ರತನ್ ಲಾಲ್ ಖತ್ರಿ.. ಈ ಹೆಸರು ದೇಶದ ಮಟಕಾ ಪ್ರೇಮಿಗಳಿಗೆ ಖಂಡಿತಾ ಚಿರಪರಿಚಿತವಾಗಿರತ್ತೆ. ಬೇಕಿದ್ದರೆ ನೀವು ದೇಶದ ಗ್ರಾಮದ  ಯಾವುದೇ ಅನಕ್ಷರಸ್ಥನಿಗೆ ಕೇಳಿ ನೋಡಿ, ರತನ್ ಲಾಲ್ ಖತ್ರಿ ಎಂದರೆ ಓ! ಸೆಟ್ಟಾ, ಮಟಕಾ, ಓಸಿ ಎನ್ನುತ್ತಾರೆ. ಈ ದೇಶದಲ್ಲಿ ಓಸಿ (ಓಪನ್ ಮತ್ತು ಕ್ಲೋಸ್) ಎನ್ನುವ ನಿರ್ಬಂಧಿತ ಕಾನೂನು ಬಾಹಿರ ಜೂಜೊಂದನ್ನು ಸಂಘಟನಾತ್ಮಕವಾಗಿ ಹಳ್ಳಿ ಹಳ್ಳಿಗಳಿಗೂ ಹರಡುವುದು ಮತ್ತು ಅನಭಿಷಿಕ್ತವಾಗಿ ಆಳುವುದು ಅಷ್ಟು ಸುಲಭದ ವಿಷಯವಲ್ಲ. ಜೂಜಿನಂತಹ ಕಾನೂನುಬಾಹಿರ ದಂದೆಯಲ್ಲಿ ಮೋಸ ವಂಚನೆಗಳು ಸಾಮಾನ್ಯ. ಆದರೆ ಓಸಿ ಅಥವಾ ಮಟ್ಕಾದಲ್ಲಿ ಊಹೂಂ! ಸುತಾರಾಂ ಇಲ್ಲ. ಎರಡಂಕಿಯಲ್ಲಿ ಓಪನ್ ಅಥವಾ ಕ್ಲೋಸ್ ಹೊಡೆದರೆ ಕಟ್ಟಿದ ಒಂದು ರೂಪಾಯಿಗೆ  7 ರೂಪಾಯಿ, ಡಬಲ್ ಡಿಜಿಟ್ ಮ್ಯಾಚ್ ಆದರೆ 70 ರೂಪಾಯಿ, ಮೂರು ಡಿಜಿಟ್ ಬಂದುಬಿಟ್ಟರೆ 700 ರೂಪಾಯಿ ನಿಕ್ಕಿ. ಹತ್ತೇ ರೂಪಾಯಿ ಕಟ್ಟಿ ಡಬ್ಬಲ್ ಡಿಜಿಟ್ ಹೊಡೆದರೂ 700 ರೂಪಾಯಿ ಲಾಭ. ಮುಂಬೈನಲ್ಲಿ ಕುಳಿತು ರತನ್ ಲಾಲ್ ಖತ್ರಿ ಮಧ್ಯರಾತ್ರಿಗೆ ಯಾವುದೋ ಒಂದು ನಂಬರ್ ತೆಗೆದನೆಂದರೆ ನಾಳೆ ಬೆಳಿಗ್ಗೆ ಓಸಿ ಕಟ್ಟಿದವರಿಗೆ ಪರೀಕ್ಷೆಯ ಫಲಿತಾಂಶವಿದ್ದಂತೆ. ಖತ್ರಿ ಯಾವ ನಂಬರ್ ತೆಗೆದ? ಕಟ್ಟಿದ್ದು ಯಾವ ನಂಬರ್ ಗೆ? ಓಪನ್ ಹೊಡಿತಾ? ಕ್ಲೋಸ್ ಹೊಡಿತಾ? ಜಂಟಿ ನಂಬರ್ ಬಂತಾ? ತ್ರಿಬ್ಬಲ್ ಡಿಜಿಟ್ ಯಾರಿಗೆ ಬಂಪರ್? ಇವಿಷ್ಟೂ ಚರ್ಚೆಗಳು ಹಳ್ಳಿಯ ಕ್ಯಾಂಟೀನ್ ಗಳಲ್ಲಿ, ಹರಟೆ ಕಟ್ಟೆಯಲ್ಲಿ, ಹೊಲಗದ್ದೆಯಲ್ಲಿ  ದಿನವಿಡೀ ಸೆನ್ಸೇಷನ್ ಸುದ್ದಿ. ಅಷ್ಟಕ್ಕೂ ಈ ರತನ್ ಲಾಲ್ ಖತ್ರಿ ಯಾರು? ಎಲ್ಲಿದ್ದಾನೆ? ನೋಡೋಕೆ ಹೇಗಿದ್ದಾನೆ? ಹೇಗೆ ನಂಬರ್ ಎತ್ತುತ್ತಾನೆ? ಸುಳಿಹು ಏನು ಕೊಡ್ತಾನೆ? ಇಷ್ಟು ದೊಡ್ಡ ಮಟ್ಟದ ನೆಟ್ ವರ್ಕ್ ನಲ್ಲಿ ಕೋಟ್ಯಾಂತರ ರೂಪಾಯಿ ಕಾಳಧನದ ಲೇವಾದೇವಿ ಹೇಗೆ ಮಾಡ್ತಾನೆ? ಈ ಪ್ರಶ್ನೆಗಳು ನಾನು ತಾರುಣ್ಯಕ್ಕೆ ಬಂದ ದಿನದಿಂದಲೂ ಕೇಳಿಕೊಂಡು ಬಂದಿದ್ದೇನೆ.

