ದೆಹಲಿ: ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಜೀವವನ್ನು ಪ್ಲಾಸ್ಮಾ ಚಿಕಿತ್ಸೆಯಿಂದ ಉಳಿಸುವುದು ತೀರಾ ಕಷ್ಟ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇಂದು ಪ್ಲಾಸ್ಮಾ ಚಿಕಿತ್ಸೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ಲಾಸ್ಮಾ ಚಿಕಿತ್ಸೆಯಿಂದಾಗಿ ಗಂಭೀರಸ್ಥಿತಿಯಲ್ಲಿರುವವರ ಪರಿಸ್ಥಿತಿಯನ್ನು ಶೋಚನೀಯ ಸ್ಥಿತಿಗೆ ಹೋಗದಂತೆ ತಡೆಯಬಹುದು. ನಾವು ಈ ಸಂಗತಿಯನ್ನು ಕಂಡುಕೊಂಡಿದ್ದೇವೆ ಎಂದರು.
ಎಲ್ ಎನ್ ಜೆ ಪಿ ಮತ್ತು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ ನೀಡಲಾಗಿದೆ. ಎಲ್ ಎನ್ ಜೆ ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಕ್ಕೂ ಮುನ್ನಿಗಿಂತ ಸಾವಿನ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಕೊರೊನಾ ಸೋಂಕಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಸಮಸ್ಯೆಯೆಂದರೆ, ಸೋಂಕಿತರಲ್ಲಿ ಆಮ್ಲಜನಕದ ಪ್ರಮಾಣ ಇದ್ದಕ್ಕಿದ್ದಂತೆ ಕೊರತೆಯಾಗುತ್ತದೆ. ಆಮ್ಲಜನಕದ ಪ್ರಮಾಣ ಶೇ. 95ರಷ್ಟು ಇರಬೇಕು. ಇದು ಶೇ. 90ಕ್ಕಿಂತ ಕಡಿಮೆಯಾದರೆ ಇದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಆಮ್ಲಜನಕದ ಪ್ರಮಾಣ ಶೇ. 85ಕ್ಕಿಂತ ಕಡಿಮೆಯಾದರೆ ತೀರಾ ಗಂಭೀರ ಎಂದು ಪರಿಗಣಿಸಲಾಗುತ್ತದೆ. ಶೇ. 90-85ರ ಪ್ರಮಾಣದ ಆಮ್ಲಜನಕ ಹೊಂದಿರುವವರು ತೀವ್ರ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಾರೆ ಎಂದರು.