ಲಡಾಕ್: ಜೂನ್ 15ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸಂಘರ್ಷ ವಲಯಗಳಾದ ಲಡಾಕ್ ಮತ್ತು ಲೇಹ್ ಪ್ರದೇಶಕ್ಕೆ ಇಂದು ಭೇಟಿ ನೀಡಿ, ದೇಶದ ಸೈನಿಕ ಪಡೆಗಳಿಗೆ ನೈತಿಕ ಸ್ಥೈರ್ಯ ತುಂಬಿದರು.
ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಭೂಸೇನೆಯ ಮುಖ್ಯಸ್ಥ ನರವಾಣೆ ಜೊತೆಗಿದ್ದರು.
ಲಡಾಖ್‍ಗೆ ಭೇಟಿ ಕೊಡುವ ಮೂಲಕ ಮೋದಿ ಲಡಾಯಿಯ ಹಾದಿ ತುಳಿದರೆ ಎಂಬ ಮಾತುಗಳೂ ಕೇಳಿ ಬಂದಿವೆ. ಸೈನಿಕರನ್ನು ಹುರಿದುಂಬಿಸಿದ ಅವರು ಕೆಲವು ಪ್ರಮುಖ ಅಂಶಗಳನ್ನು ಒತ್ತಿ ಹೇಳಿದ್ದಾರೆ.
ನೆರೆದೇಶದ ವಿಸ್ತರಣಾವಾದದ ಬಗ್ಗೆ ಎಚ್ಚರಿಕೆ ನೀಡಿರುವ ಅವರು, ಪ್ರತಿ ಭಾರತೀಯನಿಗೂ ನಮ್ಮ ಸೈನ್ಯದ ತಾಕತ್ತಿನ ಬಗ್ಗೆ ಹೆಮ್ಮೆಯಿದೆ. ನೀವು ಈಗ ಕರ್ತವ್ಯ ನಿರ್ವಹಿಸುತ್ತಿರುವ ಈ ಎತ್ತರದ ಪ್ರದೇಶಕ್ಕಿಂತಲೂ ನಿಮ್ಮ ಧೈರ್ಯ ಎತ್ತರ ಮಟ್ಟದಲ್ಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಜೂನ್ 15ರ ಸಂಘರ್ಷದಲ್ಲಿ ದೇಶದ 20 ಯೋಧರು ಹುತಾತ್ಮರಾದ ನಂತರ, ಸರ್ವ ಪಕ್ಷಗಳ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದ ಒಂದಿಂಚೂ ನೆಲವನ್ನು ಯಾರೂ ಆಕ್ರಮಿಸಿಲ್ಲ ಎಂದಿದ್ದರು. ಆದರೆ, ಕೆಲವು ಮಾಧ್ಯಮಗಳು ಪ್ರಕಟಿಸಿದ ಉಪಗ್ರಹ ಚಿತ್ರಗಳಲ್ಲಿ ಚೀನಾ ಪೂರ್ವ ಲಡಾಕ್‍ನಲ್ಲಿ ಅತಿಕ್ರಮಣ ಮಾಡಿದ್ದು ಬಯಲಾಗಿತ್ತು.