ಓಸಿ ನಮ್ಮ ಹಳ್ಳಿಗಳಲ್ಲಿ ಎಷ್ಟೋ ಮನೆಗಳನ್ನು ಹಾಳು ಮಾಡಿದೆ, ಎಷ್ಟೋ ಸಂಸಾರಗಳನ್ನು ಬೀದಿಯಲ್ಲಿ ನಿಲ್ಲಿಸಿದೆ. ನಮ್ಮೂರಲ್ಲಿ ಒಬ್ಬನಿದ್ದ, ಮಹಾ ಪಟಿಂಗ ಲಂಪಟ. ಅವನಿಗೆ 777 ನಂಬರ್ ಮೇಲೆ ವಿಪರೀತ ಮೋಹ. ಅವನ ಗಾಡಿಯ ನಂಬರ್ ಪ್ಲೇಟ್ ನಲ್ಲಿಯೂ 7 ಅಂಕಿ ಇರಲೇಬೇಕಿತ್ತು. ಅವರಪ್ಪನ ಕಾಲದಿಂದಲೂ ಅವರು ನಮ್ಮೂರಿನ ಓಸಿ ಏಜೆಂಟರು. ಅವರ ಹೆಸರಿನ ಹಿಂದೆ ಓಸಿ ಅನ್ನುವುದು ಸರ್ ನೇಮ್ ತರಹ ಗಟ್ಟಿಯಾಗಿ ನಿಂತುಬಿಟ್ಟಿತ್ತು. ನಿಮಗೆ ಆಶ್ಚರ್ಯವಾಗಬಹುದು. ಆ ಮಹಾನುಭಾವ ಬೈಕ್ ತಗೊಂಡಿದ್ದು, ಓಮಿನಿ, ಲಾರಿ ಖರೀದಿಸಿದ್ದು ಕೊನೆಗೆ ಮನೆ ಕಟ್ಟಿಸಿದ್ದೂ ಕೂಡಾ ಈ 7ರ ಅಂಕಿಯ ಓಸಿ ಅದೃಷ್ಟ ಪರೀಕ್ಷೆಯಲ್ಲೇ. ಅವನು ಕಳೆದುಕೊಂಡಿದ್ದೂ ಅಷ್ಟೇ ಇರಬಹುದೇನೋ. ಆದರೆ ಸಮಾಜಕ್ಕೆ ಬೇಕಿರುವುದು ಅವನು ಗಳಿಸಿಕೊಂಡಿದ್ದು ಮಾತ್ರವೇ ತಾನೆ. ಹೀಗಾಗಿ ಓಸಿ ಆಡುವ ಮಹಾ ಮಹಾ ಪುರುಷೋತ್ತಮರಿಗೆಲ್ಲಾ ಅವನು ರೋಲ್ ಮಾಡೆಲ್. ಓಸಿಯ ಗುಣಾಕಾರ-ಭಾಗಾಕಾರಕ್ಕೊಂದು ಚಾರ್ಟ್ ಬೇರೆ ಇತ್ತು. ನನಗೆ ಅತೀವ ಆಶ್ಚರ್ಯ ಅನ್ನಿಸುತ್ತಿದ್ದಿದ್ದು, ಶಾಲೆಯಲ್ಲಿ ಗಣಿತವೆಂದರೆ ಕಬ್ಬಿಣದ ಕಡಲೆ ಎಂದು ಒದ್ದಾಡುತ್ತಿದ್ದವರೆಲ್ಲಾ ಓಸಿ ಚಾರ್ಟ್ ಇಟ್ಟುಕೊಂಡು ಅದೇನೋ ಲೆಕ್ಕಾಚಾರ ಹಾಕಿ ನಾಳೆ ಓಪನ್ ಇದು, ಕ್ಲೋಸ್ ಇದಾಗಬಹುದು, ಮೂರಂಕಿ ಇದೇ ಹೊಡೆಯಬಹುದು ಎಂದು ಅಂದಾಜಿಸ್ತಿದ್ರು. ಅವರಲ್ಲೆ ಕೆಲವರ ಲೆಕ್ಕ ಭಾಗಶಃ ತಾಳೆಯೂ ಆಗುತ್ತಿತ್ತು. ಮತ್ತು ಅವರೆಲ್ಲಾ ಪರಮ ದಡ್ಡ ಶಿಖಾಮಣಿಗಳಾಗಿದ್ದರು ಎನ್ನುವುದು ವಿಧಿಯ ವಿಪರ್ಯಾಸ.

