ಹೋಂ ಕ್ವಾರಂಟೈನ್ನಲ್ಲಿರುವಾಗ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಶಿಕ್ಷಾರ್ಹ. ಮತ್ತೆ ಹೀಗೆ ಮಾಡಬೇಡಿ ಎಂಬ ತಹಸೀಲ್ದಾರ್ ಸೂಚನೆ ಸರಿಯಾಗಿಯೇ ಇದೆ. ಆದರೆ ಅದನ್ನು 2 ವರ್ಷದ ಮಗುವಿನ ಹೆಸರಿಗೆ ಕಳುಹಿಸಿದ್ದಾರೆ.
ಗದಗ:‘ಹೋಂಕ್ವಾರಂಟೈನ್ ಅವಧಿಯಲ್ಲಿ ದಿನಾಂಕ 6 ರಂದು ಮೊಬೈಲ್ ಸ್ವಿಚ್ಡ್ ಆಫ್ ಮಾಡಲಾಗಿದೆ. ಇದು ವಿಪತ್ತು ನಿರ್ವಹಣಾ ಕಾಯ್ದೆ 2005 ರ ನೇರೆ ಉಲ್ಲಂಘನೆ ಆಗಿದೆ. ಈ ಕಾಯ್ದೆಯ ಕಲಂ 51 ರ ಅಡಿ ಹಾಗೂ ಐಪಿಸಿ ಸೆಕ್ಷನ್ ಕಲಂ 1188 ರ ಅಡಿ ಕಾರಾವಾಸ ಶಿಕ್ಷೆಗೆ ಒಳಪಡುವ ಶಿಕ್ಷಾರ್ಹ ಅಪರಾಧವಾಗಿದೆ. ಈ ನೋಟಿಸ್ ಎಚ್ಚರಿಕೆ ಎಂದು ಭಾವಿಸಿ,
ಅವಧಿ ಮುಗಿಯುವವರೆಗೆ ಫೋನ್ ಸ್ವಿಚ್ ಆಫ್ ಮಾಡಬಾರದು. ಅವಧಿ ಮಗಿಯುವ ಮುನ್ನವೆ ಫೋನ್ ಸ್ವಿಚ್ ಆಫ್ ಮಾಡಿದರೆ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸಲಾಗುವುದು’ ಎಂದು ಜುಲೈ 7 ರಂದು ಮುಂಡರಗಿಯ ತಹಸೀಲ್ದಾರ್ ಈ ನೋಟಿಸ್ ಕಳಿಸಿದ್ದಾರೆ.
ಅದ್ಯಾವುದೋ ಕಾರಣಕ್ಕೆ ಮೊಬೈಲ್ ಸ್ವಿಚ್ ಆಫ್ ಆಗಿರಬಹುದು ಎಂಬ ಅರಿವೂ ಇರುವ ಕಾರಣ ಅವರು ಮತ್ತೆ ಹೀಗೆ ಮಾಡದಿರಿ ಎಂಬ ಎಚ್ಚರಿಕೆ ನೀಡಿದ್ದಾರೆ.
ಆದರೆ ಶ್ರೀಮತಿ ಎಂಬ ಸಂಭೋದನೆಯಲ್ಲಿ ಅವರು ಕಳಿಸಿರುವ ನೋಟಿಸ್ 2 ವರ್ಷದ ಮಗುವಿನ ಹೆಸರಿನಲ್ಲಿದೆ. ಇಲ್ಲಿ ಮಗುವಿನ ತಾಯಿಗೆ ನೋಟಿಸ್ ಕಳಿಸುವ ಭರದಲ್ಲಿ ಮಗುವಿನ ಹೆಸರು ನಮೂದಾಗಿರಬಹುದು. ಅಥವಾ ಮಗುವಿನ ಹೆಸರ ಮುಂದೆ ತಂದೆ-ತಾಯಿ ಮೊಬೈಲ್ ಬರೆಸುತ್ತಾದ್ದರಿಂದ, ಮಗುವಿನ ಹೆಸರಿಗೇ ಕಳಿಸಬೇಕಾದ ಆಡಳಿತಾತ್ಮಕ ಅನಿವಾರ್ಯತೆಯಿಂದ ಕಳಿಸಿರಬಹುದು. ಕಳಿಸುವಾಗ ರೂಢಿಗತದಂತೆ ಟೈಪ್ ಮಾಡುವವರು ಶ್ರೀಮತಿ ಎಂದು ಟೈಪ್ ಮಾಡಿರಬಹುದು.
‘ನೀವು ವಿದೇಶದಿಂದ ಬಂದಿದ್ದು’ ಎಂಬ ವಾಕ್ಯ ನೋಟಿಸ್ ನಲ್ಲಿದೆ. ಮಗು ತಂದೆ-ತಾಯಿ ಅಥವಾ ಇತರ ಪೋಷಕರ ಜೊತೆಗೆ ವಿದೇಶ ಪ್ರಯಾಣ ಮಾಡಿರುತ್ತದೆ ಅಷ್ಟೇ. ಹೀಗಿದ್ದಾಗ, ಬಹುಷ: ತಾಯಿಗೆ ಕಳಿಸಬೇಕಾದ ನೋಟಿಸ್ ಮಗುವಿನ ಹೆಸರಲ್ಲಿ ಹೋಗಿ ಪ್ರಮಾದವಾಗಿದೆ.
ಏನಾದರೂ ಇರಲಿ, ಇದು ದೊಡ್ಡ ವಿಷಯ ಆಗಬಾರದು. ಹೋಂ ಕ್ವಾರಂಟೈನ್ನಲ್ಲಿದ್ದವರು ಹೊರಗೆ ಹೋಗಬಾರದು ಎಂಬ ಉದ್ದೇಶಕ್ಕೆ ಮೊಬೈಲ್ ಟ್ರ್ಯಾಕ್ ಮಾಡಲಾಗುತ್ತಿದೆ. ಮುಂಡರಗಿಯಲ್ಲಂತೂ ಅಂತಾ ಪರಿ ವಿದ್ಯುತ್ ವ್ಯತ್ಯಯವಿಲ್ಲ. ಹೀಗಾಗಿ ಹೋಂ ಕ್ವಾರಂಟೈನ್ನಲ್ಲಿರುವವರು ಆದಷ್ಟು ಮೊಬೈಲ್ ಸ್ವಿಚ್ ಆಫ್ ಮಾಡದೇ ಅಥವಾ ಸ್ವಿಚ್ ಆಫ್ ಆಗದಂತೆ ಈ ಸಂದರ್ಭದಲ್ಲಿ ಸಹಕರಿಸಿದರೆ ಅವರಿಗೂ ಕ್ಷೇಮ, ಆಡಳಿತಕ್ಕೂ ಸಲೀಸು.
ಕೊನೆದಾಗಿ, ಹೀಗೆ ನೋಟಿಸ್ ಕಳಿಸುವಾಗ ಪ್ರಮಾದವಾಗದಂತೆ ನೋಡಿಕೊಳ್ಳುವುದೂ ತಹಸೀಲ್ದಾರ್ ಜವಾಬ್ದಾರಿ ಕೂಡ.