ಬೆಂಗಳೂರು: ಕೋವಿಡ್-19ರ ದುಷ್ಪರಿಣಾಮದಿಂದ ಸಾರಿಗೆ ಸಂಸ್ಥೆಗಳ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಾರಿಗೆ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ಕುರಿತು ಸರ್ಕಾರದ ಗಮನ ಸೆಳೆಯಲು, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಬೆಂಗಳೂರು (ಅ.ಕ.ರಾ.ರ.ಸಾ.ನೌ.ಮಮಂ.ಬೆಂಗಳೂರು) ಮಹಾಪ್ರಧಾನ ಕಾರ್ಯದರ್ಶಿ ಬಿ.ಜಯದೇವ ರಾಜೇ ಅರಸ್ ಪತ್ರ ಬರೆದಿದ್ದಾರೆ.
“ಕೋವಿಡ್-19 ಸಾರಿಗೆ ಸಂಸ್ಥೆಗಳ ಆರ್ಥಿಕ ಮತ್ತು ಅವುಗಳ ಕಾರ್ಯ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಅವುಗಳ ಚೇತರಿಕೆ ಸಾಕಷ್ಟು ಕಾಲ ಬೇಕಾಗಬಹುದು. ಅಗತ್ಯ ಸೇವೆಯ ಹಿನ್ನೆಲೆಯಲ್ಲಿ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದರು “ಕೊರೊನಾ” ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದ ಪೂರ್ಣ ಪ್ರಮಾಣದ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಪ್ರಯುಕ್ತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಹಾಜರಾಗುತ್ತಿದ್ದರೂ, ಬಹಳಷ್ಟು ಕಾರ್ಮಿಕರಿಗೆ ಕೆಲಸ ಸಿಗದೇ ಮನೆಗೆ ಮರಳಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ಹಾಜರಾತಿ, ರಜೆ, ಅನುಸೂಚಿಗಳ ಆಚರಣೆ ಇತ್ಯಾದಿ ವಿಷಯಗಳಲ್ಲಿ ನಿಗಮಗಳು, ವಿಭಾಗಗಳಲ್ಲಿ ಘಟಕಗಳಲ್ಲಿ ಏಕ ರೀತಿಯ ನೀತಿ/ನಿಯಮಗಳು ಇಲ್ಲದೆ ಕಾರ್ಮಿಕರನ್ನು ಗೊಂದಲದಲ್ಲಿಡಲಾಗಿದೆ” ಎಂದು ಅವರು ಹೇಳಿದ್ದಾರೆ.
“ಈ ಮಧ್ಯೆ ವಿಭಾಗ ಮಟ್ಟದಲ್ಲಿ ಅಧಿಕಾರಿಗಳು ಅಸಭ್ಯತನದಿಂದ ಮತ್ತು ಉದ್ಧಟತನದಿಂದ ನಡೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಸಂಸ್ಥೆಯ ಸಂಪತ್ತನ್ನು ಹುಟ್ಟುಹಾಕುವುದರ ಮತ್ತು ಅದರ ಪ್ರಗತಿಗೆ ಕಾರ್ಮಿಕರ ಪಾತ್ರ ಹೆಚ್ಚಿದೆ ಎಂಬುದನ್ನು ಅಧಿಕಾರಿಗಳು ಮನಗಾಣಬೇಕು. ಈ ಸಮಯದಲ್ಲಿ ಅಧಿಕಾರಿಗಳು ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳದಿದ್ದರೆ ಅದರ ಪರಿಣಾಮ ಸಂಸ್ಥೆ ಮೇಲಾಗುತ್ತದೆ ಎಂಬುದನ್ನು ತಿಳಿಯಬೇಕು. ಈಗಲೂ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ತಡೆಯೊಡ್ಡಬೇಕು” ಎಂದಿದ್ದಾರೆ.
“60 ವರ್ಷಗಳ ದೀರ್ಘ ಇತಿಹಾಸ ಹೊಂದಿ ಬೃಹದಾಕಾರವಾಗಿ ಬೆಳೆದು, ರಾಷ್ಟ್ರದಲ್ಲಿಯೇ ಉತ್ತಮ ಸಾರಿಗೆ ಸಂಸ್ಥೆಗಳೆಂದು ಹೊಗಳಿಕೆ ಹೊಂದಿರುವ ನಮ್ಮ ಸಂಸ್ಥೆಗಳು ಕಾರ್ಮಿಕರಿಗೆ ಒಂದೆರಡು ತಿಂಗಳ ನಿಜ ಸಂಬಳ ನಿಭಾಯಿಸಲು ವಿಫಲತೆ ಹೊಂದಿರುವುದು ನಿಜಕ್ಕೂ ಶೋಚನೀಯ ಮತ್ತು ಎಲ್ಲಿ ಎಡವಿದ್ದೇವೆ ಎಂಬುದರ ಆತ್ಮಾವಲೋಕನದ ಅಗತ್ಯವಿದೆ” ಎಂದು ಹೇಳಿದ್ದಾರೆ.
