ತೆಲುಗು-ಕನ್ನಡ ಅನುವಾದ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳ ಕಾಲದ ಸದ್ದಿಲ್ಲದ ಕೈಂಕರ್ಯವನ್ನು ಬಿ.ಸುಜ್ಞಾನಮೂರ್ತಿ ನೆರವೇರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಪುಸ್ತಕಗಳ ಸೊಗಸು, ವಿನ್ಯಾಸ ಮತ್ತು ಅಚ್ಚುಕಟ್ಟುತನದಿಂದ ಪುಸ್ತಕಲೋಕದಲ್ಲಿ ಹೆಸರಾಗಿದ್ದಾರೆ.

ವೃತ್ತಿಜೀವನದ ಜೊತೆಗೆ ಅನುವಾದದಲ್ಲಿಯೂ ಗಂಭೀರವಾಗಿ ತೊಡಗಿಸಿಕೊಂಡು ಈವರೆಗೆ 40ಕ್ಕೂ ಹೆಚ್ಚು ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಮಹಾಶ್ವೇತಾದೇವಿ ಅವರ ‘ಯಾರದೀ ಕಾಡು’ ಕಾದಂಬರಿಯ ಅನುವಾದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನಶೀಲ ಭಾಷಾಂತರ ವಿಭಾಗದಲ್ಲಿ ಪುಸ್ತಕ ಬಹುಮಾನ (2003) ಹಾಗೂ ಆಂಧ್ರಪ್ರದೇಶದ ಚಾರಿತ್ರಿಕ ರೈತ ಹೋರಾಟವನ್ನು ಆಧರಿಸಿದ ‘ತೆಲಂಗಾಣ ಹೋರಾಟ’ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನೇತರ ವಿಭಾಗದ ಪುಸ್ತಕ ಬಹುಮಾನ (2013) ಸಂದಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2016ನೇ ಸಾಲಿನ ಗೌರಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

ಅಸಮರ್ಥನ ಜೀವನ ಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಿಲ್ಲ, ಜಾತಿವಿನಾಶ, ದಲಿತತ್ವ, ಕುಟುಂಬ ವ್ಯವಸ್ಥೆ, ಮಾರ್ಕ್ಸ್ ವಾದ-ಸ್ತ್ರೀವಾದ, ಪುರುಷ ಅಹಂಕಾರಕ್ಕೆ ಸವಾಲು, ದಲಿತ ಹೋರಾಟಗಾರ ಅಯ್ಯನ್ ಕಾಳಿ, ಜಾತಿ ವಿನಾಶ ವರ್ಗ ವಿನಾಶ, ತಮಿಳು ಬೌದ್ಧ ದಲಿತ ಹೋರಾಟಗಾರ ಅಯೋತಿದಾಸ್, ತಾಯಿಕಾಡು, ಪೆರಿಯಾರ್ ಜೀವನ ಚಳವಳಿ, ಮತಾಂಧತೆ ಮತ್ತು ಮಾನವೀಯತೆ, ತೆಲಂಗಾಣ ಹೋರಾಟ, ರಮಾಬಾಯಿ ಅಂಬೇಡ್ಕರ್ ಜೀವನಚಿತ್ರ, ದಲಿತರು ಮತ್ತು ಪ್ರಭುತ್ವ, ಆಂಧ್ರಪ್ರದೇಶದ ಶತಮಾನದ ದಲಿತ ಚಳವಳಿ, ಅಮೆರಿಕನಿಜಂ, ಕತ್ತಲ ನಕ್ಷತ್ರ, ಒಡೆದ ಕನ್ನಡಿ, ಆದಿವಾಸಿ ಹೋರಾಟಗಾರ ಕೊಮುರಂ ಭೀಮು, ಜಾತಿಯ ನೆರಳಲ್ಲಿ ಅಭಿವೃದ್ಧಿ ರಾಜಕೀಯ, ಮನೆ ಕೆಲಸ ಮತ್ತು ಹೊರಗಿನ ಕೆಲಸ, ಇಂಟಲೆಕ್ಚುವಲ್ ಗೂಂಡಾಗಳು, ಗೊಲ್ಲರು ಮತ್ತು ಕುರುಬರು, ಆಧ್ಯಾತ್ಮಿಕ ಫ್ಯಾಸಿಸ್ಟರು ಬ್ರಾಹ್ಮಣರು, ಹೊಲೆಯತತ್ವ, ಹಿಂದೂಧರ್ಮ ಅಂತರ್ಯುದ್ಧ ಲಕ್ಷಣಗಳು ಸುಜ್ಞಾನಮೂರ್ತಿಯವರು ಅನುವಾದಿಸಿರುವ ಕೃತಿಗಳು.

