮಾಧ್ಯಮಗಳನ್ನು ಉಲ್ಲೇಖಿಸಿ ಎಎನ್ಐ ಟ್ವೀಟ್ ಮಾಡಿದ್ದು, ‘ನಿಜವಾದ ಅಯೋಧ್ಯೆ ಇರುವುದು ಭಾರತದಲ್ಲಲ್ಲ, ನೇಪಾಳದಲ್ಲಿ. ದೇವರು ರಾಮ ಭಾರತೀಯನಲ್ಲ, ನೇಪಾಳಿ’ ಎಂದು ಪ್ರಧಾನಿ ಹೇಳಿದ್ದಾರೆ ಎಂದು ತಿಳಿಸಿದೆ.
ಚೀನಾದ ಚಿತಾವಣೆಯಿಂದ ನೇಪಾಳ ತನ್ನ ಭೂಪಟದಲ್ಲಿ ನಮ್ಮ ಪ್ರದೇಶಗಳನ್ನು ಸೇರಿಸಿಕೊಂಡಿದೆ. ಅದರ ಮುಂದುವರೆದ ಭಾಗವಾಗಿ ಈಗ ಶ್ರೀರಾಮನು ಭಾರತೀಯನಲ್ಲ ಎಂಬ ಆಧಾರ ರಹಿತ ಹೇಳಿಕೆ ಕೊಡುತ್ತಿದ್ದಾರೆ. ಆದರೆ ನಾವು ಅವರ ನಂಬಿಕೆ ಭಾವನೆಗಳಿಗೆ ಗೌರವ ಕೊಡುತ್ತೇವೆ. ಮೋಹನ್ ಮಾಳಶೆಟ್ಟರ್, ಬಿಜೆಪಿ ಗದಗ ಜಿಲ್ಲಾಧ್ಯಕ್ಷ

ಸದ್ಯ ಭಾರತ ಮತ್ತು ನೇಪಾಳ ನಡುವಿನ ಬಾಂಧವ್ಯದಲ್ಲಿ ಬಿರುಕು ಸಂಭವಿಸಿದೆ. ಇತ್ತೀಚೆಗೆ ನೇಪಾಳವು ಹೊಸ ಭೂ ನಕ್ಷೆಯನ್ನು ಅಂಗೀಕರಿಸಿದ್ದು ಅದರಲ್ಲಿ ಗಡಿಭಾಗದ ಲಿಂಪಿಯೆಧುರಾ, ಕಾಲಾಪಾನಿ ಮತ್ತು ಉತ್ತರಾಖಂಡದಲ್ಲಿರುವ ಲಿಪುಲೇಖ್ ತನಗೆ ಸೇರಿದ ಪ್ರದೇಶಗಳೆಂದು ಪ್ರತಿಪಾದಿಸುತ್ತಿದೆ.
ಕಳೆದ ತಿಂಗಳು ನೇಪಾಳದ ಸಂಸತ್ ಮತ್ತು ನ್ಯಾಷನಲ್ ಅಸೆಂಬ್ಲಿಗಳು, ಭಾರತದ 3 ಪ್ರದೇಶಗಳು ನೇಪಾಳಕ್ಕೆ ಸೇರಿದ್ದು ಎಂದು ತೋರಿಸುವ ಹೊಸ ನಕಾಶೆಯನ್ನು ಅವಿರೋಧವಾಗಿ ಅನುಮೋದಿಸಿವೆ.
ಈ ಮೂರೂ ಪ್ರದೇಶಗಳು ಚೀನಾ ಗಡಿಗೆ ಹತ್ತಿಕೊಂಡ ಮಹತ್ವದ ಪ್ರದೇಶಗಳಾಗಿದ್ದು, 1962ರ ಯುದ್ಧದ ನಂತರ ಭಾರತ ಈ ಪ್ರದೇಶಗಳನ್ನು ಕಾವಲು ಕಾಯುತ್ತಿದೆ.
ನೇಪಾಳದ ಪ್ರತಿಪಾದನೆ ತಿರಸ್ಕರಿಸಿದ್ದ ಭಾರತವು, ಅವು ಮೊದಲಿನಿಂದಲೂ ನಮ್ಮ ಭಾಗಗಳು. ನೇಪಾಳ ನಮ್ಮ ಸಾರ್ವಭೌಮತೆಯನ್ನು ಗೌರವಿಸಬೇಕು. ನಕ್ಷೆಯಲ್ಲಿ ಮಾಡಿರುವ ಕೃತಕ ಅತಿಕ್ರಮಣವನ್ನು ತಳ್ಳಿ ಹಾಕುತ್ತೇವೆ ಎಂದು ಪ್ರತಿಕ್ರಿಯೆ ನೀಡಿತ್ತು.