“ಕೋವಿಡ್-19 ನಮ್ಮೆಲ್ಲರನ್ನು ಎಚ್ಚರಿಸಿದೆ. ನಾವು ಹೇಗಿರಬೇಕಾಗಿತ್ತು ಮತ್ತು ಮುಂದೆ ಹೇಗಿರಬೇಕು ಎಂಬುದನ್ನು ತಿಳಿಸಿರುವ ಕೋವಿಡ್-19, ರಾಜ್ಯ ಸರ್ಕಾರ ಮತ್ತು ಸಂಸ್ಥೆಗಳು ತಮ್ಮ ಹಳೆಯ ಡಂಭಾಚಾರದ ವ್ಯವಸ್ಥೆ ಆಡಳಿತ ವೈಖರಿ, ಅವೈಜ್ಞಾನಿಕ ಕಾರ್ಯಾಚರಣೆ, ರಾಜಕೀಯ ನಿಲುವು ಇವುಗಳನ್ನು ಬದಿಗೊತ್ತಿ ಸಾರಿಗೆ ಸಂಸ್ಥೆಗೆ ಒಂದು ಹೊಸ ರೂಪುರೇಷೆಗಳನ್ನು ಕೊಡಬೇಕಾಗಿದೆ” ಎಂದು ಸಲಹೆ ನೀಡಿದ್ದಾರೆ
“ಸಮಾಜ ಮತ್ತು ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿರುವ ಮತ್ತು ಸರ್ಕಾರದ ಪ್ರತಿಷ್ಠೆಯಾಗಿರುವ ಸಾರಿಗೆ ಸಂಸ್ಥೆಗಳನ್ನು ಉಳಿಸಿ ಮತ್ತು ಬೆಳೆಸುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ಇರುತ್ತದೆ. ಕೇವಲ ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದಂತೆ ಇಂತಿಷ್ಟು ಹಣವನ್ನು ಸಂಸ್ಥೆಗಳಿಗೆ ನೀಡಿ ಕೈತೊಳೆದುಕೊಳ್ಳುವ ಮನೋಭಾವವನ್ನು ರಾಜ್ಯ ಸರ್ಕಾರ ಬಿಡಬೇಕು” ಎಂದು ಒತ್ತಾಯಿಸಿದ್ದಾರೆ.
“ಸಾರಿಗೆ ಸಂಸ್ಥೆಗಳು ಕೆಂಪು ವಲಯದಿಂದ ಹೊರಬರುವವರಿಗೆ ರಾಜ್ಯ ಸರ್ಕಾರ ಕಾರ್ಮಿಕರ ವೇತನ ಮತ್ತು ಇತರೆ ಅಗತ್ಯ ಖರ್ಚುಗಳಿಗೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು. ಕಾರ್ಮಿಕರು ಪ್ರತಿ ತಿಂಗಳು ಬಕಪಕ್ಷಿಯಂತೆ ತಮ್ಮ ವೇತನಕ್ಕಾಗಿ ಕಾಯುವುದು ತಪ್ಪಬೇಕು. ಇಲ್ಲವಾದಲ್ಲಿ ಕಾರ್ಮಿಕರು ಕ್ಷೋಭೆಗೆ ಒಳಗಾಗಿ ಸಂಸ್ಥೆಯ ಕಾರ್ಯಕ್ಷಮತೆಯ ಮೇಲೆ ಪರಿಣಾಮಬೀರುತ್ತದೆ” ಎಂದು ಅಲವತ್ತುಕೊಂಡಿದ್ದಾರೆ.
“ಕಾರ್ಮಿಕರಿಗೆ ಸಂಬಂಧಿಸಿದಂತೆ ಈ ಕೆಳಕಂಡ ವಿಷಯಗಳಲ್ಲಿ ಗೊಂದಲ ಮತ್ತು ಸಮಸ್ಯೆಗಳು ಇಂತಿವೆ.
- ದಿನಾಂಕ: 04/05/ 2020ರ ನಂತರ ಕಾರ್ಮಿಕರಿಗೆ ಹಾಜರಾತಿ ನೀಡುವ ಕುರಿತು.
- ಕೆಲಸಕ್ಕೆ ಹಾಜರಾಗಿ ಕೆಲಸ ಸಿಗದವರಿಗೆ ಹಾಜರಾತಿ ನೀಡುವುದು.
- ಖಾತೆಯಲ್ಲಿ ರಜೆ ಇಲ್ಲದವರಿಗೆ Leave Without Due ನೀಡುವ ಕುರಿತು.
- 55 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಸಂಬಂಧಿಸಿದಂತೆ ಸ್ಪಷ್ಟ ಮತ್ತು ಸೂಕ್ತ ನಿಲುವು ಕುರಿತು.
- ಪ್ರಸ್ತುತ ಇರುವ ಸ್ವಯಂ ನಿವೃತ್ತಿ ಯೋಜನೆ ಉತ್ತೇಜನಕಾರಿ ಆಗುವುದಿಲ್ಲ. ಸೂಕ್ತ ಬದಲಾವಣೆ ಅಗತ್ಯವಿದೆ.
- ಪ್ರಸ್ತುತ ಆಚರಿಸುತ್ತಿರುವ ಕಾರ್ಯಸೂಚಿಗಳನ್ನು ಸದ್ಯದ ಪರಿಸ್ಥಿತಿಗೆ ತಕ್ಕಂತೆ ರೂಪಿಸುವುದು.
ಮೇಲಿನ ಎಲ್ಲಾ ಅಂಶಗಳು ಮತ್ತು ಇನ್ನಿತರ ಪೂರಕ ವಿಷಯಗಳ ಬಗ್ಗೆ ಮಹಾಮಂಡಳಿಯು ಸರ್ಕಾರ ಮತ್ತು ಸಂಸ್ಥೆಗಳ ಆಡಳಿತ ವರ್ಗದೊಂದಿಗೆ ಚರ್ಚಿಸಲು ಬಯಸುತ್ತದೆ. ಕಾರ್ಮಿಕರ, ಸಂಸ್ಥೆಗಳ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾಮಂಡಳಿಯ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲು ಕೂಡಲೇ ಏರ್ಪಾಡು ಮಾಡುವ ಕೋರುತ್ತದೆ” ಎಂದು ಹೇಳಿದ್ದಾರೆ.