 ಓಸಿ ನಂಬರ್ ಜಾಕ್ ಪಾಟ್ ಹಿಂದೆ ರಾತ್ರಿ ಬಿದ್ದ ಕನಸುಗಳ ಆಯಾಮವೂ ಇರ್ತಿತ್ತು ಅಂದರೆ ನಂಬ್ತೀರಾ? ಬೇಕಿದ್ದರೆ ನೀವಿದನ್ನು ಮೂಢ ನಂಬಿಕೆ ಅಂತನ್ನಿ, ಕಾಕತಾಳೀಯ ಅಂತ ಹೇಳಿ. ಕನಸಲ್ಲಿ ಹುಡುಗಿ ಬಂದರೆ ಎರಡು ಜಡೆ ಅಂದರೆ 2 ಓಪನ್. ಆನೆಯೋ ಎಮ್ಮೆಯೋ ಬಂದರೆ 9 ಓಪನ್, ಹಾವು ಬಂದರೆ 7 ಓಪನ್ ಮತ್ತು ಕ್ಲೋಸ್ ಡಬ್ಬಲ್ ಡಿಜಿಟ್. ಅಂತೆಲ್ಲಾ ಯೋಚಿಸುತ್ತಿದ್ದರು ಈ ಮಹಾ ಮೇದಾವಿಗಳು. ಅವರ ಅದೃಷ್ಟವೋ, ಕಾಕತಾಳಿಯೋ ಮತ್ತೊಂದು ಅವರ ತರ್ಕದ ಒಂದು ನಂಬರ್ ಓಪನ್ನೋ ಕ್ಲೋಸೋ ಡಬ್ಬಲ್ ಡಿಜಿಟ್ಟೋ ಆಗಿ ವಿಸ್ಮಯ ಮೂಡಿಸುತ್ತಿತ್ತು. ಕನಸಿನ ಆಧಾರದಲ್ಲಿ ಹತ್ತೋ ಇಪ್ಪತ್ತೋ ರೂಪಾಯಿ ಕಟ್ಟಿದವನು 8 ಪಟ್ಟು ಹೆಚ್ಚು ಹಣ ಎಣಿಸಿ ಮನೆಗೆ ಖುಷಿಯಿಂದ ಹೋಗುತ್ತಿದ್ದರೆ, ಉಳಿದವರು ಮಾರನೆಯ ದಿನ ಕನಸುಗಳನ್ನು ಹುಡುಕುತ್ತಾ ಅಲೆಯುತ್ತಿದ್ದರು. ರಾತ್ರಿ ಏನಾದ್ರೂ ಕನಸು ಬಿತ್ತಾ ಅಂತ ಯಾರಾದ್ರೂ ಬೆಳ್ಳಂಬೆಳಿಗ್ಗೆ ಪ್ರಶ್ನೆ ಮಾಡಿದ್ರೆ ಅವನು ಖಂಡಿತಾ ಓಸಿ ಕಟ್ತಾನೆ ಅನ್ನುವುದು ಖಾತ್ರಿ. ನನಗೆ ತೀರಾ ಅಚ್ಚರಿ ಉಂಟುಮಾಡ್ತಿದ್ದಿದ್ದು, ಅಲ್ಲೆಲ್ಲೋ ಸಾವಿರಾರು ಕಿಲೋಮೀಟರ್ ದೂರದ ಬಾಂಬೆನಲ್ಲಿ ಕೂತ ರತನ್ ಲಾಲ್ ಖತ್ರಿಗೆ ಈ ಮುಂಡೇಮುಕ್ಳಿಗೆ ಬಿದ್ದ ಕನಸು ಹೇಗೆ ಗೊತ್ತಾಯ್ತು ಅನ್ನೋ ವಿಚಾರ.

