ಗದಗ: ನಿನ್ನೆಯಷ್ಟೆ ರಾಜ್ಯದ ಉಡುಪಿ ಜಿಲ್ಲೆಯ ಕೊರೋನಾ ಸೋಂಕು ವ್ಯಾಪಕವಾಗುವುದರಲ್ಲಿ ಕ್ವಾರಂಟೈನ್ ಕೇಂದ್ರಗಳ ಪಾತ್ರ ಹಾಗೂ ಅವ್ಯವಸ್ಥೆ ಕುರಿತು ಉತ್ತರಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೆ ಇದೀಗ ಗದಗ ಜಿಲ್ಲೆಯಲ್ಲಿನ ನಿನ್ನೆಯ ಪ್ರಕರಣದ ಟ್ರಾವೆಲ್ ಹಿಸ್ಟರಿ ಬೆನ್ನತ್ತಿದಾಗ ತಾಲೂಕು ಆಡಳಿತದ ನಿರ್ಲಕ್ಷ್ಯ ಎದ್ದು ತೋರುತ್ತಿದೆ.
ಶಿರಹಟ್ಟಿ ತಾಲೂಕಿನ ವರವಿಯಲ್ಲಿನ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ, ತಾಲೂಕು ಆಡಳಿತ ತೋರಿದ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಕೊರೋನಾ ಸೋಂಕಿನ ಬಗ್ಗೆ ಆಡಳಿತ ವ್ಯವಸ್ಥೆಗೇಕೆ ಗಂಭೀರತೆ ಬಂದಿಲ್ಲ ಎಂದು ಜನರು ಮಾತಾಡಿಕೊಳ್ಳುವಂತಾಗಿದೆ. ಹೈರಿಸ್ಕ್ ರಾಜ್ಯಗಳಿಂದ ಬಂದ ಜನರ ಮೇಲೆ ಹದ್ದಿನ ಕಣ್ಣು ಇಡುವ ಜೊತೆಗೆ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಬೇಕು. ಆದ್ರೆ ಪಿ-1179 ಪ್ರಕರಣದ ಟ್ರಾವೆಲ್ ಹಿಸ್ಟರಿ ಜನರನ್ನು ಭಯಬೀಳಿಸುತ್ತಿದೆ. ಇಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿಲ್ಲ. ಆ ಕುಟುಂಬದ 17 ಜನ ತಮಿಳುನಾಡಿನ ಚೆನೈನಿಂದ ಮೇ 12 ಕ್ಮೆ ಶಿರಹಟ್ಟಿ ಪಟ್ಟಣಕ್ಕೆ ಆಗಮಿಸಿದ್ದರು. ಆದರೆ ಇದರಲ್ಲಿ ಆರು ಜನರಿಗೆ ಮಾತ್ರ ತಪಾಸಣೆ ಮಾಡಲಾಗಿತ್ತು. ಕ್ವಾರೇಂಟೈನ್ ಅವಧಿಯಲ್ಲಿ ಸೋಂಕಿತ ಪುತ್ರನಿಗೆ ಊಟ ನೀಡಿದ ತಾಯಿಗೂ ಕೊರೊನಾ ಕಂಟಕ ಶುರುವಾಗಿದೆ. ಇಷ್ಟೇ ಅಲ್ಲ ಆ ಕುಟುಂಬ ಶಿರಹಟ್ಟಿ ಆಸ್ಪತ್ರೆಗೆ ತಪಾಸಣೆ ಬಂದು ಪಟ್ಟಣದಲ್ಲಿ ಓಡಾಡಿ ಮಕ್ಕಳಿಗೆ ಬಿಸ್ಕಿಟ್ ಹಾಗೂ ಇತರೇ ವಸ್ತು ಖರೀದಿ ಮಾಡಿದ್ದಾರೆ. ಇದರಿಂದ ಶಿರಹಟ್ಟಿ ಪಟ್ಟಣದ ಜನರಲ್ಲಿ ಆತಂಕ ಮೂಡಿದೆ.
ಅವ್ಯವಸ್ಥೆಗಳೇನು..?
