ಉತ್ತರಪ್ರಭ
ಗದಗ: ಪೋಕ್ಸೊ ಕಾಯ್ದೆಯಡಿ ಗದಗ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಯೊಬ್ಬ ಕಟ್ಟಡದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಜಾಮೀನು ಸಿಕ್ಕ ಬೆನ್ನಲ್ಲೇ ಇಂತಹ ಘಟನೆ ನಡೆದಿದೆ. ಗದಗ ಜಿಲ್ಲೆಯ ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾದ ರಾಜು ಪಾಂಡಪ್ಪ ಲಮಾಣಿ ಎಂದು ತಿಳಿದು ಬಂದಿದೆ.
ಘಟನೆ ಹಿನ್ನಲೆ: ಅಡವಿ ಸೋಮಾಪುರ ತಾಂಡಾದ ರಾಜು ಪಾಂಡಪ್ಪ ಲಮಾಣಿ ಗದಗನ ಜೆಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮತ್ತು ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಡವಿ ಸೋಮಾಪುರ ತಾಂಡಾದ ಅಪ್ರಾಪ್ತ ವಯಸ್ಸಿನ ಯುವತಿಯನ್ನು (16ವರ್ಷ 7 ತಿಂಗಳು) ಪ್ರೀತಿಸುತ್ತಿದ್ದ. ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಗೋವಾಗೆ ಕರೆದುಕೊಂಡು ಹೋಗಿದ್ದು ಈ ಕುರಿತು ಹುಡುಗಿಯ ಮನೆಯವರು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಲಾಗಿತ್ತು. ಹುಡುಗಿ ಅಪ್ರಾಪ್ತ ಇರುವುದರಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕಳೆದ 20-25 ದಿನಗಳ ಹಿಂದೆಯಷ್ಟೇ ರಾಜು ಲಮಾಣಿ ಜೈಲಿನಲ್ಲಿದ್ದ ಎನ್ನಲಾಗಿದೆ.

ಹುಡುಗಿಯ ಮನೆಯವರು ಗುರುವಾರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಜಾಮೀನು ಮೇಲೆ ಬಿಡುಗಡೆಯಾದರೂ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದ್ದು, ಆದ್ದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.