ಬೆಂಗಳೂರು: ಸಾಹಿತಿ, ಕಲಾವಿದರು, ಜನಪರ ಹೋರಾಟಗಾರರು ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಸಿರಿವಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವಂತೆ ಮನವಿ ಮಾಡಿದ್ದಾರೆ. ಅವರ ಮನವಿ ಇಲ್ಲಿದೆ:

ಆತ್ಮೀಯರೆ,
ದೇವನೂರ ಮಹಾದೇವ, ಟಿ.ಆರ್.ಚಂದ್ರಶೇಖರ, ಕೆ.ಸಿ.ರಘು ಮುಂತಾದವರು ಕೊರೋನಾ ಸಂಕಷ್ಟ ಪರಿಹಾರಕ್ಕಾಗಿ ಅತಿ ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ವಿದಿಸಲು ಅಪೀಲು ಸಲ್ಲಿಸಿದ್ದಾರೆ, ನೀವೂ ಸಹ ಕೈ ಜೋಡಿಸಿ.
ಮಾನ್ಯರೇ,
ಕೊರೋನಾ ಬಿಕ್ಕಟ್ಟನ್ನು ನಿಭಾಯಿಸಿ ಪ್ರಪಂಚ ಮಟ್ಟದಲ್ಲಿ ತಲೆಯೆತ್ತಿ ನಿಲ್ಲಲು ಮತ್ತು ಜನರ ಹಿತ ಕಾಪಾಡಲು ಸಾಂವಿಧಾನಿಕ ದಾರಿಯಾದ 1% ಅತಿ ಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ: ಈ ಅಭಿಯಾನದಲ್ಲಿ 2020 ಮೇ 1 ರ ಸಂಪತ್ತಿನ ತೆರಿಗೆ ಪಿಟಿಷನ್ಗೆ ಸಹಿ ಮಾಡುವ ಮೂಲಕ ಪಾಲ್ಗೊಳ್ಳಿ ಎಂದು ಮನವಿ ಮಾಡುತ್ತಿದ್ದೇವೆ.
ಭಾರತವು ಕಲ್ಯಾಣರಾಜ್ಯ (Welfare State) ಕಡೆಗೆ ಚಲಿಸಬೇಕೆಂಬ ಆಶಯಗಳು ಇದ್ದಾಗ 1957ರಲ್ಲೇ ಸಂಪತ್ತಿನ ಮೇಲೆ ತೆರಿಗೆ ಪರಿಕಲ್ಪನೆ ಜಾರಿಯಲ್ಲಿತ್ತಾದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರಲಿಲ್ಲ. ಆದರೆ, 1991ರ ನಂತರ ಮಾರುಕಟ್ಟೆ ಶಕ್ತಿಗಳು ಆಳ್ವಿಕೆಯನ್ನು ನಿಯಂತ್ರಿಸತೊಡಗಿದ ಪರಿಣಾಮವಾಗಿ 2015ರಲ್ಲಿ ಕೇಂದ್ರ ಸರ್ಕಾರವು ಸಂಪತ್ತಿನ ಮೇಲಿನ ತೆರಿಗೆ ಪರಿಕಲ್ಪನೆಯನ್ನೇ ರದ್ದುಮಾಡಿಬಿಟ್ಟಿತು. ಆದರೀಗ, ಒಂದು ಲಕ್ಷ ದಾಟಿ ಓಡುತ್ತಿರುವ ಕೊರೋನಾ ಸೋಂಕಿನ ದಾಳಿಯಿಂದ ತತ್ತರಿಸುತ್ತಿರುವ ಭಾರತವು ಚೇತರಿಸಿಕೊಳ್ಳುವಂತಾಗಲು 1% ಅತಿಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ ವಿಧಿಸಿಯಾದರೂ ಕೊರೋನ ತಹಬಂದಿಗೆ ತರುವುದು ಇಂದಿನ ತುರ್ತಾಗಿದೆ.
ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ಜಿಯವರು ಈಗಾಗಲೇ ತಮ್ಮ ಒಟ್ಟು ಸಂಪತ್ತಿನ ಶೇ. 2%ರಷ್ಟನ್ನು ಕೊರೋನಾ ಬಿಕ್ಕಟ್ಟಿನ ನಿವಾರಣೆಗಾಗಿ ಬಿಟ್ಟುಕೊಟ್ಟಿರುವುದನ್ನು ಗಮನಿಸಿ ಹೇಳುವುದಾದರೆ, ಈ ಸಾಧ್ಯತೆ ಅಂತಹ ಕಷ್ಟದಾಯಕವಾದುದ್ದೇನೂ ಅಲ್ಲ. ಈ ವಿಚಾರದಲ್ಲಿ ಜನರಿಂದ ಆಯ್ಕೆಯಾದ ಮತ್ತು ಶಕ್ತಿಯುತವಾದ ಯಾವುದೇ ಸರ್ಕಾರವು ಹಿಂದೆ-ಮುಂದೆ ನೋಡದೆ ತುಂಬಾ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕಾಗಿದೆ.
ಇಂದಿನ ಕೊರೋನಾ ಬಿಕ್ಕಟ್ಟಿನ ಭಯಂಕರ ಪರಿಸ್ಥಿತಿಯನ್ನು ಎದುರಿಸಲು ಇತ್ತೀಚೆಗೆ, ನಮ್ಮ ಪ್ರಧಾನ ಮಂತ್ರಿಗಳು ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಒಳಹೊಕ್ಕು ನೋಡಿದರೆ, ಇದರಲ್ಲಿ-
