ಆಲಮಟ್ಟಿ : ಸ್ಥಳೀಯ ಎಸ್.ವಿ.ವಿ.ಅಸೋಸಿಯೇಷನ್ ಶಿಕ್ಷಣ ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ 2022-23 ನೇ ಸಾಲಿನ ಜಿಲ್ಲಾ ಮಟ್ಟದ ಪಂದ್ಯಾವಳಿ ಪ್ರಶಸ್ತಿ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಈಚೆಗೆ ಈ ಶಾಲಾ ತಂಡ ವಿಜಯಪುರ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನದೊಂದಿಗೆ ಜಯ ಸಾಧಿಸಿದೆ. ವಿಭಾಗ ಮಟ್ಟದ ಪಂದ್ಯಾವಳಿಗೆ ವಿಜಯಪುರ ಜಿಲ್ಲೆಯಿಂದ ಈ ವಿಜೇತ ತಂಡ ಪ್ರತಿನಿಧಿಸಲಿದೆ.

ನಾಯಕಿ ಪ್ರಿಯಾಂಕಾ ಶಿವಣಗಿ ನೇತೃತ್ವದ ತಂಡದಲ್ಲಿ ಅನುಷಾ ಗುಳೇದಗುಡ್ಡ, ಸಂಜನಾ ಬಿಂಗಿ, ಸೇವಂತಿ ರಾಠೋಡ, ಹೇಮಾ ಹತ್ತರಕಿಹಾಳ, ಚಂದ್ರಕಲಾ ಹತ್ತರಕಿಹಾಳ, ಕೀತಿ೯ ಲಮಾಣಿ ಕ್ರೀಡಾ ಬಾಲೆಯರಿದ್ದರು. ಕವಿತಾ ಮಠದ ತಂಡದ ವ್ಯವಸ್ಥಾಪಕರಾಗಿದ್ದು ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಅಭೂತಪೂರ್ವ ಕ್ರೀಡಾ ಕೌಶಲ್ಯ ತೋರಿ ವಿಭಾಗ ಮಟ್ಟಕ್ಕೆ ಆಯ್ಕೆಗೊಳ್ಳುವ ಮೂಲಕ ಸಂಸ್ಥೆಗೆ, ಶಾಲೆಗೆ ಹಾಗು ಆಲಮಟ್ಟಿ ಗ್ರಾಮಕ್ಕೆ ಕೀತಿ೯ ತಂದಿರುವ ಕ್ರೀಡಾಪಟು ಬಾಲೆಯರನ್ನು ಶಾಲೆಯಲ್ಲಿ ಅಭಿನಂದಿಸಲಾಯಿತು. ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಈ ತಂಡದ ಬಾಲೆಯರು ನಡೆಸಿದ ಸಾಂಘಿಕ ಹೋರಾಟದ ಫಲ ಗೆಲುವು ಸಾಧಿಸಿತು. ತಾಲೂಕು ಹಾಗು ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ನಿರಂತರ ಗಮನಾರ್ಹ ಸಾಧನೆ ಮೆರೆದು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಶಾಲೆಯ ಈ ಕ್ರೀಡಾ ಬಾಲಕಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ದರಾಮ ಮಹಾಸ್ವಾಮಿಗಳು, ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಸೇರಿದಂತೆ ಶಾಲಾ ಸಿಬ್ಬಂದಿ, ಕ್ರೀಡಾ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.