ಗದಗ: ಮುಂಜಾನೆ ಮರಳಿ ಬಾರದ ಲೋಕಕ್ಕೆ ಅಪ್ಪ ಹೋಗಿದ್ದಾನೆ. ಮನೆ ತುಂಬ ದು:ಖದ ವಾತಾವರಣ. ನೆರೆಹೊರೆಯವರು, ಸಂಬಂಧಿಕರು ಜಮಾಯಿಸುತ್ತಿದ್ದಾರೆ. ಈ ದುಗೂಡದಲ್ಲಿಯೂ ಗದಗಿನ ಈಶ್ವರ ನಗರದ ನಿವಾಸಿ, ತೋಂಟದಾರ್ಯ ಪ್ರೌಢ ಶಾಲೆಯ ವಿದ್ಯಾರ್ಥಿನಿ 16ರ ಬಾಲಕಿ ಪಾಲಿಗೆ ಇವತ್ತಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಕೇವಲ ಪರೀಕ್ಷೆ ಆಗಿರಲಿಲ್ಲ. ಇದು ಅಗ್ನಿ ಪರೀಕ್ಷೆ, ಧರ್ಮ ಪರೀಕ್ಷೆ.

ಮನೆ ತುಂಬ ಅಳು, ರೋಧನೆ ತುಂಬಿರುವ ಹೊತ್ತಿನಲ್ಲಿ ದು:ಖವನ್ನು ಒತ್ತಿ ಅದುಮಿಕೊಂಡ ಆ ಹುಡುಗಿ, ಹಾಲ್ ಟಿಕೆಟ್, ಮಾಸ್ಕ್, ಪೆನ್ನು ಅಂತೆಲ್ಲ ಹುಡುಕಾಡುತ್ತ ಒಂದು ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟಳು. ಯಾವ ಕಾರಣಕ್ಕೂ ಪೇಪರ್ ಬರೆಯೋದನ್ನು ಬಿಡಬಾರದು ಎಂದು ನಿರ್ಧರಿಸಿದ ಅನುಷಾ ಇವತ್ತು ಎಸ್.ಎಸ್.ಎಲ್.ಸಿ ತೃತೀಯ ಭಾಷಾ ಪೇಪರ್ ಬರೆಯುವ ಮೂಲಕ ತನ್ನ ಭವಿಷ್ಯದ ಅಮೂಲ್ಯ ಒಂದು ವರ್ಷವನ್ನು ಕಾಪಾಡಿಕೊಂಡಿದ್ದಾಳೆ.

ಗದಗ ನಗರದ ಅನುಷಾ ಭಜಂತ್ರಿ ಆತಂಕ, ದು:ಖಗಳ ನಡುವೆಯೇ ಅಗ್ನಿ-ಪರೀಕ್ಷೆ ಎದುರಿಸಿದ್ದಾಳೆ. ಮನೆಯಲ್ಲಿ ಅಪ್ಪನ ಶವವಿದೆ. ಪ್ರತಿ ಕ್ಷಣವೂ  ಅಪ್ಪನ ನಿರ್ಜೀವ ದೇಹದ ಜೊತೆಗೆ ಅಪ್ಪನೊಂದಿಗೆ ಒಡನಾಡಿದ ಕ್ಷಣಗಳೆಲ್ಲ ನೆನಪಾಗುತ್ತಿವೆ. ಅಪ್ಪ ಫೀಸ್ ಕಟ್ಟಿದ್ದು, ಬಣ್ಣ ಬಣ್ಣದ ಸ್ಕೂಲ್ ಬ್ಯಾಗ್ ತಂದುಕೊಟ್ಟಿದ್ದು, ಹೆಣ್ಮಕ್ಕಳಿಗೆ ವಿದ್ಯೆಯೇ ಒಂದು ಆಭರಣ ಎಂದು ಹೇಳಿದ್ದು ಎಲ್ಲ ನೆನಪಾಗಿ ಅಕ್ಷರಗಳು ಸೊಟ್ಟಪಟ್ಟವಾಗುವ ಜೊತೆಗೆ ತನಗರಿವಿಲ್ಲದೇ ಕಣ್ಣ ಹನಿಗಳು ಉತ್ತರ ಪತ್ರಿಕೆ ಮೇಲೆ ಜಾರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು. ಆದರೆ ಅನುಷಾ ವಿಚಲಿತಗೊಳ್ಳಲ್ಲಿಲ್ಲ. ದೃಢ ನಿರ್ಧಾರ ಮಾಡಿ ಗೆದ್ದಳು.

