ಬೆಂಗಳೂರು: ಒಂದೆಡೆ ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶ ನೀಡುತ್ತದೆ. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿಯೇ 210 ಕಾರ್ಮಿಕರನ್ನು ಸದ್ದಿಲ್ಲದೇ ಇಲಾಖೆಯೊಂದು ಬೀದಿಗೆ ತಳ್ಳಿದೆ. ಆದಾಗ್ಯೂ ಕಾರ್ಮಿಕ ಪರ ಆದೇಶ ನೀಡಿದ ಸರ್ಕಾರ ಮಾತ್ರ ಗಪ್ ಚುಪ್ ಆಗಿದೆ. ಇದರಿಂದ ಸರ್ಕಾರದ ಆದೇಶಗಳು ಕೇವಲ ನಾಮಕೆವಾಸ್ತೆ ಎನ್ನುವಂತಾಗಿದೆ ಎಂದು ಜನ ಮಾತಾಡಿಕೊಳ್ಳುವಂತಾಗಿದೆ.

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಮಿಕರು

ಈಗಾಗಲೇ 2011 ರಿಂದ ರಾಜ್ಯದಲ್ಲಿ 210 ಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರದ ಎನ್.ಆರ್.ಡಿ.ಡಬ್ಲೂ.ಪಿ ಯೋಜನೆಯ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಸಿಆರ್ಪಿ, ಬಿಆರ್ಪಿಗಳಾಗಿ 210 ಜನ ರಾಜ್ಯದ ಆಯಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಮಾರ್ಚ್ 31 ರಿಂದ ಇವರನ್ನು ಸೇವೆಯಿಂದ ವಜಾಗೊಳಿಸುವಂತೆ ಇಲಾಖೆಯ ಆಯುಕ್ತರು ಜಿಲ್ಲೆಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ತಮಗಾದ ಅನ್ಯಾಯವನ್ನು ಹೇಳಿಕೊಂಡ ಕಾರ್ಮಿಕ

ಆಯುಕ್ತರ ಮಾರ್ಚ್ 23 ರಂದು ಆದೇಶಿಸಿದ ಬೆನ್ನಲ್ಲೆ 40ಕ್ಕೂ ಹೆಚ್ಚು ಕಾರ್ಮಿಕರು ತಮಗಾದ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಧಾರವಾಡದ ಉಚ್ಛನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೂಡಲೇ ಇವರನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರೀಯೆಯನ್ನು ಮುಂದಿನ ಆದೇಶದವರೆಗೂ ತಡೆಹಿಡಿಯುವಂತೆ ಧಾರವಾಡದ ಹೈಕೋರ್ಟ್ (Wpno 143621-667/2020S) ಮಾರ್ಚ್ 24 ರಂದು ಆದೇಶ ನೀಡಿದೆ. ಒಂದೆಡೆ ಈ ಕಾರ್ಮಿಕರನ್ನು ಕೊರೋನಾ ಸಂಕಷ್ಟದ ನೆಪದಿಂದ ಕೈಬಿಡಲು ಸಾಧ್ಯವಿಲ್ಲ. ಇನ್ನು ಮುಖ್ಯವಾಗಿ ಕೋರ್ಟ್ ಆದೇಶದ ಮದ್ಯೆಯೂ ಕೆಲಸದಿಂದ ತೆಗೆದು ಹಾಕಿದ್ದು ಕಾನೂನು ಉಲ್ಲಂಘನೆಯೇ ಸರಿ.

ನ್ಯಾಯಾಲಯದ ತಡೆಯಾಜ್ಞೆ ಬಂದಿರುವ ಬಗ್ಗೆ ಕೆಲವು ಜಿಲ್ಲೆಯ ಗ್ರಾ.ಕು.ನೀ.ನೈ ಇಲಾಖೆ ಜಿಲ್ಲೆಯ ಅಧಿಕಾರಿಗಳು ಪತ್ರದ ಮೂಲಕ ಆಯುಕ್ತರ ಗಮನಕ್ಕೂ ತಂದಿದ್ದಾರೆ. ಆದರೆ ಇದ್ಯಾವುದಕ್ಕೂ ಇಲಾಖೆ ಆಯುಕ್ತರು ಗಮನ ಹರಿಸಿಲ್ಲ ಎನ್ನುವುದು ಅವರ ನಡೆಯಿಂದಲೇ ಗೊತ್ತಾಗುತ್ತಿದೆ.

ಜಿಲ್ಲಾವಾರು ಕಾರ್ಮಿಕರ ಸಂಖ್ಯೆ

ರಾಜ್ಯದಲ್ಲಿ ಒಟ್ಟು 210 ಜನರು ಈ ಇಲಾಖೆಯಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದರಲ್ಲಿ ಬೆಳಗಾವಿ-45, ಗದಗ-16, ಶಿವಮೊಗ್ಗ-30, ಬಳ್ಳಾರಿ-23, ಚಾಮರಾಜ ನಗರ-15, ಮಂಡ್ಯ-25, ಚಿಕ್ಕಬಳ್ಳಾಪೂರ-20, ಕಾರವಾರ-28, ಕೊಡಗು-16 ಸೇರಿ ಇತರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದು ಮೊದಲೇನಲ್ಲ

