ಆರೋಗ್ಯ ಸಚಿವ ಮತ್ತು ಮೇಯರ್ ಸೃಷ್ಟಿಸಿದ ಗೊಂದಲಕ್ಕೆ ತೆರೆ ಬಿದ್ದಿದ್ದು, ಐಶ್ವರ್ಯಾ ಮತ್ತು ಮಗಳಿಗೆ ಪಾಸಿಟಿವ್ ಇರುವುದು ಪಕ್ಕಾ ಎಂದು ಎರಡನೇ ಪರೀಕ್ಷಾ ವರದಿ ತಿಳಿಸಿದೆ.
ಮುಂಬೈ: ಐಶ್ವರ್ಯ ರೈ ಮತ್ತು ಮಗಳು ಆರಾಧ್ಯಳಿಗೆ ಪಾಸಿಟಿವ್ ಇದೆ ಎಂದು ಎರಡು ಗಂಟೆಗಳ ಹಿಂದೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಟ್ವೀಟ್ ಮಾಡಿದ್ದರು. ನಂತರ ಮುಂಬೈ ಪಾಲಿಕೆ ಮೇಯರ್ ಕಿಶೋರಿ ಪಡ್ನೆಕರ್ ಪಿಟಿಐ ಜೊತೆ ಮಾತನಾಡಿ, ಐಶ್ವರ್ಯ ಮತ್ತು ಆರಾಧ್ಯರಿಗೆ ನೆಗೆಟಿವ್ ಎಂದು ತಿಳಿಸಿದ್ದರು. ಇದು ಜನರಲ್ಲಷ್ಟೇ ಅಲ್ಲ, ಸರ್ಕಾರದಲ್ಲೇ ಗೊಂದಲ ಮೂಡಿಸಿತ್ತು.
ಆಗ ಆರೋಗ್ಯ ಸಚಿವ ತಮ್ಮ ಟ್ವೀಟ್ ಡಿಲೀಟ್ ಮಾಡುವ ಮೂಲಕ ಇನ್ನಷ್ಟು ಗೊಂದಲ ಮೂಡಿಸಿದರು. ಆಮೇಲೆ ಪಾಲಿಕೆ ಅಸಿಸ್ಟಂಟ್ ಕಮೀಶನರ್ ಐಶ್ವರ್ಯ ಮತ್ತು ಆರಾಧ್ಯ ಇಬ್ಬರಿಗೂ ಪಾಸಿಟಿವ್ ಇದೆ ಎಂದು ಸ್ಪಷ್ಟಪಡಿಸಿದ್ದು, ಹೆಲ್ತ್ ಬುಲೆಟಿನ್ನಲ್ಲಿ ಈ ವಿಷಯ ಪ್ರಕಟವಾಗಲಿದೆ ಎಂದಿದ್ದಾರೆ.
ಮೊದಲ ರ್ಯಾಪಿಡ್ ಪರೀಕ್ಷೆಯಲ್ಲಿ ಐಶ್ವರ್ಯ ಮತ್ತು ಆರಾಧ್ಯರಿಗೆ ನೆಗೆಟಿವ್ ಬಂದಿತ್ತು. ನಂತರದ ಎರಡನೇ ಪರೀಕ್ಷೆಯಲ್ಲಿ ಅವರಿಬ್ಬರಿಗೂ ಪಾಸಿಟಿವ್ ಬಂದಿದ್ದು ಪಕ್ಕಾ ಆಗಿದೆ. ಇದೆಲ್ಲದರ ನಡುವೆ ಟಿವಿ ಆಂಕರ್ಗಳು ಇದೊಂದು ರಾಷ್ಟ್ರೀಯ ವಿಷಯ ಎಂಬಂತೆ ತಲೆಗೆ ವಿಪರೀತ ಹಚ್ಚಿಕೊಂಡು ಚರ್ಚೆ ನಡೆಸಿದ್ದಾರೆ!