1) ಸ್ವಾಯತ್ತ ಸಂಸ್ಥೆಯಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಹಣಕಾಸು (ಮಾನಿಟರಿ) ನೀತಿಗೆ ಅನುಗುಣವಾಗಿ ಪ್ರಕಟಿಸಿದ ಕ್ರಮಗಳನ್ನು ಹಾಗೂ ಬಡ್ಡಿದರ ಮತ್ತು ಬ್ಯಾಂಕ್ ನಿರ್ವಹಣೆ ಕುರಿತಾಗಿ ಮಾಡಿರುವ ಘೋಷಣೆಗಳನ್ನು ಸರ್ಕಾರ ತನ್ನದೇ ಎಂಬಂತೆ ಬಿಂಬಿಸಿಕೊಂಡಿದೆ!
2) ಈ 20 ಲಕ್ಷ ಕೋಟಿ ಪ್ಯಾಕೇಜನ್ನು ಘೋಷಿಸುವ ಮುನ್ನವೇ ಬಜೆಟ್ಟಿನಲ್ಲಿ ಈ ಹಿಂದೆಯೇ ಮಾಡಿದ್ದ ಘೋಷಣೆಗಳನ್ನೂ ಮತ್ತು ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸುತ್ತಾ ಬರುವ ಹಣಕಾಸನ್ನೂ ಕ್ರೋಢೀಕರಿಸಿ ಈ 20 ಲಕ್ಷ ಕೋಟಿ ಕೋವಿಡ್ ಪ್ಯಾಕೇಜಿನ ಭಾಗವಾಗಿ ಸೇರಿಸಲಾಗಿದೆ!
3) ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೃಷಿ, ಮೀನುಗಾರಿಕೆಗೆ ಸಂಬಂಧಿಸಿದ 1 ಲಕ್ಷ 40 ಸಾವಿರ ಕೋಟಿ ರೂಪಾಯಿಗಳನ್ನು ಘೋಷಿಸಿರುವುದು ಇವತ್ತಿನ ತುರ್ತಿಗೆ ಪ್ರಯೋಜನಕ್ಕೆ ಬಾರಲಾಗದ ಒಂದು ಆಶಯ ಯೋಜನೆಯಾಗಿದೆ.
4) ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಎಲ್ಲಾ ಕೂಡಿ ಕಳೆದು ವಾಸ್ತವವಾಗಿ ಸರ್ಕಾರ ಕೋವಿಡ್ನ ಆರ್ಥಿಕ ಮುಗ್ಗಟ್ಟು ಎದುರಿಸಲು ವಾಸ್ತವವಾಗಿ ಘೋಷಿಸಿರುವುದು ಹೆಚ್ಚೆಂದರೆ 2 ಲಕ್ಷ ಕೋಟಿ ರೂಪಾಯಿಗಳಾಗಬಹುದಷ್ಟೆ. ಹೀಗೆಂದೇ ಎಲ್ಲಾ ಆರ್ಥಿಕ ತಜ್ಞರೂ, ವಿವಿಧ ಬ್ಯಾಂಕಿನ ಮುಖ್ಯಸ್ಥರೂ ಹೇಳುತ್ತಿದ್ದಾರೆ. ಸರ್ಕಾರವೂ ಇದನ್ನು ನಿರಾಕರಿಸಿಲ್ಲ. ಹೀಗಿದೆ ಇದರ ಕತೆ.
ವಾಸ್ತವ ಹೀಗಿರುವಾಗ, ಈ ಕೊರೋನ ದುರಂತ ಸಂದರ್ಭದಲ್ಲಿನ ಸಮಾಜೋ-ಆರ್ಥಿಕ ಬಿಕ್ಕಟ್ಟನ್ನು ನಿಜವಾಗಿ, ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸುವ ಸಲುವಾಗಿ ದೇಶದ 1% ಅತಿಶ್ರೀಮಂತರಿಗೆ ಸಂಪತ್ತಿನ ಮೇಲೆ 2%, ಸಂಪತ್ತಿನ ತೆರಿಗೆ ಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲೋಸುಗ ದೇಶದ ಪ್ರಜ್ಞಾವಂತರು 2020 ಮೇ 1ರಂದು ಪಿಟಿಷನ್ ಹಾಕಿದ್ದಾರೆ. ಈ 2020 ಮೇ 1ರ ಪಿಟಿಷನ್ಗೆ ಕರ್ನಾಟಕ ಜಾಗೃತ ಸಮುದಾಯವೂ ಜೊತೆಗೂಡಬೇಕೆಂದು ವಿನಂತಿಸುತ್ತೇವೆ. ಇದಕ್ಕಾಗಿ, ಇಲ್ಲಿ ಲಗತ್ತಿಸಿರುವ 2020 ಮೇ 1ರ ಪಿಟಿಷನ್ಗೆ ಮಾಧ್ಯಮ ಪ್ರಕಟಣೆ, ಸಾಮಾಜಿಕ ಜಾಲತಾಣ ಪ್ರಚಾರ ಹಾಗೂ ಸಹಿ ಮಾಡುವ ಮೂಲಕ ಬೆಂಬಲಿಸಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇವೆ.
ಕರ್ನಾಟಕದ ಪ್ರವರ್ತಕರು
1• ಎ.ಆರ್.ವಾಸವಿ (ಸಾಮಾಜಿಕ ಮಾನವಶಾಸ್ತ್ರಜ್ಞೆ, ನಿವೃತ್ತ ಪ್ರಾಧ್ಯಾಪಕರು NIAS, ಬೆಂಗಳೂರು )
2• ವಿ.ಕೆ.ನಟರಾಜ್ (ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ).

