ಆಲಮಟ್ಟಿ: ಇಲ್ಲಿನ ಶಾಲಾ,ಕಾಲೇಜುಗಳಲ್ಲಿ ಶುಕ್ರವಾರ ಕನ್ನಡ ಸಿರಿತನದ ಗೀತೆಗಳು ಮೊಳಗಿದವು. ಕನ್ನಡಮ್ಮನ ಜ್ಞಾನ ದೀಪದ ಗೀತಗಾನ ಕಂಪು ಹರಡಿದವು. ಕನ್ನಡ ಕಲರವದಲ್ಲಿ ಮಕ್ಕಳ ಮೊಗಗಳು ಅರಳಿ ನಲಿದಾಡಿದವು. ತುಟಿಯಿಂದಾಚೆ ಕನ್ನಡ ಪರವಾದ ಕಾವ್ಯ ರಸಗಾನ ಝೇಂಕರಿಸಿದವು…

೬೭ ನೇ ಕನಾ೯ಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದ ಗೋಟಿ ಕಂಠ ಸಾಮೂಹಿಕ ಗಾಯನ ಕಾರ್ಯಕ್ರಮದ ನಿಮಿತ್ತ ಕರುನಾಡಿನ ಶ್ರೇಷ್ಠತೆ ಸಾರುವ ನಾಡಗೀತೆ ಸೇರಿದಂತೆ ನಾಡು- ನುಡಿ ಮಹತ್ವವುಳ್ಳ ಗೀತೆಗಳು ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ, ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜ, ಎಂ.ಎಚ್.ಎಂ. ಹೈಸ್ಕೂಲ್, ಎಂ.ಎಚ್.ಎಂ.ಆಂಗ್ಲ ಮಾದ್ಯಮ ಹಾಗು ಕನ್ನಡ ಮಾದ್ಯಮ ಪ್ರಾಥಮಿಕ ಶಾಲೆಗಳ ಅವರಣದಲ್ಲಿ ವೈಭವದಿಂದ ಜರುಗಿದವು.

ಬೆಳಿಗ್ಗೆ ೧೧ ಗಂಟೆಗೆ ನನ್ನ ನಾಡು- ನನ್ನ ಹಾಡು ಸಮೂಹ ಗೀತಗಾನ ರಾಗ ಈ ಶಾಲಾ,ಕಾಲೇಜುಗಳಲ್ಲಿ ಮಕ್ಕಳು ಹಾಗು ಶಿಕ್ಷಕ ಬಳಗದಿಂದ ಅರ್ಥಪೂರ್ಣವಾಗಿ ವೈವಿಧ್ಯಮಯವಾಗಿ ಮೂಡಿ ಬಂದವು.
ಕೋಟಿ ಕಂಠ ಗೀತಗಾನದ ಸಂಭ್ರಮ ಚಿಣ್ಣರು ಹಾಗು ಯುವ ಮನಮನಗಳಲ್ಲಿ ಮನೆ ಮಾಡಿತ್ತು. ಸಡಗರದ ಈ ವಿನೂತನ ಕಾರ್ಯಕ್ರಮದಲ್ಲಿ ಕನ್ನಡ ಭಕ್ತಿ,ಶ್ರದ್ಧೆ, ಶ್ರೇಷ್ಠತೆ ಸಾರಿತ್ತು. ಜಾತಿ,ಧರ್ಮ,ಕುಲ,ಗೋತ್ರಗಳೆನ್ನದೇ ಸಂತಸದಿಂದ ಕನ್ನಡ ನುಡಿ ಗೀತ ಗಾನಾಯನದಲ್ಲಿ ಮಿಂದೆದ್ದರು. ಸುಶ್ರಾವ್ಯವಾಗಿ ಕನ್ನಡ ಪುಂಜದ ರಾಗಗಳು ತೇಲಿ ಮನ ತಣಿಸಿದವು. ಶಾಲೆಗಳಲ್ಲಿ ಕನ್ನಡ ಸಂಸ್ಕೃತಿಯ ವೈಭವಪೇರಿತ ಗಾನ ಲಹರಿ ಅನಾವರಣಗೊಂಡಿತ್ತು.

ಆರಂಭದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ನಂತರ ಹುಯಿಲಗೋಳ ನಾರಾಯಣರಾಯ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ತದನಂತರ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ.ಡಿ.ಎಸ್.ಕಕಿ೯ಅವರ ಹಚ್ಚೇವು ಕನ್ನಡದ ದೀಪ, ನಾಡೋಜ ಡಾ.ಚೆನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ, ಕೊನೆಯಲ್ಲಿ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತಗಳನ್ನು ಸಾಮೂಹಿಕವಾಗಿ ಹಾಡುವ ಮೂಲಕ ಕನ್ನಡಾಭಿಮಾನ ಮೆರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಕರುನಾಡಿನಲ್ಲಿ ಉಸರಿಸುವ ಪ್ರತಿಯೊಬ್ಬರು ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ, ಕಾಳಜಿ ಹೊಂದಬೇಕು.ಜೊತೆಗೆ ಕನ್ನಡ ಸ್ವಾಭಿಮಾನದ ಕಿಚ್ಚು ಹಾಗು ಅಕ್ರರೆಯ ಪ್ರೀತಿ ಉಕ್ಕಿ ಹರಿಯಬೇಕು. ಕನ್ನಡಾಂಭೆತನದ ತನು ಮನ,ಹೃದಯದಲ್ಲಿ,ಕಣಕಣದಲ್ಲಿ ಮಿನುಗಬೇಕು. ಕನ್ನಡ ನೆಲ,ಜಲ, ಸಂಸ್ಕೃತಿ ಪ್ರಾಂಜಲ್ಯ ಮನಸ್ಸಿನಿಂದ ಗೌರವಿಸುವ ಮನೋಭಾವ ನಮ್ಮಲ್ಲಿ ಬೆಳೆದು ಬಂದಾಗ ಮಾತ್ರ ಕನ್ನಡ ರಾಜ್ಯದಲ್ಲಿ ಗಟ್ಟಿತನವಾಗಿ ಬೇರೂರಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಎಚ್.ಎಂ.ಪ.ಪೂ.ಕಾಲೇಜ್ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಕನ್ನಡ ಉಳಿವಿಗೆ,ನುಡಿಯ ರಕ್ಷಣೆಗೆ ಎಲ್ಲರೂ ಪಣ ತೋಡಗಬೇಕು. ಕನ್ನಡದ ಆಸ್ಮಿತೆಗಾಗಿ ಕನ್ನಡ ಪ್ರೀತಿಸಿ, ಕನ್ನಡ ಬಳಸಿ ಹಾಗು ಕನ್ನಡ ಭಾಷೆಯ ಶ್ರೀಮಂತ ಪರಂಪರೆ ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಾಮುಖ್ಯತೆ ನೀಡಿ. ಆ ದಿಸೆಯಲ್ಲಿ ಯುಜನಾಂಗ ಮನಸ್ಸು ತೋರುವುದು ಇಂದಿನ ಅಗತ್ಯ ಎಂದರು.
ಕೋಟಿ ಕಂಠ ಸಾಮೂಹಿಕ ಗಾಯನ ಕಾರ್ಯಕ್ರಮ ಆಯೋಜಿಸಿರುವುದು ಔಚಿತ್ಯವಾಗಿದೆ. ಕನ್ನಡ ನಾಡು,ನುಡಿಗಳಿಗಾಗಿ ಸಂಕಲ್ಪ ಗೈದು ಕನ್ನಡದ ಆರೋಗ್ಯ ಸದಾಕಾಲವೂ ಉತ್ಸುಕತೆಯಿಂದ ನಳನಳಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮತಾ ಕರೆಮುರಗಿ,ಪಲ್ಲವಿ ಸಜ್ಜನ, ಕವಿತಾ ಮಠದ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ, ಶಾಂತೂ ತಡಸಿ, ಧನರಾಜ ಸಿಂಗಾರಿ, ತಿಮ್ಮಣ ದಾಸರ, ಜಿ.ಆರ್.ಜಾಧವ ಮೊದಲಾದವರಿದ್ದರು.