ಚನ್ನೈನಿಂದ ಬಂದ 17 ಜನರಲ್ಲಿ ವೈದ್ಯರು ತಪಾಸಣೆ ಮಾಡಿದ್ದು ಕೇವಲ ಆರು ಜನರಿಗೆ ಮಾತ್ರ. ಉಳಿದವರಿಗೆ ತಪಾಸಣೆ ಮಾಡದೇ ಆರೋಗ್ಯ ಇಲಾಖೆಗೆ ಕಳಿಸಿದ್ದಾರೆ. ಆದರೆ ಕ್ವಾರಂಟೈನ್ ಕೇಂದ್ರದಲ್ಲಿ ಎಲ್ಲ 17 ಜನ್ರನ್ನು ಒಂದೇ ಕೋಣೆಯಲ್ಲಿ ಹಾಕಿದ್ದಾರೆ. ಸಾಮಾಜಿಕ ಅಂತರ ಇಲ್ಲದೇ 17 ಜನರು ಮಕ್ಕಳೊಂದಿಗೆ ವಾಸವಾಗಿದ್ದರು. ಮೇ 17 ರಂದು ಈ ಕುಟುಂಬದ 30 ವರ್ಷದ ವ್ಯಕ್ತಿಗೆ ತಪಾಸಣೆ ಮಾಡಿದ್ದಾರೆ. ಕೊರೊನಾ ಲಕ್ಷಣಗಳು ಕಂಡು ಬಂದ ಕಾರಣ ಥ್ರೋಟ್ ಸ್ವ್ಯಾಬ್ ತೆಗೆದು ತಪಾಸಣೆಗೆ ಕಳುಹಿಸಿದರು. ನಿನ್ನೆಆ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕಾರಣದಿದಂದ ಇಡೀ ಕುಟುಂಬದ ಥ್ರೋಟ್ ಸ್ವ್ಯಾಬ್ ತಪಾಸಣೆ ಜಿಲ್ಲಾಡಳಿತ ಕಳಿಸಿದೆ.
ಚೆನೈ ನಿಂದ ಬಂದ 30 ವರ್ಷದ ಪಿ-1179 ವ್ಯಕ್ತಿಗೆ ತಾಯಿ ನಿತ್ಯವೂ ಶ್ರೀಮಂತಗಢ ಗ್ರಾಮದಿಂದ ಊಟ ನೀಡಿ ಪುತ್ರನ ಜೊತೆ ಕುಳಿತು ಮಾತನಾಡಿ ಹೋಗಿದ್ದರಂತೆ. ಹೀಗಾಗಿ ಕೊರೊನಾ ಪಾಸಿಟಿವ್ ಸುದ್ದಿ ಹರಡುತ್ತಿದ್ದಂತೆ ಶ್ರೀಮಂತಗಢ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿಯಾಗಿದೆ. ಇದೀಗ ಶಿರಹಟ್ಟಿ ತಾಲೂಕಿನಲ್ಲಿ ಕೊರೋನಾ ಕಂಟಕ ಶುರುವಾಗಿದೆ. ಜೊತೆಗೆ ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೂ ಭಯ ಶುರುವಾಗಿದೆ. ಕ್ವಾರಂಟೈನ್ ಕೇಂದ್ರದಲ್ಲೀ ಸಾಮಾಜಿಕ ಅಂತರ ಇಲ್ಲದೇ ಈ ಕುಟುಂಬ ವಾಸವಾಗಿತ್ತು. ಕ್ವಾರಂಟೈನ್ ಕೇಂದ್ರದಲ್ಲಿ ಪಾಲಿಸಬೇಕಾದ ನಿಯಮ ಹಾಗೂ ಇರಬೇಕಾದ ಸೌಲಭ್ಯಗಳು ಕೂಡ ಇಲ್ಲದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿರಹಟ್ಟಿ ತಹಶೀಲ್ದಾರ್ ಯಲ್ಲಪ್ಪ ಗೊಣೇನ್ನವರ್, ಚನ್ನೈನಿಂದ ಬಂದವರನ್ನು ತಪಾಸಣೆ ಮಾಡಿ ಕ್ವಾರೈಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅವ್ಯವಸ್ಥೆಯ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಈ ಬಗ್ಗೆ ಮಾಹಿತಿ ಪಡೆಯುವೆ ಎಂದಿದ್ದಾರೆ.
ಈ ಘಟನೆಯಿಂದ ಮಾತ್ರ ಶಿರಹಟ್ಟಿ ತಾಲೂಕಾಡಳಿತ ತನ್ನ ಜವಾಬ್ದಾರಿ ಮರೆತಿದೆ ಎನ್ನುವುದು ಸ್ಪಷ್ಟ. ಹೀಗಾದರೆ ಕೊರೊನಾ ಹೆಮ್ಮಾರಿ ಮಟ್ಟಹಾಕುವ ಸರ್ಕಾರದ ಉದ್ದೇಶ ಗತಿ ಏನು?