ಇಷ್ಟು ವಿಶಾಲವಾದ ಅನುವಾದ ಕಾರ್ಯವನ್ನು ಕೈಗೊಂಡಿರುವ ನಮ್ಮ ನಡುವಿನ ಸಹೃದಯಿ, ವಿಶಾಲ ಹೃದಯಿ, ಮಾನವಪ್ರೇಮಿ, ತತ್ವ ಬದ್ಧ ವ್ಯಕ್ತಿತ್ವದ ಬಿ.ಸುಜ್ಞಾನಮೂರ್ತಿಯವರು ಇದೇ ವರ್ಷ ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಒಡನಾಡಿಗಳು ಒಂದು ಅಭಿನಂದನಾ ಗ್ರಂಥವನ್ನು ಸಂಪಾದಿಸಲು ತೀರ್ಮಾನಿಸಿದ್ದಾರೆ. ಮೂರು ದಶಕಗಳಿಂದ ನಿರಂತರವಾಗಿ ತೆಲುಗಿನಿಂದ ಕನ್ನಡಕ್ಕೆ ಮಹತ್ವದ ಕೃತಿಗಳನ್ನು ಅನುವಾದಿಸಿರುವ ಅವರಿಗೆ ಈ ಮೂಲಕ ಕೃತಜ್ಞತಾಪೂರ್ವಕ ಗೌರವವನ್ನು ಸಲ್ಲಿಸುವುದು ಕನ್ನಡಿಗರ ಕರ್ತವ್ಯವಾಗಿದೆ.

ಕೃತಿಯನ್ನು ಮೂರು ಭಾಗಗಳಾಗಿ ವಿಂಗಡಿಸಲು ಉದ್ದೇಶಿಸಲಾಗಿದೆ. ಮೊದಲನೆ ಭಾಗದಲ್ಲಿ ಅನುವಾದ ವಿಷಯಕ್ಕೆ ಸಂಬಂಧಿಸಿದ ಸೈದ್ಧಾಂತಿಕ ಲೇಖನಗಳನ್ನು ಮುದ್ರಿಸಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಇತ್ತೀಚಿನ ಅನುವಾದ ಕ್ಷೇತ್ರ, ಅನುವಾದದ ಸಮಸ್ಯೆಗಳು ಮತ್ತು ಸವಾಲುಗಳು, ಅನುವಾದ ಕ್ಷೇತ್ರದಲ್ಲಿರುವ ಸಾಧ್ಯತೆಗಳು, ಸರಳ ಅನುವಾದದ ಸಾಧ್ಯಾಸಾಧ್ಯತೆ ಮೊದಲಾದ ಅಂಶಗಳಿರುವ ಲೇಖನಗಳಿಗೆ ಆದ್ಯತೆ ನೀಡಲಾಗುವುದು.

ಎರಡನೇ ಭಾಗದಲ್ಲಿ ಇಷ್ಟು ದಿನಗಳ ಕಾಲ ಅವರ ಒಡನಾಟದಲ್ಲಿರುವ ಅವರ ಸಹೋದ್ಯೋಗಿಗಳು, ಸಹಪಾಠಿಗಳು, ಕೃತಿಗಳ ಮೂಲಕ ಅವರ ಕೆಲಸವನ್ನು ಬಲ್ಲವರು, ಅವರ ನಂತರದ ತಲೆಮಾರಿನ ಯುವ ಬರಹಗಾರರು, ಪ್ರಕಾಶಕರು ತಮ್ಮ ಒಡನಾಟದ ಕ್ಷಣಗಳನ್ನು ಕುರಿತು ಲೇಖನಗಳನ್ನು ಪ್ರಕಟಿಸಲಾಗುವುದು.

