ಇದು ಅಪರೂಪದ ಹುಲಿ. ದೇಶದಲ್ಲಿ ಈಗ ಒಂದೇ ಒಂದು ಉಳಿದಿದೆ. ಅಸ್ಸಾಮಿನ ಅರಣ್ಯದಲ್ಲಿ ಖ್ಯಾತ ವನ್ಯಜೀವಿ ಫೋಟೊಗ್ರಾಫರ್ ಒಬ್ಬರು ಸೆರೆ ಹಿಡಿದ ಚಿತ್ರಗಳಿವು.
ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಈಗ ಚಿನ್ನದ ಸುಂದರಿಯದ್ದೇ ಸದ್ದು. ಚಿನ್ನದ ನೀರಿನಲ್ಲಿ ಒಂದು ಸಾಧಾರಣ ಹುಲಿಯ ಸ್ನಾನ ಮಾಡಿಸಿದಂತಿದೆ ಈ ಹುಲಿಯ ವರ್ಣ. ಸದ್ಯ ದೇಶದಲ್ಲಿ ಈ ಬಗೆಯ ಹುಲಿ ಒಂದೇ ಒಂದು ಇದ್ದು, ಇದನ್ನು ಖ್ಯಾತ ವನ್ಯಜೀವಿ ಛಾಯಾಗ್ರಹಕ ಮಯೂರೇಶ್ ಹಂದ್ರೆ ಅಸ್ಸಾಮಿನ ಖಜಿರಂಗ ಅರಣ್ಯದಲ್ಲಿ ಸೆರೆ ಹಿಡಿದಿದ್ದಾರೆ.
ಈ ಫೋಟೊಗಳನ್ನು ಟ್ವೀಟರ್ನಲ್ಲಿ ಶೇರ್ ಮಾಡಿರುವ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್, ಈ ಅಪರೂಪದ ಹುಲಿ ಬಗ್ಗೆ ಸಣ್ಣ ಮಾಹಿತಿಯನ್ನೂ ಹಂಚಿಕೊಡಿದ್ದಾರೆ. ಈ ಬಂಗಾರದ ಹುಲಿಯನ್ನು ‘ಟ್ಯಾಬಿ ಟೈಗರ್’, ‘ಸ್ಟ್ರಾ ಬೆರ್ರಿ ಟೈಗರ್’ ಎಂದೂ ಕರೆಯುತ್ತಾರೆ.

ಅದರಲ್ಲಿ ಅಡಗಿರುವ ‘ಹಿಂಜರಿತದ ಜೀನ್’ ಚಿನ್ನದ ಬಣ್ಣಕ್ಕೆ ಕಾರಣ. ಅತಿಯಾದ ಮರಿಗಳನ್ನು ಹಡೆದಾಗ ಈ ಜೀನ್ ಮುನ್ನೆಲೆಗೆ ಬಂದು, ಹುಲಿಯ ಮೈಬಣ್ಣ ಚಿನ್ನದ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ ಎಂದು ಪ್ರವೀಣ ತಿಳಿಸಿದ್ದಾರೆ.
ಕನ್ನಡದಲ್ಲಿ ಹಿಂದೆ ವಿಷ್ಣುವರ್ಧನ್ ನಟಿಸಿದ್ದ ಬಂಗಾರದ ಜಿಂಕೆ ಎಂಬ ಸಿನಿಮಾ ಒಂದು ಬಂದಿತ್ತು. ಅದರಲ್ಲಿ ಚಿನ್ನದಿಂದ ಮಾಡಿದ ಜಿಂಕೆಯ ಮೂರ್ತಿ ಪಡೆಯಲು ಹರಸಾಹಸ ಮಾಡುವ ಕತೆಯಿದೆ. ಆದರೆ ಈ ಬಂಗಾರದ ಹುಲಿಯಲ್ಲಿ ಬಂಗಾರವಿಲ್ಲ, ಬಂಗಾರದ ಬಣ್ಣ ಮಾತ್ರವಿದೆ.