ನರೇಗಲ್ಲ: ರಾಜಕೀಯ ನಾಯಕರ ಹಗ್ಗ ಜಗ್ಗಾಟದಲ್ಲಿ 10 ವರ್ಷಗಳಿಂದ ಪಾಳುಬಿದಿದ್ದ ಆಶ್ರಯ ಮನೆಳಿಗೆ ಜನಸಾಮಾನ್ಯರು ಪ್ರವೇಶ ಪಡೆದ ಘಟನೆ ಗದಗ ಜಿಲ್ಲೆ ನರೆಗಲ್ ನಲ್ಲಿ ನಡೆದಿದೆ.

ಇರುವ ಆಶ್ರಯ ಮನೆಗಳು ತಮ್ಮ ಹೆಸರಿಗೆ ಬಾರದಿದ್ದರೂ ಆಡಳಿತ ಯಂತ್ರದ ನಿರ್ಲಕ್ಷ್ಯ ಹಾಗೂ ತಮ್ಮ ಸಂಕಷ್ಟ ಸಹಿಸಲಾರದೆ ಮನೆಗಳನ್ನು ಸ್ವಚ್ಛಗೊಳಿಸಿಕೊಂಡು ಪ್ರವೇಶಿಸಿದ್ದಾರೆ. ಇದೀಗ ಯಾವುದೇ ಕಾರಣಕ್ಕೂ ನಮಗೆ ಮನೆ ನೀಡುವವರೆಗೂ ನಾವು ಈ ಮನೆಗಳನ್ನು ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಸೂಕ್ತ ಫಲಾನುಭವಿಗಳನ್ನು ಗುರುತಿಸಿ ಆಶ್ರಯ ನಿವೇಶನಗಳನ್ನು ಹಂಚಿಕೆ ಮಾಡುತ್ತೇನೆ. ಉಳಿದ ಜಾಗದಲ್ಲಿ ಇನ್ನೂ ಹೆಚ್ಚಿನ ನಿವೇಶನಗಳನ್ನು ಕಟ್ಟಿಸಿಕೊಡುತ್ತೇನೆ ಎಂದು ಚುನಾವಣೆ ಪ್ರಚಾರದಲ್ಲಿ ಮಾತು ಕೊಟ್ಟಿದ್ದ ಶಾಸಕ ಕಳಕಪ್ಪ ಜಿ. ಬಂಡಿಯವರು ತಮ್ಮ ಆಡಳಿತದ ಅರ್ಧ ಅವಧಿ ಮುಗಿಸಿದರು ನಮ್ಮತ್ತ ತಿರುಗಿಯೂ ನೋಡಿಲ್ಲ, ಆದರೆ ಮನೆಯಿಲ್ಲದೆ ನಾವು ಬೀದಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಚುನಾಯಿತ ವಾರ್ಡಿನ ಸದಸ್ಯರು ಮನೆ ಇದ್ದವರಿಗೆ, ಶ್ರೀಮಂತರಿಗೆ ಮನೆ ಕೊಡುತ್ತಿದ್ದಾರೆ. ಆದರೆ ಶಾಸಕರು ಮಾತ್ರ ನಮಗೆ ಸಂಬಂಧ ಇಲ್ಲವೆಂಬಂತೆ ಮೌನವಾಗಿದ್ದಾರೆ. ಹಾಗಾಗಿ ನಾವು ಇಂದು ಇಲ್ಲಿನ ಮುಳ್ಳಿನ ಕಂಟಿಗಳನ್ನು ಸ್ವಚ್ಚಗೊಳಿಸಿ, ಬಣ್ಣ ಹಚ್ಚಿ ಮನೆ ಒಳಗೆ ಬಂದಿದ್ದೇವೆ. ಯಾರು ಹೆಳಿದರು ಹೋಗುವುದಿಲ್ಲ. ಕಳುಹಿಸುವುದಾದರೆ ನಮಗೆ ಮನೆ ಕೊಟ್ಟು ಕಳುಹಿಸಲಿ ಎಂದು ನಿವೇಶನ ರಹಿತರಾದ ಸಣ್ಣದುರ್ಗವ್ವ ಹಳ್ಳದಮನಿ, ಗೀತಾ ಹಳ್ಳದಮನಿ, ಮಾರವ್ವ ಹೊಂಬಳ, ರೇಣುಕಾ ವಾಲ್ಮೀಕಿ, ಯಮನವ್ವ ಬಾದನಟ್ಟಿ ಆಗ್ರಹಿಸಿದರು.