  1. ಟಿ.ಆರ್.ಚಂದ್ರಶೇಖರ (ನಿವೃತ್ತ ಪ್ರಾಧ್ಯಾಪಕರು, ಕನ್ನಡ ವಿವಿ, ಅಭಿವೃದ್ಧಿ ಆರ್ಥಿಕ ತಜ್ಞರು)
    4• ಪುರುಷೋತ್ತಮ ಬಿಳಿಮಲೆ (ಕನ್ನಡ ಪ್ರಾಧ್ಯಾಪಕರು, ಭಾರತೀಯ ಭಾಷೆಗಳ ಅದ್ಯಯನ ಕೇಂದ್ರ, ಜೆಎನ್ಯು)
    5• ದೇವನೂರ ಮಹಾದೇವ (ಲೇಖಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು)
    6• ಎಸ್.ಆರ್.ಹಿರೇಮಠ ( ಸಂಚಾಲಕರು, ಸಿಟಿಜನ್ಸ್ ಫಾರ್ ಡೆಮಾಕ್ರಸಿ)
    7• ದು. ಸರಸ್ವತಿ (ಬರಹಗಾರರು, ಸಾಮಾಜಿಕ ಕಾರ್ಯಕರ್ತರು)
    8• ಚುಕ್ಕಿ ನಂಜುಂಡಸ್ವಾಮಿ (ಕೆ.ಆರ್.ಆರ್.ಎಸ್, ಅಮೃತ ಭೂಮಿ)
    9• ರೂಪ ಹಾಸನ (ಬರಹಗಾರರು, ಪ್ರೇರಣಾ ವಿಕಾಸ ವೇದಿಕೆ, ಹಾಸನ)
    10• ಸಪ್ತಗಿರಿ ಐಯ್ಯಂಗಾರ್ [ People’s Association In Grassroots Action and Movement]
    11• ಎ.ನಾರಾಯಣ (ಸಹ ಪ್ರಾಧ್ಯಾಪಕರು, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ)
    12• ಕೆ.ಸಿ.ರಘು (ಆಹಾರ ತಜ್ಞರು)
    13• ಪ್ರಕಾಶ ಕಮ್ಮರಡಿ (ಕೃಷಿ ಆರ್ಥಿಕ ತಜ್ಞ ಮತ್ತು ಮಾಜಿ ಅಧ್ಯಕ್ಷ ಕರ್ನಾಟಕ ಕೃಷಿ ಬೆಲೆ ಆಯೋಗ, ಬೆಂಗಳೂರು)
    14• ಡಾ. ರಜಾಕ್ ಉಸ್ತಾದ್ (ರಾಜ್ಯ ಉಪಾಧ್ಯಕ್ಷರು ಹೈದರಬಾದ್ ಕರ್ನಾಟಕ ಹೋರಾಟ ಸಮಿತಿ)
    (ಈ ಮನವಿ ಪತ್ರವನ್ನು ವಿಸ್ತ್ರತವಾಗಿ ಹಂಚಿಕೆ ಮಾಡಿ)