 ಇನ್ನು ಮತ್ತೊಂದಷ್ಟು ಪಂಡಿತರಿದ್ದರು. ಬೆಳಗ್ಗೆ ಬೆಳಿಗ್ಗೆಯೇ ಯಾವುದಾದ್ರೂ ಕ್ಯಾಂಟೀನ್ ಹೊಕ್ಕು ಅರ್ಧ ಟೀ ಆರ್ಡರ್ ಮಾಡಿ ಅವತ್ತಿನ  ಪತ್ರಿಕೆಯಲ್ಲಿ ಬಂದ ಕಾರ್ಟೂನ್ ಅನ್ನೇ ತದೇಕ ಚಿತ್ತರಾಗಿ ನೋಡುತ್ತಾ ಗಂಟೆಗಟ್ಟಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತು ಬಿಡುತ್ತಿದ್ದರು. ಅವರು ಹೀಗೆ ಪರಮ ಯೋಗಿಗಳಂತೆ ಕಾರ್ಟೂನ್ ನೋಡುವುದನ್ನು ನೋಡಿದ ನಾನೂ ಬಹಳ ಸಲ ಅವರು ಹೋದ ನಂತರ ಅದೇ ಪತ್ರಿಕೆಯ ಅದೇ ಕಾರ್ಟೂನ್ ಅನ್ನು ಹಿಂದೆ ಮುಂದೆ ಮಾಡಿ ತಲೆಕೆಳಗಾಗಿಸಿ ನೋಡಿದ್ದೇನೆ. ಅಂತರ್ ರ್ಜ್ಞಾನ ವೃದ್ಧಿಸುವ ಯಾವುದೇ ಸುಳಿವು ಅದರಲ್ಲಿಲ್ಲವಲ್ಲ ಅಂತ ತಲೆ ತುರಿಸಿಕೊಂಡು ಬಂದಿದ್ದೇನೆ. ಆಮೇಲೊಂದು ದಿನ ಗೊತ್ತಾದ ಸತ್ಯವೇನೆಂದರೆ ರತನ್ ಲಾಲ್ ಖತ್ರಿ ಮಾರನೆಯ ದಿನ ಹೊಡೆಯುವ ನಂಬರ್ ಸುಳಿವನ್ನು ಕಾರ್ಟೂನ್ ನಲ್ಲಿ ಇಟ್ಟಿರುತ್ತಾನೆ ಅನ್ನುವುದು. ಮುಂಬೈ ಮಾರವಾಡಿ ರತನ್ ಲಾಲ್ ಖತ್ರಿಯೇನು ಪತ್ರಿಕೆಯ ಬ್ರಾಂಡ್ ಅಂಬಾಸಡರ್ರಾ? ಇಂತದ್ದೊಂದು ಮೂಡನಂಬಿಕೆಯೂ ಕೆಲ ಕಾಲ ನಮ್ಮೂರಿನ ಓಸಿ ಎಂಬ ವಿಕ್ಷಿಪ್ತ ಲೋಕವನ್ನು ಆಳಿತ್ತು.

