ಭಾಳ್ ದುಡಿಕಿಲೆ ಅಂಗಡಿ ಹಾಕಾಕ್ ನಿಂತಿದ್ದ ತಿಪ್ಪಾ. ಆಗ ಬಂದ ಯಲ್ಲಾ, ಯಾಕಲೇ ತಿಪ್ಪ ಇಷ್ಟ ದುಡಿಕಿಲೇ ಅಂಗಡಿ ಕದಾ ಹಾಕಾಕತ್ತಿಯಲ್ಲಾ? ಅನೌನು ಎರಡ್ ತಿಂಗಳ್ ಹೊತ್ತಾತು ಗಡ್ಡದಾಗೂ ಸೀರ ಸೇರುವಂಗಾಗ್ಯಾವು, ಕೆರದ್ , ಕೆರದ್ ತಲಿ ಕೆಟ್ ಹೋಗೈತಿ. ಅದಕ್ ಇವತ್ತು ಕಷ್ಟದ ಅಂಗಡಿ ಚಾಲೂ ಅಂದಿದ್ದಕ್ಕ ನಾನು ದುಡಿಕಿಲೇ ಬಂದೇ ಅಷ್ಟರಾಗ್ ನೀನಾ ಅಂಗಡಿ ಕದಾ ಹಾಕ್ಕೊಂಡು ಹೊಂಟ್ಯಲ್ಲಾ ಅಂದ ಯಲ್ಲಾ.
ಏನ್ ಮಾಡೋದೋ ಯಲ್ಲಪ್ಪ, ಈ ಹಾಳಾದ್ ಕೊರೋನಾ ಕಾಟ ಒಂದ್ ಕಡೆ, ದಂಧೆ ಬಂದ್ ಆಗಿ ಕೈ ಕಟ್ ಆದಂಗ ಆಗಿತ್ತು. ಅದಕ್ಕ ಇವತ್ತು ಕಟಿಂಗ್ ಅಂಗಡಿ ಚಾಲೂ ಮಾಡಬಹುದು ಅಂತ ಬಂದಿದ್ದಕ್ಕ ಲಗೂನಾ ಎದ್ದ ಬಂದ್ ಕಸಾ ಹೊಡದು ಇನ್ನೇನು ಉದ್ದನಕಡ್ಡಿ ಹಚ್ಚಬೇಕು ಅನ್ನಾದ್ರಾಗ ಸರ್ಕಾರದ ಒಂದು ಆದೇಶ ಬಂದಿದ್ದ ಕೇಳಿ ಗೌಡ್ರ ಮನಿ ಹಾದಿ ಹಿಡಿಯಾಕತ್ತಿನಿ ನೋಡಪಾ.
ಹೋಗಾದ ಹೊಕ್ಕಿ ನಂಗ ದಾಡಿ ಮಾಡಿಯಾದ್ರು ಹೋಗೋ ತಿಪ್ಪಾ, ನನ್ನ ಮುಖಾ ಅನ್ನಾದು ಕರಡಿದಾದಂಗ ಆಗೈತಿ. ಅಯ್ಯೋ ನಂಗೇನ್ ದಂಧೆ ಬ್ಯಾಡ್ ಆಗಿಲ್ಲ, ಅಂಗಡಿ ತಗದ್ರ ಒಂದ ಸಂಕಟ, ಬಂದ್ ಮಾಡಿದ್ರ ಮತ್ತೊಂದು ಸಂಕಟ ಆದಂಗಾಗೈತಿ ಅಂದ ತಿಪ್ಪಾ.
ಹೌದಾ!, ಅಂಥದ್ದೇನ್ ಆಗೈತೋ ತಿಪ್ಪಾ ಅಂತ ಯಲ್ಲಾ ಕೇಳಿದ.
ಏನಿಲ್ಲಪಾ ಈ ಕೊರೋನಾ ಕಾಟದಿಂದ ಸರ್ಕಾರ ಸಲೂನ್ ಅಂಗಡಿ ತಗಿಬೇಕು ಅಂದ್ರ ನೂರೆಂಟ್ ನಿಯಮ ಮಾಡ್ಯಾರಾ. ಅಂಗಡಿ ಬಾಗಲದಾಗ ಸ್ಯಾನಿಟೈಸರ್ ಇಟ್ಟಿರಬೇಕು, ನಾವು ಮಾಸ್ಕ್, ಎಫ್ರಾನ್, ಜೊತಿಗೆ ತಲಿಗೆ ಹಾಕ್ತಾರಲ್ಲೋ ಅದಕ್ಕೇನಾ ಅಂತಾರ ಹುಂ! ಅದನ್ನ ಹಾಕಬೇಕಂತಾ? ಇವುನ್ನ ತುಗೊಬೇಕು ಅಂದ್ರ ಇದ್ದ ಎರಡು ಎಕರೆ ಹೊಲಾನು ಲಾವಣಿ ಹಾಕಿನಿ. ಇನ್ನು ಇದನ್ನೆಲ್ಲ ಹ್ಯಾಂಗ್ ತಗೊಬೇಕು‌? ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇರುವವರಿಗೆ, ಮಾಸ್ಕ್ ಹಾಕದ ಬರುವವರಿಗೆ ಅಂಗಡಿ ಒಳಗ್ ಕರ್ಕೊ ಬ್ಯಾಡ್ರಿ ಅಂತಾರ. ಅಂಥವರಿಗೆ ನಾನೇನಾದ್ರು ಹೇಳಿದ್ರ ಲೇ ಮಗನಾ ತಿಪ್ಪಾ ಯಾಕ್ ಹ್ಯಾಂಗೈತಿ ಮೈಯಾಗ್ ಅಂತಾರ. ಸುಮ್ನ ಜನಕ್ ಕೆಟ್ಟಾಂವ್ ಆಗಬೇಕು. ಒಬ್ಬರಿಗೆ ಬಳಸಿದ ಟವಲ್, ಪೇಪರ್ ಶೀಟ್ ಬ್ಯಾರೆವರಿಗೆ ಬಳಸುವಂಗಿಲ್ಲಂತ. ಒಂದು ದಾಡಿಗೆ 10-15 ರೂಪಾಯಿ ಕಮಾಯಿ ಅಷ್ಟ ನಂದು. ಟವಲ್, ಪೇಪರ್ ಶೀಟ್ ತರಬೇಕಂದ್ರ ಸಾಲಾ ತರಾಕ್ ನನ್ನ ಹತ್ರ ಏನು ಇಲ್ಲ. ಒಬ್ಬರಿಗೆ ಬಳಸಿದ ವಸ್ತುಗಳನ್ನು ಮತ್ತೊಬ್ಬರಿಗೆ ಬಳಸುವುದಕ್ಕೂ ಮೊದಲ ಶೇ.7ರಷ್ಟು ಲೈಸಾಲ್ ಹಾಕಿ ಅರ್ಧಾ ತಾಸ್ ನೆನೆ ಇಟ್ಟು ಸ್ವಚ್ಛ ಮಾಡಬೇಕಂತ.
ಅಂಗಡ್ಯಾಗ ಈಗ ಇರೋ ವಸ್ತುಗಳನ್ನು ಹೆಚ್ಚು ಸೆಟ್ ಇಡಬೇಕಂತಾ? ಈಟ್ ಸಾಮಾನ್ ಖರೀದಿ ಮಾಡಿ ಒಂದ್ ಸಣ್ಣ ಅಂಗಡಿ ಇಟ್ಕೊಳ್ಳೋದ್ರಾಗ ನಂದ್ ನನಗಾಗೈತಿ. ಕಪಾಟ್ ಮಾಡಿಕೊಟ್ಟ ಬಡಿಗಿ ದೇವಪ್ಪಗ ಇನ್ನ ರೊಕ್ಕಾ ಕೊಟ್ಟಿಲ್ಲ. ಅಂಥಾದ್ರಾಗ್ ಇವನ್ನೆಲ್ಲ ಪಾಲನೆ ಮಾಡಕಾ? ನನಗ ಆಕ್ಕೈತೇನು ನೀನಾ ಹೇಳು? ಯಲ್ಲಪ್ಪಾ ಅಂದ ತಿಪ್ಪಣ್ಣ.