ಇವತ್ತು ಮುಂಜಾನೆ ಅನುಷಾ ತಂದೆ ಸುರೇಶ ಭಜಂತ್ರಿ ಅನಾರೋಗ್ಯದಿಂದ ನಿಧನರಾದರು. ಸಾವಿನ ಮನೆಯಲ್ಲಿದ್ದ ಹುಡುಗಿ ದಿಟ್ಟತನ ಮೆರೆದು ಪರೀಕ್ಷೆ ಬರೆದಳು. ಆ ಮೂಲಕ ವಿನೂತನ ಮಾದರಿಯಲ್ಲಿ ಶಿಕ್ಷಕ ತಂದೆಗೆ ಅಕ್ಷರ ಶ್ರದ್ಧಾಂಜಲಿ ಅರ್ಪಿಸಿದಳು. ವಿಷಯ ತಿಳಿದು ಪರೀಕ್ಷಾ ಕೆಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲೆಯ ಸಿಬ್ಬಂಧಿ ಭೇಟಿ ನೀಡಿ ವಿದ್ಯಾರ್ಥಿನಿಗೆ ಆತ್ಮಸ್ಥೈರ್ಯ ತುಂಬಿದ್ದು ಸಮಯೋಚಿತವಾಗಿತ್ತು.

2019-20 ರ ಬ್ಯಾಚಿನ ಎಸ್.ಎಸ್.ಎಲ್.ಸಿ ಮಕ್ಕಳು ದೇಶದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಅಪರೂಪ ಆದರೆ ಅತಂಕ ಭರಿತ ಸವಾಲನ್ನು ಎದುರಿಸುತ್ತಿದ್ದಾರೆ. ಕೊರೋನಾ ಸೋಂಕಿನ ಭಯಕ್ಕೆ ಪಕ್ಕದ ರಾಜ್ಯಗಳಲ್ಲಿ ಹತ್ತನೆ ತರಗತಿ ಪರೀಕ್ಷೆ ರದ್ದಾದವು. ಆದರೆ ಇಲ್ಲಿ ರಾಜ್ಯ ಸರ್ಕಾರ ಹಟಕ್ಕೆ ಬಿದ್ದ ಹಾಗೆ ಪರೀಕ್ಷೆ ನಡೆಸುವ ಸವಾಲನ್ನು ಎತ್ತಿಕೊಂಡಿತು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಅಂತೆಲ್ಲ ನಿಯಮಗಳನ್ನು ಪಾಲಿಸುತ್ತಿರುವ ಮಕ್ಕಳು ಆತಂಕದ ನಡುವೆಯೇ ಅಕ್ಷರಗಳನ್ನು ಅರಳಿಸುತ್ತಿದ್ದಾರೆ. ಕೊರೋನಾ ಆತಂಕದ ಜೊತೆಗೆ ಅಪ್ಪನ ಸಾವಿನ ದು:ಖವನ್ನೂ ಎದುರಿಸಿದ ಅನುಷಾ ಪರೀಕ್ಷೆಯಲ್ಲ, ಅಗ್ನಿ ಪರೀಕ್ಷೆ ಗೆದ್ದಿದ್ದಾಳೆ. ಭವಿಷ್ಯ ಅರಳುವ ಹೊತ್ತಿನಲ್ಲಿ ದೃಢ ನಿರ್ಧಾರ ತೆಗೆದುಕೊಂಡ ಬಾಲೆಗೊಂದು ಹ್ಯಾಟ್ಸಾಫ್.

Leave a Reply

Your email address will not be published. Required fields are marked *

You May Also Like

ಲಾರಿ ಡಿಕ್ಕಿ ಸ್ಥಳದಲ್ಲಿಯೇ ಯುವತಿ ಸಾವು

ದ್ವಿಚಕ್ರ ವಾಹನದಿಂದ ಗದುಗಿನ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಮರಳಿ ತನ್ನ ಊರಿಗೆ  ಬರುವ ಮಾರ್ಗ ಮದ್ಯದಲ್ಲಿ ಅಡವಿಸೋಮಾಪುರದ ಮಲ್ಲಿಕಾರ್ಜುನ ಮಠದ ಹತ್ತಿರ ರಬಸವಾಗಿ ಬಂದ ವಾಹನ ಡಿಕ್ಕಿ  ಹೊಡೆದು ಯುವತಿ  ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾತ್ರಿ 10 ಘಂಟೆಗೆ ನಡೆದಿದೆ.

ಮಹಾಶಕ್ತಿ ಕೇಂದ್ರ ಅಧ್ಯಕ್ಷರಾಗಿ ನಾಗರಾಜ ಯಂಬಲದ ಆಯ್ಕೆ

ಮಸ್ಕಿ: ನಗರದ ಮಹಾಶಕ್ತಿ ಕೇಂದ್ರ ಅಧ್ಯಕ್ಷವನ್ನಾಗಿ ಆಯ್ಕೆಯಾದ ನಾಗರಾಜ ಯಂಬಲದ ಅವರಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಸನ್ಮಾನಿಸಿದರು.

ಗದಗ ಜಿಲ್ಲೆಯಲ್ಲಿ 73 ಪ್ರಕರಣ: ಯಾವ ಊರಲ್ಲಿ ಎಷ್ಟು?

ಗದಗ: ಜಿಲ್ಲೆಯಲ್ಲಿ ದಿ. 28 ರಂದು ಕೋವಿಡ್-19 ಸೋಂಕಿನ ಒಟ್ಟು 73 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.