ಬೆಂಗಳೂರು: ಇತ್ತಿಚೆಗಷ್ಟೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಪಿಎಂ ಕೇರ್ ಹಾಗೂ ಕರ್ನಾಟಕ, ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇವೇಗೌಡ ಅವರನ್ನು ಪ್ರಶಂಶಿಸಿ ಪತ್ರ ಬರೆದಿದ್ದಾರೆ. ಪಿಎಂ ಕೇರ್ ಗೆ ನೀಡಿದ ದೇಣಿಗೆಯನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತೇನೆ. ನೀವು ನೀಡಿದ ದೇಣಿಗೆ ಇತರರಿಗೂ ಪ್ರೇರಣೆಯಾಗಲಿದೆ. ಕೋವಿಡ್ ವಿರುದ್ದದ ಹೋರಾಟದಲ್ಲಿ ಗೆಲುವು ಸಾಧಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ ಪತ್ರದಲ್ಲಿ ಬರೆಯಲಾಗಿದೆ.

ಪಿಎಂ ಕೇರ್, ಕರ್ನಾಟಕ ಮತ್ತು ಕೇರಳ ಸಿಎಂ ಪರಿಹಾರ ನಿಧಿಗೆ ದೇವೇಗೌಡ್ರು, ತಲಾ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು, ತಮಗೆ ಬರುವ ಪೆನ್ಸನ್ ಹಣದ ಮೂಲಕ ನೀಡಿದ್ದರು. ಕೊರೋನಾ ಸೋಂಕು ನಿಯಂತ್ರಣದ ವಿರುದ್ಧ ನಡೆದ ಹೋರಾಟದಲ್ಲಿ ಎಲ್ಲರೂ ಒಂದಾಗಬೇಕಾಗಿದೆ. ದೇಶದ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಪ್ರಯತ್ನಿಸೋಣ ಎಂದು ಎಚ್ಡಿಡಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.