ಉಡುಪಿ: ಜಿಲ್ಲೆಯಲ್ಲೀಗ ಮತ್ತೆ ಮರಗಳ್ಳ ಮಾಫಿಯಾಕ್ಕೆ ರೆಕ್ಕೆ ಪುಕ್ಕ ಬರಲಿದೆಯಾ? ಎಂಬ ಅನುಮಾನ ಉಡುಪಿ ಜಿಲ್ಲೆಯ ಜನರಲ್ಲಿ ಶುರುವಾಗಿದೆ. ಹೆಬ್ರಿ ವಲಯ ಅರಣ್ಯಾಾಧಿಕಾರಿ ವಿ.ಮುನಿರಾಜು ಮರಗಳ್ಳತನಕ್ಕೆ ಬ್ರೇಕ್ ಹಾಕಿದ್ದೆ ಅವರ ವರ್ಗಾವಣೆಗೆ ಕಾರಣವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಮರಗಳ್ಳತನ ತಡೆಯುವ ನಿಟ್ಟಿನಲ್ಲಿ ಕಠಿನ ಕ್ರಮ ಕೈಗೊಂಡಿದ್ದ ಮುನಿರಾಜ್ ಕಾನೂನು ಬಾಹಿರವಾಗಿ ಕೆಲಸ ಮಾಡುವವರಲ್ಲ. ಸ್ವತಃ ಜನಪ್ರತಿನಿಧಿಗಳು ಹೇಳಿದರೂ ಕೂಡ ತಾವು ಕಾನೂನು ಮೀರಿ ಹೋಗುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದರು. ಇವರ ಈ ಕರ್ತವ್ಯ ಪಾಲನೆಯೇ ವರ್ಗಾವಣೆಗೆ ಕಾರಣವಾಯಿತು ಎನ್ನಲಾಗಿದೆ. ಮುನಿರಾಜು ಅವರು ಹೆಬ್ರಿಗೆ ಬಂದ 6 ತಿಂಗಳಲ್ಲೆ ಕೇವಲ ಆರು ತಿಂಗಳಲ್ಲಿಯೇ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ಪ್ರಭಾವ ಇರುವುದಾಗಿ ಆರೋಪಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಆರು ತಿಂಗಳ ಹಿಂದೆ ಹೆಬ್ರಿ ವಲಯ ಅರಣ್ಯಾಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ವಿ.ಮುನಿರಾಜು ಅವರನ್ನು ಎ.೨೭ರಂದು ರಾಜ್ಯ ಸರಕಾರ ಬಂಡೀಪುರ ವನ್ಯಜೀವಿ ವಲಯಕ್ಕೆ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ರಾಜ್ಯಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಮುಕ್ತಾಯಗೊಂಡ ನಂತರ ಈ ಆದೇಶ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಧಿಕಾರ ಸ್ವೀಕರಿಸಿದ ಬಳಿಕ ಇವರು, ಬೇಳಂಜೆ ಗ್ರಾಮದ ಕೊಪ್ಪರಗುಂಡಿ ಎಂಬಲ್ಲಿ ಮಣ್ಣಿನ ಅಡಿಯಲ್ಲಿ ಹೂತಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ 87 ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು, ಕಾರ್ಕಳ ತಾಪಂ ಬಿಜೆಪಿ ಸದಸ್ಯ ಅಮೃತ್ ಕುಮಾರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಮೂಲಕ ಇವರು ಸ್ಥಳೀಯರಿಂದ ಮೆಚ್ಚುಗೆ ಪಾತ್ರರಾಗಿ, ಪ್ರಾಮಾಣಿಕ ಅಧಿಕಾರಿ ಎಂದೇ ಜನಮನ್ನಣೆ ಗಳಿಸಿದ್ದರು. ಸರಕಾರ ಈ ಆದೇಶವನ್ನು ರದ್ದುಗೊಳಿಸಿ ಮುಂದಿನ ಎರಡು ವರ್ಷಗಳ ಕಾಲ ಇವರಿಗೆ ಇಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡುವಂತೆ ಹೆಬ್ರಿ ಜನತೆ ಸಾಮಾಜಿಕ ಜಾಲ ತಾಣಗಳ ಮೂಲಕ ಒತ್ತಾಯಿಸಿದ್ದಾರೆ.