Leave a Reply

Your email address will not be published. Required fields are marked *

You May Also Like

ಮೆಕ್ಕೆಜೋಳ ರೈತರಿಗೆ ಪರಿಹಾರ: ಇದರಲ್ಲಿ ಸಂಶಯ ಬೇಡ

ಕೊಪ್ಪಳ: ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ರೈತರನ್ನು ಎಂದಿಗೂ ಕೈಬಿಡುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ…

ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್..!

ಗಂಗಾವತಿ : ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಈ ಘಟನೆ ಕಾರಟಗಿಯಲ್ಲಿ…

‘ಶಾಲೆ ಯಾವಾಗ ಆರಂಭಿಸೋಣ? ಪಾಲಕರ ಅಭಿಪ್ರಾಯ ಕೇಳಿ’: ರಾಜ್ಯಗಳಿಗೆ ಕೇಂದ್ರದ ತರಾತುರಿಯ ಸಂದೇಶ!

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವಿಭಾಗವು ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ತರಾತುರಿಯಲ್ಲಿ ಒಂದು ಪತ್ರ ಕಳಿಸಿ, 3 ದಿನದಲ್ಲಿ ವಿದ್ಯಾರ್ಥಿಗಳ ಪಾಲಕರ ಅಭಿಪ್ರಾಯ ಸಂಗ್ರಹಿಸಿ, ಶಾಲೆ ಯಾವಾಗ ಆರಂಭಿಸಬೇಕು ಎಂದು ಸಲಹೆ ಪಡೆಯಿರಿ ಎಂದು ತಿಳಿಸಿದೆ. ಅಗಸ್ಟ್, ಸೆಪ್ಟೆಂಬರ್ ಅಥವಾ ಅಕ್ಟೋಬರ್ –ಯಾವ ತಿಂಗಳಲ್ಲಿ ಶಾಲೆ ಮರು ಆರಂಭವಾದರೆ ಒಳ್ಳೆಯದು ಎಂದು ಪಾಲಕರಿಂದ ತಿಳಿದುಕೊಂಡು, ಸರ್ಕಾರದ ಅಭಿಪ್ರಾಯ ರೂಪಿಸಿ ಕೂಡಲೇ ಕೇಂದ್ರಕ್ಕೆ ಕಳಿಸಿಕೊಡಿ ಎಂದು ತಿಳಿಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಸೋಂಕಿತರು ಹೆಚ್ಚಿನ…