2-5-2011 ರಿಂದಲೇ ಇವರನ್ನು ಇಲಾಖೆ ಕೆಲಸಕ್ಕೆ ನೇಮಿಸಿಕೊಂಡಿತು. ಒಂದು ವರ್ಷದ ನಂತರ ಮತ್ತೆ ಇವರನ್ನು ಹೊರಗುತ್ತಿಗೆ ಆಧಾರದ ಮೇಲೆ ಸೇವೆಯಲ್ಲಿ ಮುಂದುವರೆಸಿತು. ನಂತರ 2017ರಲ್ಲಿಯೂ ಕೂಡ ಕೆಲಸದಿಂದ ತೆಗೆದು ಹಾಕುವ ಪ್ರಯತ್ನಗಳು ನಡೆದಿದ್ದವು. ಆಗಲೂ ಉಚ್ಛ ನ್ಯಾಯಾಲಯ ಕೆಲಸದಿಂದ ತೆಗೆಯದಂತೆ ಆದೇಶಿಸಿತ್ತು. ಜೊತೆಗೆ ವಿಧಾನಸೌಧ ಅಧಿವೇಶನದಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಈ ಕಾರಣದಿಂದ ಇಲಾಖೆಯ ಪ್ರಯತ್ನಕ್ಕೆ ಅಂದು ಕೂಡ ಹಿನ್ನಡೆಯಾಗಿತ್ತು.  

ಹತ್ತು ತಿಂಗಳ ಸಂಬಳವೂ ಇಲ್ಲ

ಹತ್ತು ವರ್ಷ ದುಡಿದ ಈ ಕಾರ್ಮಿಕರ ಸೇವೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬೇಡವಾಗಿದೆ. ಹೀಗಾಗಿ ಕಾನೂನು ಬಾಹಿರವಾಗಿ ಇವರನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ. ಇದು ಕಾರ್ಮಿಕ ವಿರೋಧಿ ನೀತಿಯೇ ಸರಿ. ಇನ್ನು ಈಗಾಗಲೇ ಕೆಲಸ ಮಾಡಿರುವ ಹತ್ತು ತಿಂಗಳ ಸಂಬಂವನ್ನು ಕೂಡ ಇಲಾಖೆ ಇವರಿಗೆ ನೀಡಿಲ್ಲ. ಮುಖ್ಯವಾಗಿ ಜೀವನದ ಅರ್ಧಕ್ಕಿಂತ ಹೆಚ್ಚಿನ ಆಯುಷ್ಯವನ್ನು ಇಲಾಖೆ ಕಾರ್ಯದಲ್ಲಿಯೇ ಇವರು ಕಳೆದಿದ್ದಾರೆ. ಈಗ ಏಕಾಏಕಿ ಅವರು ಹೋಗುವುದಾದರೂ ಎಲ್ಲಿಗೆ? ಯಾವ ಕೆಲಸ ಮಾಡಬೇಕು?. ಈ ಕೆಲಸವನ್ನೆ ನಂಬಿಕೊಂಡ ಕಾರ್ಮಿಕರ ಕುಟುಂಬದ ಸಾವಿರಾರು ಜನರು ಪರಿಸ್ಥಿತಿ ಹೇಗೆ?ಎನ್ನುವ ಬಗ್ಗೆ ಇಲಾಖೆ ಚಿಂತಿಸಬೇಕಿದೆ.

ಹೀಗೂ ಮಾಡಬಹುದಲ್ಲವೇ?

ಸರ್ಕಾರದ ವ್ಯವಸ್ಥೆಯಲ್ಲಿ ದಿನಕ್ಕೊಂದು ನಿಯಮ ರೂಪಿಸುವುದು ಸಹಜ. ಇದೀಗ ಜಲಜೀವನ ಯೋಜನೆಯ ನೆಪದಿಂದ ಇವರನ್ನು ಕೈಬಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಹೊಸ ಯೋಜನೆಗಳ ಬಗ್ಗೆ ಇವರಿಗೆ ತರಬೇತಿ ನೀಡಿ ಇವರನ್ನೇ ಮುಂದುವರೆಸಬಹುದಲ್ಲ ಎನ್ನುವ ವಾದ ವ್ಯಕ್ತವಾಗಿದೆ. ಇಷ್ಟೆಲ್ಲದರ ಮದ್ಯೆ ಈವರೆಗೆ ಸೌಜನ್ಯಕ್ಕೂ ಕಾರ್ಮಿಕರ ಸಂಕಷ್ಟದ ಕುರಿತು ಮೌನಮುರಿಯದ ಇಲಾಖೆ ಇನ್ನಾದರೂ ಪ್ರತಿಕ್ರಿಯಿಸಬೇಕಿದೆ. ಈ ಕಾರ್ಮಿಕರಿಗೆ ನ್ಯಾಯ ಒಸಗಿಸಲು ಮುಂದಾಗಬೇಕಿದೆ.

Leave a Reply

Your email address will not be published. Required fields are marked *

You May Also Like

ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಫುಲ್ ಗರಂ

ಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.

ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಶಾಲೆಯ ಸಿ.ಬಿ.ಎಸ್.ಇ ಫಲಿತಾಂಶ ಶೇ.100 ಕ್ಕೆ 100 ರಷ್ಟು

ಗದಗ: ಸ್ಥಳೀಯ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾ ಪೀಠದ ಸಿ.ಬಿ.ಎಸ್.ಇ. ಶಾಲೆಗೆ ೨೦೨೧-೨೨ನೇ ಸಾಲಿನ ಸಿ.ಬಿ.ಎಸ್.ಇ…

ಜಿಲ್ಲೆಗಳಲ್ಲಿ ಎರಡು ಹಂತದಲ್ಲಿ ಗ್ರಾಪಂ ಚುನಾವಣೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ.ಬಸವರಾಜು ತಿಳಿಸಿದರು.