ಮೊದ್ಲ ಮುಖದ್ ತುಂಬ ಗಡ್ಡ ಬೆಳಸ್ಕೊಂಡ ಯಲ್ಲಪ್ಪ ಮುಖ ಕರ್ಕೊಂತಾ, ಅಲ್ಲೋ ತಿಪ್ಪಾ ಇದು ನಿನ್ನೊಬ್ಬಂದ ಸಮಸ್ಯೆ ಅಲ್ಲ, ಈ ರಾಜ್ಯದಾಗ ಇರೋ ಭಾಳ್ ಹಳ್ಳ್ಯಾಗ ನಿನ್ನಂಗ್ ಭಾಳ್ ಮಂದಿ ಅದಾರ. ಅವ್ರ ಗತಿ ಏನು? ಮೊದ್ಲ ಎರಡ್ ತಿಂಗಳ್ ದಿಂದ ದುಡಿಮಿಲ್ದ ಕೈ ಖಾಲಿಯಾಗ್ಯಾವು. ಈಗ್ ಇವನ್ನೆಲ್ಲ ಮಾಡ್ರಿ ಅಂದ್ರ ಹ್ಯಾಂಗ್? ಸರ್ಕಾರ ಮೊದ್ಲ ಇದಕ್ಕೇನಾರ ಉಪಾಯ ಹುಡುಕಬೇಕಿತ್ತು. ಚೂರ್ ಚಾರು ಸಹಾಯ ಮಾಡಬೇಕಿತ್ತು. ಅಂದ್ರ ನಿನ್ನಂಥೋರಿಗೆ ಅನುಕೂಲ ಆಗ್ತಿತ್ತು ಅಂದ.
ಅದಕ್ಕ ತಿಪ್ಪಾ ಹೇಳಿದಾ ಈ ಸರ್ಕಾರದವರು ಪ್ಯಾಟ್ಯಾಗಿನ ಕಷ್ಟದ ಅಂಗಡಿ ನೋಡಿ ಇಂಥ ಕಾನೂನು ಮಾಡಿದ್ರ ನಮ್ಮಂಥವರ ಪರಿಸ್ಥಿತಿ ಹ್ಯಾಂಗ್. ನಮ್ಮಪ್ಪ, ಅಜ್ಜ ಆಯಕ್ಕಾಗಿ ಕಷ್ಟ ಮಾಡಿದವ್ರು. ನಾನೇನು ಸಣ್ಣದಾಗಿ ದಂಧೆ ಚಾಲೂ ಮಾಡಿದ್ರ ಈಗ ಸರ್ಕಾರದ ಕಾನೂನು ನೋಡಿ ಏನು ತಿಳಿವಲ್ದು. ಸರ್ಕಾರದವ್ರು ಹಿಂಗೆಲ್ಲ ಮಾಡ್ಯಾರ ಅಂತ ಜನ್ರ ಹತ್ರಾ ಹೆಚ್ಚಿಗಿ ರೊಕ್ಕಾ ತಗೊಳ್ಳಾಕ್ ಆಗತ್ತೇನಪಾ. ಪಾಪ ನನ್ನಂಗ ಜನ್ರ ಪರಿಸ್ಥಿತಿ. ಒಂದ್ ಕಡೆ ಅಂಗಡಿ ಕದಾ ಹಾಕಿದ್ರ ಹೊಟ್ಟಿಗೇನು ಅನ್ನೋ ಚಿಂತಿ, ಅಂಗಡಿ ತಗದ್ರ ನಿಭಾಯಿಸೋ ಶಕ್ತಿ ನಂಗಿಲ್ಲ. ಅದಕ್ಕ ದಿಕ್ ತಿಳಿದ ಊರ್ ಗೌಡ್ರ ಮನಿಗೆ ಸಾಲಾ ಕೇಳಿದ್ರಾತು ಅಂತ ಹೊಂಟಿದ್ನೋಡಪಾ.
ಆಗ ಯಲ್ಲಪ್ಪ ಏನಾರ ಯಾಕಾಗ್ಲಿ ಇಂಥ ಕಷ್ಟದ ಪರಿಸ್ಥಿತಿಯಾಗ ಎಲ್ಲರ್ನು ಗಮನಕ್ಕ್ ತಗೊಂಡು ಸರ್ಕಾರ ಕಾನೂನು ಮಾಡಬೇಕು‌. ಬರೀ ಪ್ಯಾಟ್ಯಾನ್ ಮಂದಿನ ನೋಡಿದ್ರ ನಿನ್ನಂಥ ನೂರಾರು ಮಂದಿ ಸ್ಥಿತಿ ಹ್ಯಾಂಗ್? ಅಂದ. ಯಲ್ಲಪ್ಪನ್ ಮಾತ ಮಲಕ್ ಹಾಕ್ಕೊಂತ ತಿಪ್ಪಾ ಗೌಡ್ರ ಮನಿ ಹಾದಿ ಹಿಡಿದ..

ಮಾತಿನ ಮಲ್ಲ

Leave a Reply

Your email address will not be published. Required fields are marked *

You May Also Like

ವಿಧಾನಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜಾಣತನಕ್ಕೆ ಶಾಸಕ ಎಚ್ಕೆ ಪಾಟೀಲರ ಜಾಣ ಉತ್ತರ

ಸಾರ್ವಜನಿಕ ಲೆಕ್ಕ ಪತ್ರ ಸಮೀತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಈಗಾಗಲೇ ವಿಧಾನಸಭಾಧ್ಯಕ್ಷರಿಗೆ ಸಭೆ ನಡೆಸುವ ಕುರಿತು ಪತ್ರ ಬರೆದಿದ್ದರೂ ಅವರ ಆಪ್ತ ಕಾರ್ಯದರ್ಶಿ ಎಷ್ಟು ದಿನವಾದ್ರು ಪತ್ರ ತಲುಪಿರಲಿಲ್ಲ ನಿನ್ನೆಯಷ್ಟೆ ಪತ್ರ ತಲುಪಿದೆ ಎಂದು ಜಾಣತನ ಪ್ರದರ್ಶಿಸಿದ್ದರು.

ಚಂದನ ಶಾಲೆಯ ಪುಟಾಣಿಗಳ ಕೊರೋನಾ ಜಾಗೃತಿ

ಶಾಲೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಕೊರೋನಾ ಬಗ್ಗೆ ನೀಡಿದ ಜಾಗೃತಿ ಸಂದೇಶ ಅದ್ಭುತವಾದದ್ದು. ಇಂತಹ ಪ್ರಯತ್ನಕ್ಕೆ ಮುಂದಾದ ಚಂದನ್ ಶಾಲೆಯ ಪ್ರಯತ್ನ ಕೂಡ ಸಾಮಾಜಿಕ ಕಾಳಜಿ ತೋರಿಸುವಂತಹದ್ದು.

ಕೊವಿಡ್-19 ಸೋಂಕು: ಉಸಿರಾಟದ ಸಮಸ್ಯೆ ಸ್ಥಳದಲ್ಲೇ ಪರೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

ಗದಗ : ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ 9…

ಪ್ರಾಣಿಗಳೊಂದಿಗೆ ನಿಮ್ಮ ಹೇಡಿತನ ಪ್ರದರ್ಶನ ಬೇಡ : ವಿರಾಟ್ ಕೊಹ್ಲಿ

ಪ್ರಾಣಿಗಳೊಂದಿಗೆ ಹೇಡಿತನ ಪ್ರದರ್ಶಿಸಬೇಡಿ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.