ಹೀಗೆ ಅಗೋಚರವಾಗಿ ಕುಳಿತು ಒಂದು ಟೆಲಿಫೋನ್ ಮೂಲಕ ಓಸಿ ಎನ್ನುವ  ಬೃಹತ್ ಅನಧಿಕೃತ, ಅನೈತಿಕ, ಕಾನೂನು ಬಾಹಿರ  ಜೂಜು ಸಾಮ್ರಾಜ್ಯ ಕಟ್ಟಿದ ರತನ್ ಲಾಲ್ ಖತ್ರಿ ಮೊನ್ನೆ ಶನಿವಾರ ತನ್ನ ಮುಂಬೈನ ನವಜೀವನ್ ಸೊಸೈಟಿಯ ಮನೆಯಲ್ಲಿ ಅನಾರೋಗ್ಯದಿಂದ ನಿಧನನಾಗಿದ್ದಾನೆಂದು ಅವನ ಕುಟುಂಬದ ಮೂಲಗಳು ತಿಳಿಸಿವೆ. ಖತ್ರಿ ಸಾಯುವಾಗ ಅವನಿಗೆ 88 ವರ್ಷ. ಸಾಯುವ ಕೊನೆಯ ಕಾಲದಲ್ಲೂ ಮಟಕಾ ಅಥವಾ ಓಸಿಯ ಅಂತಿಮ ಜಾಕ್ ಪಾಟ್ ನಂಬರ್ ಅನ್ನು ನಿರ್ಧರಿಸಿ ಪ್ರಕಟಿಸುತ್ತಿದ್ದಿದ್ದೇ ಖತ್ರಿ ಎನ್ನುವ ಮಾತುಗಳಿವೆ. ರತನ್ ಲಾಲ್ ಖತ್ರಿ ಭಾರತದ ಅತಿ ದೊಡ್ಡ ಓಸಿ ಜಾಲವನ್ನು ಕಟ್ಟುವ ಮೂಲಕ ಬೆಟ್ಟಿಂಗ್ ದಂದೆಯನ್ನು ಪ್ರಾರಂಭಿಸಿದ ಮೂಲಪುರುಷ ಅಂದ್ರೆ ತಪ್ಪಲ್ಲ. ಸಿಂಧಿ ಮನೆತನದವನಾದ ಖತ್ರಿ ಈ ದೇಶದವನೇ ಅಲ್ಲ. ಅವನ ಮೂಲಕ ಪಾಕಿಸ್ತಾನದ ಕರಾಚಿ. 1947ರಲ್ಲಿ ವಿಭಜನೆಯಾದಾಗ ಅಲ್ಲಿಂದ ಇಲ್ಲಿಗೆ ಖತ್ರಿಯ ಕುಟುಂಬ ವಲಸೆ ಬಂದಾಗ ಖತ್ರಿಗೆ ನಿಗಿನಿಗಿ ತಾರುಣ್ಯ. 1962ರಲ್ಲಿ ಮುಂಬೈನಲ್ಲಿ ಸಣ್ಣದಾಗಿ ಹುಟ್ಟಿಕೊಂಡ ನಂಬರ್ ಗೇಮ್ ಮಟಕಾವನ್ನು ಕಾನೂನಾತ್ಮಕಗೊಳಿಸುವ ಅಭಿಲಾಷೆ ಖತ್ರಿಗಿತ್ತು. ಮೊದಮೊದಲು ಇದನ್ನು ಪ್ರಯತ್ನ ಸಹ ಪಟ್ಟಿದ್ದನಂತೆ. ನಂತರ ಕ್ರಮೇಣ ದೇಶದ ಬೇರೆ ಬೇರೆ ಭಾಗಗಳಿಗೆ ಈ ಜಾಲವನ್ನು ವಿಸ್ತರಿಸಿ ಈ ಗ್ಯಾಂಬ್ಲಿಂಗ್ ನೆಟ್ವರ್ಕ್ ನ ಮುಖಟವಿಲ್ಲದ ಅನಭಿಷಿಕ್ತ ದೊರೆಯಂತೆ ದಶಕಗಳ ಕಾಲ ಆಳಿದ ರತನ್ ಲಾಲ್ ಖತ್ರಿ ಮಟಕಾ ಕಿಂಗ್ ಎಂದೇ ಪ್ರಖ್ಯಾತನೂ ವಿಖ್ಯಾತನೂ ಆಗಿದ್ದು ಈಗ ಇತಿಹಾಸ.

