ಬೆಳಿಗ್ಗೆ ಅಪ್ಪನ ಸಾವಿನ ದುರಂತ: ಗದಗನಲ್ಲಿ ಎಸ್.ಎಸ್.ಎಲ್.ಸಿ ಅಗ್ನಿ ಪರಿಕ್ಷೆ ಎದುರಿಸಿದ ಅನುಷಾ!

ಗದಗ: ಮುಂಜಾನೆ ಮರಳಿ ಬಾರದ ಲೋಕಕ್ಕೆ ಅಪ್ಪ ಹೋಗಿದ್ದಾನೆ. ಮನೆ ತುಂಬ ದು:ಖದ ವಾತಾವರಣ. ನೆರೆಹೊರೆಯವರು, ಸಂಬಂಧಿಕರು ಜಮಾಯಿಸುತ್ತಿದ್ದಾರೆ. ಈ ದುಗೂಡದಲ್ಲಿಯೂ ಗದಗಿನ ಈಶ್ವರ ನಗರದ ನಿವಾಸಿ, ತೋಂಟದಾರ್ಯ ಪ್ರೌಢ ಶಾಲೆಯ ವಿದ್ಯಾರ್ಥಿನಿ 16ರ ಬಾಲಕಿ ಪಾಲಿಗೆ ಇವತ್ತಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಕೇವಲ ಪರೀಕ್ಷೆ ಆಗಿರಲಿಲ್ಲ. ಇದು ಅಗ್ನಿ ಪರೀಕ್ಷೆ, ಧರ್ಮ ಪರೀಕ್ಷೆ.

ಮನೆ ತುಂಬ ಅಳು, ರೋಧನೆ ತುಂಬಿರುವ ಹೊತ್ತಿನಲ್ಲಿ ದು:ಖವನ್ನು ಒತ್ತಿ ಅದುಮಿಕೊಂಡ ಆ ಹುಡುಗಿ, ಹಾಲ್ ಟಿಕೆಟ್, ಮಾಸ್ಕ್, ಪೆನ್ನು ಅಂತೆಲ್ಲ ಹುಡುಕಾಡುತ್ತ ಒಂದು ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟಳು. ಯಾವ ಕಾರಣಕ್ಕೂ ಪೇಪರ್ ಬರೆಯೋದನ್ನು ಬಿಡಬಾರದು ಎಂದು ನಿರ್ಧರಿಸಿದ ಅನುಷಾ ಇವತ್ತು ಎಸ್.ಎಸ್.ಎಲ್.ಸಿ ತೃತೀಯ ಭಾಷಾ ಪೇಪರ್ ಬರೆಯುವ ಮೂಲಕ ತನ್ನ ಭವಿಷ್ಯದ ಅಮೂಲ್ಯ ಒಂದು ವರ್ಷವನ್ನು ಕಾಪಾಡಿಕೊಂಡಿದ್ದಾಳೆ.

ಗದಗ ನಗರದ ಅನುಷಾ ಭಜಂತ್ರಿ ಆತಂಕ, ದು:ಖಗಳ ನಡುವೆಯೇ ಅಗ್ನಿ-ಪರೀಕ್ಷೆ ಎದುರಿಸಿದ್ದಾಳೆ. ಮನೆಯಲ್ಲಿ ಅಪ್ಪನ ಶವವಿದೆ. ಪ್ರತಿ ಕ್ಷಣವೂ  ಅಪ್ಪನ ನಿರ್ಜೀವ ದೇಹದ ಜೊತೆಗೆ ಅಪ್ಪನೊಂದಿಗೆ ಒಡನಾಡಿದ ಕ್ಷಣಗಳೆಲ್ಲ ನೆನಪಾಗುತ್ತಿವೆ. ಅಪ್ಪ ಫೀಸ್ ಕಟ್ಟಿದ್ದು, ಬಣ್ಣ ಬಣ್ಣದ ಸ್ಕೂಲ್ ಬ್ಯಾಗ್ ತಂದುಕೊಟ್ಟಿದ್ದು, ಹೆಣ್ಮಕ್ಕಳಿಗೆ ವಿದ್ಯೆಯೇ ಒಂದು ಆಭರಣ ಎಂದು ಹೇಳಿದ್ದು ಎಲ್ಲ ನೆನಪಾಗಿ ಅಕ್ಷರಗಳು ಸೊಟ್ಟಪಟ್ಟವಾಗುವ ಜೊತೆಗೆ ತನಗರಿವಿಲ್ಲದೇ ಕಣ್ಣ ಹನಿಗಳು ಉತ್ತರ ಪತ್ರಿಕೆ ಮೇಲೆ ಜಾರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು. ಆದರೆ ಅನುಷಾ ವಿಚಲಿತಗೊಳ್ಳಲ್ಲಿಲ್ಲ. ದೃಢ ನಿರ್ಧಾರ ಮಾಡಿ ಗೆದ್ದಳು.

ಇವತ್ತು ಮುಂಜಾನೆ ಅನುಷಾ ತಂದೆ ಸುರೇಶ ಭಜಂತ್ರಿ ಅನಾರೋಗ್ಯದಿಂದ ನಿಧನರಾದರು. ಸಾವಿನ ಮನೆಯಲ್ಲಿದ್ದ ಹುಡುಗಿ ದಿಟ್ಟತನ ಮೆರೆದು ಪರೀಕ್ಷೆ ಬರೆದಳು. ಆ ಮೂಲಕ ವಿನೂತನ ಮಾದರಿಯಲ್ಲಿ ಶಿಕ್ಷಕ ತಂದೆಗೆ ಅಕ್ಷರ ಶ್ರದ್ಧಾಂಜಲಿ ಅರ್ಪಿಸಿದಳು. ವಿಷಯ ತಿಳಿದು ಪರೀಕ್ಷಾ ಕೆಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲೆಯ ಸಿಬ್ಬಂಧಿ ಭೇಟಿ ನೀಡಿ ವಿದ್ಯಾರ್ಥಿನಿಗೆ ಆತ್ಮಸ್ಥೈರ್ಯ ತುಂಬಿದ್ದು ಸಮಯೋಚಿತವಾಗಿತ್ತು.

2019-20 ರ ಬ್ಯಾಚಿನ ಎಸ್.ಎಸ್.ಎಲ್.ಸಿ ಮಕ್ಕಳು ದೇಶದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಅಪರೂಪ ಆದರೆ ಅತಂಕ ಭರಿತ ಸವಾಲನ್ನು ಎದುರಿಸುತ್ತಿದ್ದಾರೆ. ಕೊರೋನಾ ಸೋಂಕಿನ ಭಯಕ್ಕೆ ಪಕ್ಕದ ರಾಜ್ಯಗಳಲ್ಲಿ ಹತ್ತನೆ ತರಗತಿ ಪರೀಕ್ಷೆ ರದ್ದಾದವು. ಆದರೆ ಇಲ್ಲಿ ರಾಜ್ಯ ಸರ್ಕಾರ ಹಟಕ್ಕೆ ಬಿದ್ದ ಹಾಗೆ ಪರೀಕ್ಷೆ ನಡೆಸುವ ಸವಾಲನ್ನು ಎತ್ತಿಕೊಂಡಿತು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಅಂತೆಲ್ಲ ನಿಯಮಗಳನ್ನು ಪಾಲಿಸುತ್ತಿರುವ ಮಕ್ಕಳು ಆತಂಕದ ನಡುವೆಯೇ ಅಕ್ಷರಗಳನ್ನು ಅರಳಿಸುತ್ತಿದ್ದಾರೆ. ಕೊರೋನಾ ಆತಂಕದ ಜೊತೆಗೆ ಅಪ್ಪನ ಸಾವಿನ ದು:ಖವನ್ನೂ ಎದುರಿಸಿದ ಅನುಷಾ ಪರೀಕ್ಷೆಯಲ್ಲ, ಅಗ್ನಿ ಪರೀಕ್ಷೆ ಗೆದ್ದಿದ್ದಾಳೆ. ಭವಿಷ್ಯ ಅರಳುವ ಹೊತ್ತಿನಲ್ಲಿ ದೃಢ ನಿರ್ಧಾರ ತೆಗೆದುಕೊಂಡ ಬಾಲೆಗೊಂದು ಹ್ಯಾಟ್ಸಾಫ್.

Exit mobile version