ಜಕ್ಕಲಿ ಗ್ರಾ. ಪಂ. ಯಲ್ಲಿ ಕಮಿಷನ್ ಆರೋಪ : ಗುತ್ತಿಗೆದಾರನ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ
ಉತ್ತರಪ್ರಭ
ನರೆಗಲ್ಲ: ಸಮೀಪದ ಜಕ್ಕಲಿ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಕೆಲಸವನ್ನು ಮಾಡಲು ಚುನಾಯಿತ ಸದಸ್ಯರು ಶೇ. 5 ರಿಂದ 10 ವರೆಗೆ ಕಮಿಷನ್ ಬೇಡಿಕೆಯನ್ನು ಇಡುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಎಸ್. ಎಚ್. ತಳವಾರ ಪಿಡಿಒ ಅವರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿ ವೈರಲ್ ಆಗುತ್ತಿದೆ.


ಪದವಿಧರ ನಿರುದ್ಯೋಗಿ ಹಾಗೂ 4ನೇ ದರ್ಜೆಯ ಗುತ್ತಿಗೆದಾರನಾಗಿರುವ ಇವರು ನರೇಗಾದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಗ್ರಾ.ಪಂ. ಕೆಲವು ಚುನಾಯಿತ ಸದಸ್ಯರು ಶೇ. 10 ರವರೆಗೆ ಕಮಿಷನ್ ನೀಡದಿದ್ದರೆ ಕಾಮಗಾರಿಯ ಬಿಲ್ ಮಾಡಿಸಿಕೊಡುವುದಿಲ್ಲ, ಯಾವ ಗುತ್ತಿಗೆದಾರ ಹೆಚ್ಚಿಗೆ ಕಮಿಷನ್ ನೀಡುತ್ತಾರೋ ಅವರಿಗೆ ಕೆಲಸ ಕೊಡಿಸುತ್ತೇವೆ ಎಂದು ಒತ್ತಾಯ ಹಾಗೂ ಬೇಡಿಕೆಯನ್ನು ನೀಡುತ್ತಿದ್ದಾರೆ. ಆದ್ದರಿಂದ ಅಂತಹ ಸದಸ್ಯರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದಾರೆ.
ಯಾವ ಸದಸ್ಯರು ಕಮಿಷನ್ ಕೇಳಿದ್ದಾರೆ ಎನ್ನುವ ಮಾಹಿತಿ ನಮಗಿಲ್ಲ ಹಾಗೂ ಈ ರೀತಿಯಲ್ಲಿ ಕಮಿಷನ್ ಕೇಳಬಾರದು ಎಂದು ಸಾಮೂಹಿಕವಾಗಿ ಎಲ್ಲಾ ಸದಸ್ಯರಿಗೆ ಹೇಳಲಾಗಿದೆ.
–ವೀರಪ್ಪ ವಾಲಿ, ಜಕ್ಕಲಿ ಗ್ರಾ.ಪಂ. ಅಧ್ಯಕ್ಷ