 1960ರ ದಶಕದಲ್ಲಿ ಪ್ರಾರಂಭದಲ್ಲಿ ನ್ಯೂ ಯಾರ್ಕ್ ಕಾಟನ್ ಎಕ್ಸ್ ಚೇಂಜ್ ನ ಓಪನ್ ಮತ್ತು ಕ್ಲೋಸ್ ರೇಟ್ ಆಧಾರದಲ್ಲಿ ಖತ್ರಿ ಮಟಕಾದ ಓಪನ್ ಮತ್ತು ಕ್ಲೋಸ್ ನಿರ್ಧರಿಸುತ್ತಿದ್ದನಂತೆ. ಮೊದಲು ವರ್ಲಿ ಮಟಕಾ ಎಂದು ಹೆಸರಿಟ್ಟಿದ್ದ ಈ ವಹಿವಾಟಿಗೆ ನಂತರದ ದಿನಗಳಲ್ಲಿ ರತನ್ ಮಟಕಾ ಎನ್ನುವ ಹೆಸರೇ ಖಾಯಮ್ಮಾಯ್ತು. ಆ ಕಾಲದಲ್ಲಿ ದಿನವೊಂದಕ್ಕೆ ಓಪನ್ ಕ್ಲೋಸ್ ನಂಬರ್ ಗೇಮ್ ವಹಿವಾಟು 1 ಕೋಟಿ ಮುಟ್ಟಿತ್ತೆಂದರೆ ರತನ್ ಲಾಲ್ ಖತ್ರಿ ಎಂತಹ ಚಾಣಾಕ್ಷ ಜೂಜುಕೋರ ಅನ್ನುವುದನ್ನು ನೀವೇ ಅರ್ಥ ಮಾಡಿಕೊಳ್ಳಿ. ಆದ್ರೆ ಒಂದಂತೂ ಸತ್ಯ. ರತನ್ ಲಾಲ್ ಖತ್ರಿ ತಾನು ಸಾಯುವ ತನಕ ಯಾರಿಗೇ ಜಾಕ್ ಪಾಟ್ ಹೊಡೆದರೂ ನಯಾ ಪೈಸೆ ಇಟ್ಟುಕೊಳ್ಳದೇ ಕೊಟ್ಟಿದ್ದಾನೆ. ಮಾಡಿದ್ದು ಕಾನೂನು ಬಾಹಿರ ವಹಿವಾಟೇ ಆದರೂ ಖತ್ರಿ ಯಾರಿಗೂ ವಂಚನೆ ಮಾಡಿಲ್ಲ. ಈ ಸುದ್ದಿ ಕೇಳಿ ನಮ್ಮ ತ್ಯಾಗರ್ತಿಯ ಓಸಿ ಪ್ರಿಯರ ಮನಸುಗಳಿಗೆ ಸೂತಕ ಕವಿದಿರಬಹುದು. ನಾಳೆಯಿಂದ ಓಸಿ ನಂಬರ್ ಯಾರು ಎತ್ತುತ್ತಾರೆ ಎಂದು ಯೋಚಿಸುತ್ತಾ ಅನಾಥ ಭಾವದಿಂದ ಅವರೆಲ್ಲಾ ಚಿಂತಿಸುತ್ತಾ ರತನ್ ಲಾಲ್ ಖತ್ರಿಗೊಂದು ಶ್ರದ್ಧಾಂಜಲಿ ಅರ್ಪಿಸುತ್ತಿರಬಹುದೇನೋ?

