ಲಕ್ಷ್ಮೇಶ್ವರ: ಹಾಡು ಹಗಲೇ ಜಿಲ್ಲೆಯ ಲಕ್ಷ್ಮೇಶ್ವರದ ಹಲವು ಹಳ್ಳಿಗಳಲ್ಲಿ ಹೊಲಗಳ ಮಣ್ಣನ್ನು ಹೊತ್ತೊಯುತ್ತಿದೆ ಮಣ್ಣು ಮಾಫಿಯಾ. ಸರಿಯಾಗಿ ಮಳೆ ಇಲ್ಲದ ಹೊತ್ತಿನಲ್ಲಿ ಸಾಲವಾದರೂ ತೀರುತ್ತದೆ ಎಂದು ಮಣ್ಣು ಹೇರಲು ಅನುಮತಿ ಕೊಟ್ಟ ರೈತರಿಗೆ ಇದು ಅಕ್ರಮ ಎಂದು ಗೊತ್ತಿಲ್ಲ, ಪಾಪ. ಇದರ ಲಾಭ ಪಡೆಯುತ್ತಿರುವ ಮಣ್ಣು ಮಾಫಿಯಾ, ರೈತರಿಗೆ ಅಷ್ಟಿಷ್ಟು ರೊಕ್ಕ ಕೊಟ್ಟು ಕೃಷಿ ಭೂಮಿಯ ಮಣ್ಣನ್ನು ನಿಯಮಬಾಹಿರವಾಗಿ ಸಾಗಾಟ ಮಾಡಿ ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಅಮರಾಪೂರ ಮಲ್ಲಾಪೂರದ ರಸ್ತೆಯ ಪಕ್ಕದಲ್ಲಿರುವ ರೈತರ ಹೊಲಗಳಿಂದ ಹೀಗೆ ಪರವಾನಗಿ ಇಲ್ಲದೇ ಅಕ್ರಮವಾಗಿ 8 ದಿನದಿಂದ ಮಣ್ಣು ದೋಚುತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ ಆಡಳಿತ ಎಂದು ಜನರು ಆರೋಪಿಸುತ್ತಿದ್ದಾರೆ.

ಸೋಮವಾರ ಸ್ಥಳಕ್ಕೆ ಬಂದ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಸದ್ಯಕ್ಕೆ ಮಣ್ಣು ಅಗೆಯುವುದನ್ನು ನಿಲ್ಲಿಸಿ ಎಂದು ಎಚ್ಚರಿಕೆ ನೀಡಿ ಹೋಗಿದ್ದಾರೆ.

‘ವಿಷಯ ಇವತ್ತು ಗೊತ್ತಾಗಿದೆ. ಸದ್ಯಕ್ಕೆ ಮಣ್ಣು ಹೇರಕೂಡದು ಎಂದು ಆದೇಶ ಮಾಡಿದ್ದೇನೆ. ಕೃಷಿ ಮತ್ತು ಗಣಿ ಇಲಾಖೆ ಅನುಮತಿ ಪಡೆದಿದ್ದಾರಾ ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.’

ಭ್ರಮರಾಂಬ ಗುಬ್ಬಿಶೆಟ್ರ, ತಹಸಿಲ್ದಾರ್, ಲಕ್ಷ್ಮೇಶ್ವರ

ಹಿಟಾಚಿಗಳ ಆರ್ಭಟ, ಮಾಫಿಯಾ ಕಳ್ಳಾಟ

ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಸಮೀಪ ಅಮರಾಪೂರ ಹಾಗೂ ಮಲ್ಲಾಪೂರ ರಸ್ತೆಯಿದೆ. ಪಕ್ಕದ ಹೊಲಗಳಿಂದ ಹಿಟಾಚಿಗಳು ಲಾರಿಗಳಿಗೆ ಮಣ್ಣನ್ನು ಲೋಡ್ ಮಾಡುತ್ತಿವೆ. ನಿರಂತರವಾಗಿ ಮಣ್ಣು ಗೆಬರಿದ ಪ್ರದೇಶವೆಲ್ಲ ಕೆರೆಯಂತಾಗಿದೆ.

ನಿಯಮವೇನಿದೆ?
ಕೃಷಿ ಭೂಮಿಯ ಮಣ್ಣನ್ನು ಆ ಹೊಲದ ಮಾಲೀಕ ತೆಗೆಯಲೂ ಅವಕಾಶವಿಲ್ಲ. ಆದರೆ, ಮೇಲ್ಪದರದ ಮಣ್ಣು ಫಲವತ್ತಾಗಿರದಿದ್ದರೆ, ಆಗ ‘ಮಣ್ಣು ಬದಲಾವಣೆ’ಗೆ ಕೃಷಿ ಇಲಾಖೆ ಅನುಮತಿ ನೀಡುತ್ತದೆ. ನೆಲಮಟ್ಟದಿಂದ ಗರಿಷ್ಠ 3 ಅಡಿ ಆಳಕ್ಕೆ ಮಣ್ಣನ್ನು ತೆಗೆದು, ಅದನ್ನು ಮಾರಿಕೊಳ್ಳಬಹುದು. ನಂತರ ಫಲವತ್ತಾದ ಮಣ್ಣನ್ನು ಹೇರಿಕೊಳ್ಳಬೇಕು ಎಂದು ನಿಯಮ ಸ್ಪಷ್ಟವಾಗಿ ಹೇಳುತ್ತದೆ.ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ-1994ರ ತಿದ್ದುಪಡಿ ನಿಯಮಾವಳಿ-2006ರ ನಿಯಮ-3ರ ಅನ್ವಯ ಮೇಲಿನ ಅನುಮತಿ ನೀಡಲಾಗುತ್ತದೆ.

ಗಣಿ ಇಲಾಖೆಯ ‘ಪಾತ್ರ’
ಕೃಷಿ ಇಲಾಖೆ ಅನುಮತಿಯ ನಂತರ, ಭೂವಿಜ್ಞಾನ ಮತ್ತು ಗಣಿ ಇಲಾಖೆ ಅನುಮತಿ ಪಡೆಯಬೇಕು. ನಿಯಮ ಮೀರಿ 3 ಅಡಿ ಆಳಕ್ಕಿಂತ ಹೆಚ್ಚು ಮಣ್ಣನ್ನು ತೆಗೆದರೆ ಗಣಿ ಇಲಾಖೆ ದೂರನ್ನು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು.

ಈ ಕೇಸ್ ನಲ್ಲಿ ಏನಾಗಿದೆ?
ಯಾವ ಪರ್ಮಿಷನ್ನೂ ಇಲ್ಲ, ನಿಯಮಾನೂ ಇಲ್ಲ, ಎಲ್ಲವೂ ಮಣ್ಣಾಂಗಟ್ಟಿ, ಮಣ್ಣು ಕದ್ದವನೇ ಜಟ್ಟಿ ಎನ್ನುವಂತಾಗಿದೆ. ಕೃಷಿ ಮತ್ತು ಗಣಿ ಇಲಾಖೆ ಅನುಮತಿ ಪಡೆದಿಲ್ಲ. ಕಷ್ಟದಲ್ಲಿರುವ ಅಮಾಯಕ ರೈತರಿಗೆ ನಿಯಮಾವಳಿ ಗೊತ್ತಿಲ್ಲ. ಇದರ ಲಾಭ ಪಡೆದ ಮಣ್ಣು ಮಾಫಿಯ ಹೊಲಗಳ ಫಲವತ್ತಾದ ಮಣ್ಣನ್ನು ಅಕ್ರಮ ಸಾಗಾಟ ಮಾಡಿ ಮಾರಿಕೊಳ್ಳುತ್ತದೆ. ಹೆಚ್ಚಾಗಿ ಈ ರೀತಿ ಮಣ್ಣು ಕದಿಯುವವರು ಸಮೀಪದಲ್ಲಿ ಎಲ್ಲೋ ದೊಡ್ಡ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿರುತ್ತಾರೆ. ಅಥವಾ ಬೇರೆಯವರು ಮಣ್ಣು ಸಾಗಾಟ ಮಾಡಿ ಈ ಗುತ್ತಿಗೆದಾರರಿಗೆ ಮಾರಿಕೊಳ್ಳುತ್ತಾರೆ. ಇದು ಕೇವಲ ಹರದಗಟ್ಟಿ ಅಮರಾಪೂರ ಹುಲ್ಲೂರ ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ತಾಲೂಕಿನ ಬಹುತೇಕ ಭಾಗದಲ್ಲೂ ಅಪಾರ ಪ್ರಮಾಣದ ಮಣ್ಣು ಲೂಟಿಯಾಗುತ್ತಿದೆ. ಹೆಚ್ಚಾಗಿ ಜನಪ್ರತಿನಿಧಿಗಳ ಬೆಂಬಲಿಗರೇ ಈ ಮಾಫಿಯಾದಲ್ಲಿ ಶಾಮೀಲಾಗಿದ್ದಾರೆ. ಒಂದು ಕಡೆ ಅನುಮತಿ ಪಡೆದು ಐದಾರು ಕಡೆ ಮಣ್ಣು ಕದಿಯುತ್ತಾರೆ. ಕೆಲವರಂತೂ ಅನುಮತಿ ಪಡೆಯುವುದೇ ಇಲ್ಲ!. ಇನ್ನು ಕೆಲವರಿಗೆ ಪರ್ಮಿಷನ್ ಅಂದ್ರೆ ಏನೂ ಅಂತನೂ ಗೊತ್ತಿಲ್ಲ. ಹೀಗೆ ರಾಜಾರೋಷವಾಗಿ ಮಣ್ಣು ಲೂಟಿ ಮಾಡುತ್ತಿದ್ದಾರೆ.

ಗಣಿ ಇಲಾಖೆ ಕಣ್ಣಾಮುಚ್ಚಾಲೆ?
‘ಗಣಿ ಇಲಾಖೆ ಮತ್ತು ತಾಲೂಕಾಡಳಿತಕ್ಕೆ ಗೊತ್ತಿಲ್ಲದೇ ಇಂತಹ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಇದರಲ್ಲಿ ಕೆಲವು ಅಧಿಕಾರಿಗಳು ಶಾಮೀಲಾಗಿರುತ್ತಾರೆ’ ಎನ್ನುತ್ತಾರೆ ಸ್ಥಳೀಯರು. ಇದಕ್ಕೆ ಸಾಕ್ಷಿ ಎಂಬಂತೆ ಗದಗ ತಾಲೂಕಿನಲ್ಲಿ ಗಣಿ ಇಲಾಖೆ ನೀಡಿದ ಅನುಮತಿ ಉಲ್ಲಂಘಿಸಿ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಹೇರಿದರೂ ಈವರೆಗೆ ಇಲಾಖೆ ಕ್ರಮ ಕೈಗೊಂಡಿಲ್ಲ. ಸದ್ಯ ತಹಸೀಲ್ದಾರ್ ಮಣ್ಣು ಗೆಬರುವುದಕ್ಕೆ ತಡೆ ಹಾಕಿದ್ದಾರೆ. ಆದರೆ ಮಣ್ಣು ಮಾಫಿಯಾದ ಬಾಹುಗಳು ಬಹುದೂರಕ್ಕೆ ಚಾಚಿವೆ.

Leave a Reply

Your email address will not be published. Required fields are marked *

You May Also Like

ಸಾರಿಗೆ ನೌಕರರಿಗೆ ಅಭದ್ರತೆ: ಉದ್ಯೋಗ ಕಡಿತಕ್ಕೆ ಸ್ವಯಂ ನಿವೃತ್ತಿಯ ಮಾಸ್ಟರ್ ಪ್ಲ್ಯಾನ್..!

ಬೆಂಗಳೂರು: ಈಗಾಗಲೇ ಸಾರಿಗೆ ಇಲಾಖೆಯ 2000 ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸುತ್ತಿದೆ. ಇದರಿಂದ ಖಾಯಂ ನೌಕರರಿಗೂ…

ಕೋವಿಡ್ ಮೊದಲ ಸಾವು : ಕೈ ಸೇರದ ಪಾಸಿಟಿವ್ ವರದಿ

ದೇಶದಲ್ಲೇ ಮೊದಲಬಾರಿಗೆ ಕೋರೊನಾ ಸಂಕಿನಿಂದ ಮೃತಪಟ್ಟ ಮೊಹಮದ್ದ ಹುಸೇನ್ ಸಿದ್ದಿಕ (76) ಅವರ ಕೊವಿಡ್ ಪಾಸಿಟಿವ್ ವರದಿ ಇನ್ನೂ ಅವರ ಕುಟುಂಬದ ಕೈಗೆ ತಲುಪಿಲ್ಲ.