ಸದ್ಯ ಸಿಎಂ ಯಡಿಯೂರಪ್ಪ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡೀಯೋ ಸಂವಾದ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಅಭಿಪ್ರಾಯ ಆಧರಿಸಿ ಬೆಂಗಳೂರಿನಂತೆ ಇನ್ನು ಕೆಲವು ಜಿಲ್ಲೆಗಳಲ್ಲಿ ವಾರದ ಮಟ್ಟಿಗಿನ ಲಾಕ್ ಡೌನ್ ಜಾರಿ ಮಾಡಬಹುದು ಎನ್ನಲಾಗಿದೆ.
ಗದಗ: ಮುಖ್ಯಮಂತ್ರಿ ಯಡಿಯೂರಪ್ಪ ಸೋಂಕು ತೀವ್ರವಾಗಿ ಏರಿಕೆ ಕಾಣುತ್ತಿರುವ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಇಂದು 11 ಗಂಟೆಗೆ ವಿಡಿಯೋ ಸಂವಾದ ಆರಂಭಿಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ರಾಯಚೂರು ಮತ್ತು ಗದಗ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಸಂವಾದದಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲಾಧಿಕಾರಿಗಳ ಅಭಿಪ್ರಾಯ ಪಡೆದ ನಂತರ, ಆಯಾ ಜಿಲ್ಲೆಗಳಲ್ಲಿ 7 ದಿನದ ಲಾಕ್ ಡೌನ್ ಅಗತ್ಯವಿದೆಯೇ ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ.
ಕಳೆದ 10 ದಿನಗಳಿಂದ ಸೋಂಕು ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡಿರುವ ಗದಗ ಜಿಲ್ಲೆ ಈಗ ಸೋಂಕು ಏರುತ್ತಿರುವ 10 ಜಿಲ್ಲೆಗಳ ಪಟ್ಟಿಯಲ್ಲಿದೆ. ಬೆಂಗಳೂರಿನಂತೆ ಉಳಿದ 8 ಜಿಲ್ಲೆಗಳಲ್ಲೂ ಒಂದು ವಾರ ಕಾಲದ ಲಾಕ್ ಡೌನ್ ವಿಧಿಸುವ ಆಲೋಚನೆ ಸರ್ಕಾರಕ್ಕಿದೆ ಎನ್ನಲಾಗಿದೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಚಿವ ಅಶೋಕ್ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಗದಗ ಜಿಲ್ಲೆಯೂ 7 ದಿನಗಳ ಲಾಕ್ ಡೌನ್ ಗೆ ಒಳಪಡಲಿದೆಯೇ ಎಂಬುದು ಸಂಜೆ ಹೊತ್ತಿಗೆ ತಿಳಿಯಲಿದೆ.