ಅಂಬೇಡ್ಕರ್ ನಗರದ ನಿವಾಸಿಗಳಾದ ರಾಜು ಹಳ್ಳದಮನಿ ಹಾಗೂ ಹುಚ್ಚಪ್ಪ ಹಳ್ಳದಮನಿ ಎಂಬುವರಿಗೆ ಮನೆ ಇಲ್ಲದೆ ಮಳೆ ಬಂದಾಗ ಹೊರಗೆ ಬೀದಿಯಲ್ಲಿ ಮಲಗುತ್ತಿದ್ದರು.  ಹಾಗಾಗಿ ಅವರಿಗೆ ಆಶ್ರಯ ನಿವೇಶನದಲ್ಲಿ ತಾತ್ಕಾಲಿಕವಾಗಿ ಆಶ್ರಯಿಸಿ ಎಂದು ಹೇಳಿದ್ದೇ ಆದರೆ ಜನರು ದಂಡೋಪದಂಡವಾಗಿ ಬಂದಿದ್ದಾರೆ. ಕೇವಲ ಎರಡೇ ದಿನಗಳಲ್ಲಿ  ಗಂಡ, ಹೆಂಡತಿ, ಮಕ್ಕಳ ಸಮೇತ ಬೀದಿ ದೀಪ, ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದ ನಿವೇಶನಕ್ಕೆ ನೂರಾರು ಕುಟುಂಬಗಳು ದಿಢೀರನೆ ಬಂದಿರುವುದು ಆಶ್ಚರ್ಯದ ಸಂಗತಿಯಾಗಿದೆ ಎಂದು 6ನೇ ವಾರ್ಡಿನ ಮುಖಂಡ ನಿಂಗಪ್ಪ ಚಲವಾದಿ ತಿಳಿಸಿದರು.

            ಇನ್ನು ಮತ್ತೊಂದೆಡೆ ಆಶ್ರಯ ನಿವೇಶನ ಹಂಚಿಕೆಯಲ್ಲಿ ಆಯ್ಕೆಯಾಗಿ 30 ಸಾವಿರ ರೂಪಾಯಿಯ ವಂತಿಕೆ ಹಣವನ್ನು ತುಂಬಿರುವ ಫಲಾನುಭವಿಗಳು ನಾವೆಲ್ಲಿಗೆ ಹೋಗಬೇಕು. ನಮ್ಮ ಮನೆ ಎಲ್ಲಿದೆ ಎಂದು ವಂತಿಕೆ ತುಂಬಿದ ರಶೀದಿಯನ್ನು ಹಿಡಿದುಕೊಂಡು ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಬೆನ್ನುಬಿದ್ದಿದ್ದಾರೆ ನಿಜವಾದ ಫಲಾನುಭವಿಗಳು. ಆಶ್ರಯ ನಿವೇಶನದ ಪಟ್ಟಾ ಬುಕ್‌ನ ಝರಾಕ್ಸ ಪ್ರತಿಯನ್ನು ಪಡೆದ ಕೆಲವು ಫಲಾನುಭವಿಗಳು ಅಕ್ರಮ ಪ್ರವೇಶ ಪಡೆದವರೊಂದಿಗೆ ಇದು ನನಗೆ ಹಂಚಿಕೆಯಾದ ಮನೆ ಎಂದು ವಾದಕ್ಕೆ ಇಳಿದಿದ್ದಾರೆ.

ಬುಧವಾರ ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯ್ತಿ ಕಿರಿಯ ಆರೋಗ್ಯ ಸಹಾಯಕ ರಾಮಚಂದ್ರ ಕಜ್ಜಿ, ಅರೀಫ್ ಮಿರ್ಜಾ ಹಾಗೂ ಸಿಬ್ಬಂದಿಗಳು. ಈ ರೀತಿಯಲ್ಲಿ ಏಕಾಏಕಿ ಪ್ರವೇಶ ಮಾಡುವುದು ಕಾನೂನು ಬಾಹಿರವಾಗುತ್ತದೆ.  ಈಗಾಗಲೇ 150ಕ್ಕೂ ಹೆಚ್ಚು ಫಲಾನುಭವಿಗಳು 10 ರಿಂದ 15 ಸಾವಿರದಂತೆ ವಂತಿಕೆಯನ್ನು ತುಂಬಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಮನೆಯನ್ನು ಖಾಲಿ ಮಾಡಬೇಕು ಎಂದು ಅಕ್ರಮ ಪ್ರವೇಶ ಪಡೆದ ಕುಟುಂಬಗಳಿಗೆ ತಿಳಿ ಹೇಳಿದರು.  ಸಂಜೆ ಮುಖ್ಯಾಧಿಕಾರಿಯೂ ಹೋಗಿ ಖಾಲಿ ಮಾಡುವಂತೆ ಹೇಳಿದರು ಜನರು ಹೋಗುವುದಿಲ್ಲ ಎಂದು ವಾಗ್ವಾದಕ್ಕಿಳಿದರು.