ವಿಭಾ, ಬೆಂಗಳೂರು

Leave a Reply

Your email address will not be published. Required fields are marked *

You May Also Like

ಸ್ವಪ್ನ ಸುಂದರಿ ಸಾಗಿಸಿದ್ದು 30 ಅಲ್ಲ, 180 ಕೆಜಿ ಚಿನ್ನವಂತೆ!

ಯುಎಇಯಿಂದ 30 ಕೆಜಿ ಚಿನ್ನ ಸಾಗಿಸಿದ ಆರೋಪ ಎದುರಿಸುತ್ತಿರುವ ಸ್ವಪ್ನ ಟೀಮ್ ಇದೇ ಮಾದರಿಯಲ್ಲಿ ಒಟ್ಟು 180 ಕೆಜಿ ಚಿನ್ನ ಸಾಗಿಸಿದೆ ಎನ್ನಲಾಗಿದೆ.ಯುಎಇಯಿಂದ ಕೇರಳಕ್ಕೆ 30 ಕೆಜಿ ಚಿನ್ನವನ್ನು

ಇನ್ನು ಮುಂದೆ ವಾಟ್ಸಪ್ ಮೂಲಕವೂ ಹಣ ವರ್ಗಾಯಿಸಬಹುದು!

ನವದೆಹಲಿ : ದೇಶದಲ್ಲಿನ ವಾಟ್ಸಪ್ ಬಳಕೆದಾರರಿಗೆ ಆ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ವಾಟ್ಸಪ್ ಬಳಕೆದಾರರು ಇದರ ಮೂಲಕ ಹಣ ವರ್ಗಾಯಿಸಬಹುದಾಗಿದೆ. ಇದಕ್ಕೆ ಈಗಾಗಲೇ ರಾಷ್ಟ್ರೀಯ ಪಾವತಿ ನಿಗಮ(ಎನ್ ಪಿಸಿಐ) ಅನುಮೋದನೆ ನೀಡಿದೆ.

ಡ್ರೈವಿಂಗ್ ಲಯಸನ್ಸ್ ಪಡೆಯಲು ಬದಲಾಗಲಿವೆ ನಿಯಮಗಳು

ಡ್ರೈವಿಂಗ್ ಟೆಸ್ಟ್ ಗೆ ಒಂದು ತಿಂಗಳ ಮೊದಲು ತೋರಿಸಲಾಗುವ ಈ ವೀಡಿಯೊ ಟ್ಯುಟೋರಿಯಲ್‌ನಲ್ಲಿ ಸುರಕ್ಷಿತ ಡ್ರೈವಿಂಗ್ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

ಲಾರಿ, ಮಿನಿ ಬಸ್ ಡಿಕ್ಕಿ: 14 ಜನ ದುರ್ಮರಣ

ಲಾರಿ ಮತ್ತು ಮಿನಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ 14 ಜನ ಮೃತಪಟ್ಟಿರುವ ಭೀಕರ ಅಪಘಾತ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ತಿ ಬಳಿಯ ಮಾದಾಪುರಂ ಬಳಿ ನಡೆದಿದೆ. ಮೃತರು ಚಿತ್ತೂರು ಜಿಲ್ಲೆಯ ಮದನಪಲ್ಲಿ ನಿವಾಸಿಗಳು. ಅಪಘಾತದಲ್ಲಿ ಒಂದು ಮಗು, 8 ಮಹಿಳೆಯರು ಸೇರಿ 14 ಜನ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.