ಮೂರನೇ ಭಾಗದಲ್ಲಿ ಅವರು ಅನುವಾದಿಸಿರುವ ಕೃತಿಗಳ ಕುರಿತು ಲೇಖನಗಳನ್ನು ಮುದ್ರಿಸಲು ಚಿಂತನೆ ನಡೆಸಲಾಗಿದೆ. ತಮ್ಮ ಬಿಡುವಿರದ ಸಮಯದಲ್ಲಿ ಆದಷ್ಟು ಶೀಘ್ರವಾಗಿ ಮೇಲಿನ ಯಾವುದೇ ವಿಭಾಗಕ್ಕೆ ಸಂಬಂಧಿಸಿದಂತೆ ಒಂದು ಲೇಖನವನ್ನು ಕಳುಹಿಸಿ ಕೊಟ್ಟರೆ, ಅನುವಾದ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ.

ಲೇಖನವನ್ನು ಜೂನ್ 30, 2020ರ ಒಳಗೆ ಕಳಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

ಧನ್ಯವಾದಗಳು

ಇಂತಿ

ಬಿ.ಸುಜ್ಞಾನಮೂರ್ತಿ ಅಭಿನಂದನಾ ಸಮಿತಿ

ವಿಶೇಷ ಸೂಚನೆ: ಲೇಖನಗಳನ್ನು ಕಳುಹಿಸಬೇಕಾದ ಈಮೇಯ್ಲ್ ವಿಳಾಸ – pradeeplmalgudi@gmail.com ಅಥವಾ 9844086993 ಸಂಖ್ಯೆಗೆ ವಾಟ್ಸ್ ಅಪ್ ಮೂಲಕ ಕೂಡ ಕಳುಹಿಸಬಹುದು.

Leave a Reply

Your email address will not be published. Required fields are marked *

You May Also Like

ಶರಣ ಧರ್ಮ,ವಚನ ಸಾಹಿತ್ಯ ರಕ್ಷಕ ಮಾಚಿದೇವರು

ನಿಡಗುಂದಿ: ಕಲ್ಯಾಣ ಕ್ರಾಂತಿ ಯಲ್ಲಿ ಮಾಚಿದೇವರು ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ಜವಾಬ್ಧಾರಿ…

ಹಾರಯಿಕೆಯ ಕವಿ ಮತ್ತು ಸಾಹಿತಿ : ಪ್ರೊ.ವಸಂತ ಕುಷ್ಟಗಿಯವರು..!

ಪ್ರೊ.ವಸಂತ ಕುಷ್ಟಗಿಯವರು ತೀರಿದ್ದಾರೆ. ಅವರ ಸಾವಿಗೆ ಕಂಬನಿ ಮಿಡಿಯುತ್ತ ಈ ನೆನಪು ಮಾಡಿಕೊಳ್ಳೋಣ. ಸದ್ಯ ಕಲಬುರ್ಗಿ ನಿವಾಸಿಯಾಗಿದ್ದ ಕವಿ ಮತ್ತು ಸಾಹಿತಿ ವಸಂತ ಕುಷ್ಟಗಿ ಅವರು ಮೂಲತಃ ಹಿಂದಿನ ರಾಯಚೂರು ಜಿಲ್ಲೆ ಕುಷ್ಟಗಿಯವರು. ವಸಂತ ಕುಷ್ಟಗಿ ಅವರು ಜನಿಸಿದ್ದು 1936 ಅಕ್ಟೋಬರ್ 10ರಂದು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಪ್ರವೃತ್ತಿಯಿಂದ ಕವಿ-ಲೇಖಕರಾಗಿದ್ದರು.

ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳುವವರು ಯಾರು?: ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ

ಲಾಕ್ ಡೌನ್ ಹಿನ್ನೆಲೆ ಜೂನ್ 1 ಕ್ಕೆ ಆರಂಭವಾಗಬೇಕಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಈವರೆಗೆ ಆರಂಭವಾಗಿಲ್ಲ. ಇದರಿಂದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ತೀವ್ರ ತೊಂದರೆಗೀಡಾಗಿದ್ದಾರೆ.

ಬೆಟ್ಟದ ಹೂವಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ

ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇಂದು ಘೊಷಿಸಿದ್ದಾರೆ.ಇಂದು ಅರಮನೆ ಮೈದಾನದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ಈ ಘೊಷಣೆ ಮಾಡಿದ್ದಾರೆ