            ಮನೆ ಇಲ್ಲದೆ ಅಲ್ಲಿ ಇಲ್ಲಿ ಅಂತ ಸಿಗುವ ಯಾವುದೋ ಖಾಲಿ ಜಾಗದ ಗುಡಿಸಲಲ್ಲಿ, ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದೇವು. ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಗಾಳಿ, ಮಳೆ ಬಂದರೆ ಗುಡಿಸಲಲ್ಲಿ, ಶೆಡ್ಡ್‌ನಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಹಾಗಾಗಿ ಖಾಲಿ ಇರುವ ಆಶ್ರಯ ನಿವೇಶನವನ್ನು ಸ್ವಚ್ಚಗೊಳಿಸಿದ್ದೇವೆ, ದುಸ್ಥಿತಿಗೆ ತಲುಪಿದ್ದ ಗೋಡೆ, ಬಾಗಿಲನ್ನು ದುರಸ್ತಿಗೊಳಿಸಿದ್ದೇವೆ. ಸುಣ್ಣಬಣ್ಣ ಬಳಿದು ನೆಲೆಸಿದ್ದೇವೆ. ಯಾರೇ ಬಂದು ಹೇಳಿದರು ನಾವು ನಿವೇಶನವನ್ನು ಬಿಟ್ಟು ಹೋಗುವುದಿಲ್ಲ ಎಂದು ರೇಣವ್ವ ಹಕಾರಿ, ಕಳಕಮ್ಮ ಎಲಿಗಾರ, ಅಲ್ಲವ್ವ ಹಳ್ಳದಮನಿ, ಪಾರವ್ವ ಹೊಂಬಳ, ಗಂಗವ್ವ ಹಳ್ಳದ ಮನಿ ಪಟ್ಟು ಹಿಡಿದರು.

1 comment
Leave a Reply

Your email address will not be published. Required fields are marked *

You May Also Like

ಸಾರಿಗೆ ಸಿಬ್ಬಂಧಿಗಳ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದ ಸಾರಿಗೆ ನೌಕರರ ಮಹಾ ಮಂಡಳ

ಬೆಂಗಳೂರು: ಕೋವಿಡ್-19ರ ದುಷ್ಪರಿಣಾಮದಿಂದ ಸಾರಿಗೆ ಸಂಸ್ಥೆಗಳ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಾರಿಗೆ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ…

ಅರಣ್ಯ ಇಲಾಖೆಯ ದೌರ್ಜನ್ಯ : ರೈತ ಮಹಿಳೆ ಬಲಿ

ಆಕ್ರೋಶಗೊಂಡ ಗ್ರಾಮಸ್ಥರು: ಅರಣ್ಯಾಧಿಕಾರಿಗಳ ದಿಗ್ಬಂಧನ ಉತ್ತರಪ್ರಭಮುಂಡರಗಿ: ತಾಲೂಕಿನ ಕೆಲೂರ ಗ್ರಾಮದ ಬಗರಹುಕುಂ ಸಾಗುವಳಿ ಮಾಡುವ ರೈತರನ್ನು…

ಎಸ್.ಎಸ್.ಎಲ್ಸಿ ಪರೀಕ್ಷೆ ಕುರಿತು ಶಿಕ್ಷಣ ಸಚಿವರ ವಿರುದ್ಧ ದೂರು ದಾಖಲು!

ಬೆಂಗಳೂರು: ರಾಜ್ಯದಲ್ಲಿ ಜೂನ್‌ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಬಗ್ಗೆ ವೇಳಾಪಟ್ಟಿ ಕೂಡ ಬಿಡುಗಡೆಯಾಗಿತ್ತು. ಈಗಾಗಲೇ…