ಬೆಂಗಳೂರು : ಭೂಗತ ಪಾತಕಿ ರವಿ ಪೂಜಾರಿ ಕೃತ್ಯಗಳ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಮುಂಬಯಿನ ಶಾರ್ಪ್ ಶೂಟರ್ ಯೂಸೂಫ್ ಚ್ಕಾನ್‌ನನ್ನು ವಶಕ್ಕೆ ಪಡೆದಿದ್ದಾರೆ.
ಪಾತಕ ಲೋಕದಲ್ಲಿ ಶಾರ್ಪ್ ಶೂಟರ್, ಭೂಗತ ಲೋಕದ ದೊರೆಗಳ ಏಜೆಂಟ್ ಎಂಬ ಕುಖ್ಯಾತಿ ಪಡೆದಿದ್ದಾನೆ. ಸದ್ಯ ಆತನ ಕೃತ್ಯಗಳ ಬಗ್ಗೆ ತನಿಖೆ ಮುಂದುವರಿಯಲಿದೆ.
2007ರಲ್ಲಿ ಮಂಗಳೂರಿನಲ್ಲಿ ನಡೆದ ಬಿಲ್ಡರ್ ಸುಬ್ಬರಾವು ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಯೂಸೂಫ್ ಗುರಿಯಾಗಿದ್ದಾನೆ. ರವಿ ಪೂಜಾರಿಯನ್ನು ವಿಚಾರಣೆ ನಡೆಸುತ್ತಿದ್ದಾಗ ಯೂಸೂಫ್ ಬಗ್ಗೆ ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ರವಿ ಪೂಜಾರಿ ನಡೆಸಿರಬಹುದಾದ ಇತರೆ ಕೃತ್ಯಗಳಲ್ಲಿ ಯೂಸೂಫ್ ಪಾತ್ರದ ಕುರಿತು ತನಿಖೆ ನಡೆಸಲು ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಬಾಲಿವುಡ್ ನಿರ್ಮಾಪಕ ನಿರ್ದೇಶಕರೊಬ್ಬರಿಗೆ ಕೊಲೆ ಬೆದರಿಕೆ, ಸುಲಿಗೆ ಸೇರಿ ಉದ್ಯಮಿಗಳ ಕೆಲವು ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದರು.