ಬೆಂಗಳೂರು: ಎರಡ್ಮೂರು ದಿನಗಳಿಂದ ಈಗಾಗಲೇ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆ ಎದುರಾಗಿದೆ. ಈಗಾಗಲೇ ಕೆಲವು ಅತೃಪ್ತ ಶಾಸಕರು ನೀಡುತ್ತಿರುವ ಹೇಳಿಕೆಯಿಂದಾಗಿ ಸದ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವಂತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಉಮೇಶ್ ಕತ್ತಿ ಅವರ ಮನೆಯಲ್ಲಿ ನಡೆದ ಶೀಕರಣಿ ಊಟ ಮುಂದಿನ ರಾಜಕೀಯದಾಟಕ್ಕೆ ಮುನ್ನುಡಿ ಬರೆಯುತ್ತಾ? ಎನ್ನುವ ಪ್ರಶ್ನೆಗೂ ಗ್ರಾಸವಾಗಿದೆ.

ಈಗಾಗಲೇ ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಕುರಿತು ಬಿಜೆಪಿಯಲ್ಲಿ ಪ್ರಶ್ನೆ ಆರಂಭವಾಗಿದೆ. ಈ ಬಗ್ಗೆ ಉಮೇಶ್ ಕತ್ತಿ ನಿವಾಸದಲ್ಲಿ ಕೆಲವು ಶಾಸಕರು ಸಭೆ ಸೇರಿದ್ದು ಇದನ್ನು ಪುಷ್ಟೀಕರಿಸುತ್ತದೆ. ಮೇಲ್ನೋಟಕ್ಕೆ ಬಹುಕಾಲದ ಆಪ್ತ ಶಾಸಕರೆಲ್ಲ ನಮ್ಮ ಮನೆಯಲ್ಲಿ ಸೇರಿದ್ದೆವು. ಆದರೆ ನಾವು ನಾಯಕತ್ವ ಬದಲಾವಣೆಗಾಗಿ ಯಾವುದೇ ಸಭೆ ನಡೆಸಲು ಸೇರಿಲ್ಲ ಎಂದು ಹೇಳಲಾಗುತ್ತದೆ.

ಸಿಎಂ ಬಿ.ಎಸ್.ಯಡಿಯೂರಪ್ಪ

ಆದರೆ ಉಮೇಶ್ ಕತ್ತಿ ಅವರ ನೇತೃತ್ವದಲ್ಲಿ ಸಭೆ ನಡೆದ ಬಳಿಕ ಸಭೆಯಲ್ಲಿ ಪಾಲ್ಗೊಂಡು ಶಾಸಕರ ವರಸೆ ನೋಡಿದರೆ ಬಿಜೆಪಿಯಲ್ಲಿ ಅತೃಪ್ತ ಶಾಸಕರ ಪಡೆ ನಿರ್ಮಾಣವಾಗಿದೆ ಎನ್ನುವುದಂತೂ ಸ್ಪಷ್ಟವಾಗುತ್ತದೆ. ಈ ಕಾರಣದಿಂದ ಉಮೇಶ್ ಕತ್ತಿ ಅವರ ಮನೆಯಲ್ಲಿನ ಶೀಕರಣಿ ಊಟ ರಾಜ್ಯ ರಾಜಕಾರಣದಲ್ಲಿ ಏನು ಕಮಾಲ್ ಮಾಡಲಿದೆ ಎನ್ನುವ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.

ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ವಿ.ರಾಮದಾಸ್, ದತ್ತಾತ್ರೇಯ ಪಾಟೀಲ್, ರೇವುರ್, ತಿಪ್ಪಾರಡ್ಡಿ, ಅರವಿಂದ್ ಬೆಲ್ಲದ್, ಹಾಲಪ್ಪ ಆಚಾರ್, ಗೂಳಿಹಟ್ಟಿ ಶೇಖರ್ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು ಎನ್ನಲಾಗಿದೆ.

ಸಭೆಯ ನಂತರ ಶಾಸಕರಾದ ಗೂಳಿಹಟ್ಟಿ ಶೇಖರ್, ತಿಪ್ಪಾರಡ್ಡಿ ಬಿಎಸ್ವೈ ನಾಯಕತ್ವ ಬದಲಾವಣೆಯ ಅಪೇಕ್ಷೆ ವ್ಯಕ್ತಪಡಿಸಿರುವುದು ಗೊತ್ತಾಗುತ್ತದೆ. ಮುಖ್ಯವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿರುವವರೆಗೂ ನಾನು ಅವರ ಬಳಿ ನನ್ನನ್ನು ಮಂತ್ರಿ ಮಾಡಿ ಎಂದು ಕೇಳುವುದಿಲ್ಲ ಎಂದು ಹೇಳಿದರು.

ಇನ್ನು ಇದೇ ವೇಳೆ ಬಿಎಸ್ವೈ ನಿಮ್ಮ ನಾಯಕರಲ್ಲವಾ? ಎಂಬ ಪ್ರಶ್ನೆಗೆ ಅವರು ನಮ್ಮ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

ಎಚ್ಚರಿಕೆಗಾಗಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆನಾ?

ಇನ್ನು ಇಷ್ಟೆಲ್ಲ ಬೆಳವಣಿಗೆಯ ಮದ್ಯದಲ್ಲಿ ನಿನ್ನೆ ಚಾಮರಾಜನಗದಲ್ಲಿ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಅತೃಪ್ತರಿಗೆ ಎಚ್ಚರಿಕೆಯಾ? ಎನ್ನುವಂತಿದೆ. ಈಗಾಗಲೇ 20 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಹೈಕಮಾಂಡ್ ನನಗೆ ಅನುಮತಿ ನೀಡಿದರೆ ಸದ್ಯ 5 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.

ಸಚಿವ ರಮೇಶ್ ಜಾರಕಿಹೊಳಿ

ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಈ ರೀತಿ ಗೌಪ್ಯ ಸಭೆಗಳ ಮೂಲಕ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಈ ಮೂಲಕ ಗೌಪ್ಯ ಸಭೆಗಳ ಮೂಲಕ ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ನಡೆಸಿದರೆ ಫಲಿಸುವುದಿಲ್ಲ ಎನ್ನುವ ಸಂದೇಶವನ್ನು ನಿನ್ನೆ ರಮೇಶ ಜಾರಕಿಹೊಳಿ ರವಾನಿಸಿದಂತಿದೆ. ಜೊತೆಗೆ ಬಿಎಸ್ವೈ ಅವರನ್ನು ಯಾರು ಏನು ಮಾಡಕ್ಕಾಗಲ್ಲ. ಒಂದು ವೇಳೆ ಅವರ ತಂಟೆಗೆ ಬಂದರೆ ಹೇಗಾದರೂ ಮಾಡಿ ನಾವು ಸರ್ಕಾರ ಉಳಿಸಿಕೊಳ್ಳುತ್ತೇವೆ ಎನ್ನುವ ಪರೋಕ್ಷ ಎಚ್ಚರಿಕೆ ಇದಾಗಿದೆ ಎನ್ನಲಾಗ್ತಿದೆ.

ಇದು ಬ್ಲಾಕ್ ಮೇಲ್ ರಾಜಕಾರಣನಾ?

ಒಂದು ಮೂಲದ ಪ್ರಕಾರ ಸೇರಿದ ಬಹುತೇಕ ಶಾಸಕರು ಮಂತ್ರಿಗಿರಿಯಿಂದ ವಂಚಿತರಾದವರೆ. ಅಲ್ಲದೇ ಉಮೇಶ್ ಕತ್ತಿ ಅವರಿಗೆ ತಮ್ಮ ಸಹೋದರನಿಗಾದರೂ ರಾಜ್ಯಸಭಾ ಅಥವಾ ಪರಿಷತ್ತಿಗೆ ಅವಕಾಶ ದೊರಕಿಸಿ ಕೊಡುವ ಪ್ರಯತ್ನ. ಇನ್ನು ಯತ್ನಾಳ್ ಅವರಿಗೆ ಸಚಿವ ಸ್ಥಾನದ ಹಪಹಪಿ. ಹೀಗಾಗಿ ಈ ಎಲ್ಲ ಕಾರಣದಿಂದ ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಯ ಸನಿಹದಲ್ಲಿ ಈ ಬೆಳವಣಿಗೆಗಳು ನಡೆದಿರುವುದು ಮಾತ್ರ ಇಂತಹ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್ ನಲ್ಲಿ ಆತಂಕ..!

ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಹಾಗೂ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಗಮನಿಸಿದಾಗ ಒಂದಕ್ಕೊಂದು ತಳಕು ಹಾಕಿಕೊಂಡಂತಿದೆ. ಇತ್ತ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎನ್ನುವ ಬಗ್ಗೆ ಜಾರಕಿಹೊಳಿ ಹೇಳಿಕೆಯಾದರೆ ಮತ್ತೊಂದೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಕಾಂಗ್ರೆಸ್ ಪಕ್ಷ ಪಕ್ಷಾಂತರ ಕಾಯ್ದೆ ನಿಷೇಧದ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಪಟ್ಟು ಹಿಡಿದಿದೆ.

ಇದರ ಸೂಕ್ಷ್ಮತೆಯನ್ನು ಗಮನಿಸಿದಾಗ ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್ ಗೂ ಕೂಡ ಪ್ರಯಾಸದ ಕೆಲಸವಾಗಿದೆಯಾ? ಎನ್ನುವ ಸಂದೇಹ ಮೂಡುತ್ತಿದೆ.

ರಾಜ್ಯದ ರಾಜಕೀಯದಾಟದಲ್ಲಿ ಏನೆಲ್ಲ ಬೆಳವಣಿಗೆಗಳಾಗಬಹುದು ಎನ್ನುವುದು ಮಾತ್ರ ಮಾತ್ರ ತೀವ್ರ ಕುತೂಹಲ ಮೂಡಿಸಿದ್ದು ಸದ್ಯ ಬಿಎಸ್ವೈ ಅವರಿಗೆ ಮತ್ತೊಂದು ಚಿಂತೆ ಶುರುವಾದಂತಾಗಿದೆ.

ಮಿನೂ, ಬೆಂಗಳೂರು

Leave a Reply

Your email address will not be published. Required fields are marked *

You May Also Like

ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ರಾಜ್ಯ ಸರ್ಕಾರ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ.

ರಾಜ್ಯಸಭಾ ಚುನಾವಣೆ: ಸಂಘ ನಿಷ್ಟರಿಗೆ ಮಣೆ ಕಮಲದಲ್ಲಿ ಅಸಂತೋಷ..!

ಬೆಂಗಳೂರು: ಇತ್ತಿಚೆಗಷ್ಟೆ ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆಗೆ ಕಳಿಸಬೇಕು ಎಂದು…

ಎಸ್.ಎಸ್.ಎಲ್.ಸಿ-ಪಿಯುಸಿ ಪರೀಕ್ಷೆ ವೇಳಾಪಟ್ಟಿ: ಪಾಲಕ, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ..

ರಾಜ್ಯದಲ್ಲಿ ಜೂನ್ 25 ರಿಂದ ಜುಲೈ 4 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಜೂನ್ 18 ಕ್ಕೆ ಪಿಯುಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಮನೆಗಳನ್ನು ಗುರುತಿಟ್ಟುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಬಲ ಪಂಥೀಯ ಸಂಘಟನೆಗಳು ಕಿಡಿ ಕಾರಿದ್ದವು. ಇದೊಂದು ಪ್ರಚಾರದ ಗಿಮಿಕ್ ಎಂದು ಟೀಕಿಸಿದ್ದವು. ಈಗ ಕುಮಾರಸ್ವಾಮಿ ಅವರು ಈ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.