ನವದೆಹಲಿ: ಒಂದೇ ದಿನ ದೇಶದಲ್ಲಿ 24,248 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ, ಮಹಾಮಾರಿಗೆ 425 ಜನರು ಬಲಿಯಾಗಿದ್ದಾರೆ ಎಂದು ಸೋಮವಾರ ಮಧ್ಯಾಹ್ನ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ದೇಶದಲ್ಲಿ 6,97,413 ಪ್ರಕರಣಗಳಲ್ಲಿ 2,53,287 ಪ್ರಕರಣಗಳು ಸಕ್ರೀಯವಾಗಿವೆ. ದೇಶದಲ್ಲಿ ಇದುವರೆಗೂ ಕೊರೊನಾದಿಂದ 19,693 ಜನ ಸಾವನ್ನಪ್ಪಿದ್ದಾರೆ.
ಪ್ರಪಂಚದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೆ 1ಕೋಟಿ ಕೊರೊನಾ ಪರೀಕ್ಷೆ ನಡೆದಿದ್ದು, ಇದು ದೇಶದ ಜನಸಂಖ್ಯೆಗೆ ಹೋಲಿಸಿದರೆ ಕೇವಲ ಶೇ.007 ಮಾತ್ರ. ಅಂದರೆ ಪ್ರತಿ ನೂರು ವ್ಯಕ್ತಿಗಳಿಗೆ ಒಂದಕ್ಕಿಂತ ಕಡಿಮೆ ಪರೀಕ್ಷೆ. ಭಾನುವಾರ ಒಂದೇ ದಿನ 1,80,596 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿಶ್ವದಲ್ಲಿ ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನ ತಲುಪಿದೆ. ಅಮೆರಿಕ ಮತ್ತು ಬ್ರೆಜಿಲ್ ಮೊದಲೆರಡು ಸ್ಥಾನಗಳಲ್ಲಿವೆ. ಅಮೆರಿಕಾದಲ್ಲಿ 29,82,928, ಬ್ರೆಜಿಲ್ ನಲ್ಲಿ 16,04,585 ಮಂದಿಗೆ ಕೊರೊನಾ ಸೋಂಕು ತಗುಲಿದೆ. ರಷ್ಯಾ, ಪೆರು, ಸ್ಪೇನ್ ಕ್ರಮವಾಗಿ 4, 5 ಮತ್ತು 6ನೇ ಸ್ಥಾನದಲ್ಲಿವೆ. ಇನ್ನೂ ಚೀನಾ 22ನೇ ಸ್ಥಾನದಲ್ಲಿದೆ.