” ಪವಿತ್ರ ಕೃಷ್ಣೆ ಜಲದಲ್ಲಿ ಪಲ್ಲಕ್ಕಿಗಳ ಪುಣ್ಯ ಸ್ನಾನ “

ಉತ್ತರಪ್ರಭ

ಗುಲಾಬಚಂದ ಜಾಧವ
ಆಲಮಟ್ಟಿ:
ಬೆಳ್ಳಂ ಬೆಳಿಗ್ಗೆ ನೂರಾರು ದೇವ,ದೇವತೆಗಳ ಪಲ್ಲಕ್ಕಿಗಳ ಮಹಾಪೂರವೇ ಇಲ್ಲಿ ಹರಿದು ಬಂದಿತು. ಅವು ಕೃಷ್ಣಾ ನದಿ ತೀರದತ್ತ ಲಗ್ಗೆಯಿರಿಸಿ ಭಕ್ತಿ ಭಾವರಸಗಳ ಪರಿಮಳ ಬೀರಿದವು. ಎಲ್ಲೆಲ್ಲೂ ಪಲ್ಲಕ್ಕಿಗಳ ಕಲರವ.ಅರಿಷಣ ಭಂಡಾರಮಯದಲ್ಲಿ ಮೊಳಗಿ ಮಿನುಗಿದವು. ಕೃಷ್ಣೆಯ ಪವಿತ್ರ ಜಲ ಸಿಂಚನದಲ್ಲಿ ದೈವ ಪಲ್ಲಕ್ಕಿಗಳ ಪುಣ್ಯಸ್ನಾನ ಜೋರಾಗಿತ್ತು. ದೇವರ ಉತ್ಸವ ಮೂತಿ೯, ಪಲ್ಲಕ್ಕಿಗಳ ಶುದ್ಧೀಕರಣ ಕಾಯಕ ಭಕ್ತಿ ಪರಾಕಾಷ್ಠೆಯಲ್ಲಿ ಸಾಗಿತ್ತು…


ಕೃಷ್ಣಾ ನದಿತೀರದ ದಂಡೆಯಲ್ಲಿಂದು ಯುಗಾದಿ ಅಮವಾಸ್ಯೆ ನಿಮಿತ್ಯ ಶುಕ್ರವಾರ ಕಂಡುಬಂದ ವಿಶೇಷ ದೃಶ್ಯಗಳಿವು.
ಊರ ತುಂಬೆಲ್ಲಾ ಡೊಳ್ಳಿನ ನಿನಾದ.ಸಹಸ್ರಾರು ಜನರು ಪಲ್ಲಕ್ಕಿಯಲ್ಲಿ ದೇವರುಗಳ ಮೂರ್ತಿ ತರುತ್ತಿರುವ ದೃಶ್ಯ, ಪಲ್ಲಕ್ಕಿಗಳ ಸ್ನಾನ, ಗುಂಪಾಗಿ ಅಡುಗೆ ಮಾಡಿ, ನೈವೇದ್ಯ ಮಾಡುತ್ತಿರುವ ದೃಶ್ಯ ಝೇಂಕಾರ ಕಂಡುಬಂದಿತು. ಭಾರತೀಯ ಸಂಸ್ಕೃತಿ,ಪ್ರಕೃತಿ, ಪ್ರಕಾರ ಯುಗಾದಿ ಹಿಂದೂಗಳಿಗೆ ವಷಾ೯ರಂಭದ ಮೊದಲ ಹಬ್ಬ. ಧಾಮಿ೯ಕ ಚೌಕಟ್ಟಿನಲ್ಲಿ ವಿಶೇಷ ಮಹತ್ವ ಹೊಂದಿರುವ ಈ ದಿನ ಹೊಸ ವರ್ಷಕ್ಕೆ ಮುನ್ನುಡಿ ಬರೆದಿದೆ. ಹಾಗಾಗಿ ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಲ್ಲಿ ದೇವರ ಉತ್ಸವ ಮೂರ್ತಿಗಳಿಗೆ ಸ್ನಾನ ಮಾಡಿಸುವುದು ಉತ್ತರ ಕರ್ನಾಟಕದ ಸಂಪ್ರದಾಯ. ವಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಯ ವಿವಿಧ ತಾಲ್ಲೂಕಿನ ಹಲವಾರು ಗ್ರಾಮಗಳ ನೂರಾರು ದೇವರುಗಳ ಉತ್ಸವ ಮೂರ್ತಿಗಳನ್ನು, ಪಲ್ಲಕ್ಕಿಗಳನ್ನು ಊರಿನ ಜನರು ಸೇರಿ ಡೊಳ್ಳು ಬಾರಿಸುತ್ತ ಆಲಮಟ್ಟಿ ಆಣೆಕಟ್ಟೆಗೆ ಆಗಮಿಸಿದ್ದರು. ನದಿಯ ಎರಡು ದಂಡೆಯ ಮೇಲೆ ಛತ್ರಿ,ಚಾಮರ,ಪಲ್ಲಕ್ಕಿಗಳ ಸಂಭ್ರಮ ಮನೆ ಮಾಡಿತ್ತು. ಕಳಶಗಳ ಮೆರವಣಿಗೆ, ಡೊಳ್ಳು ಕುಣಿತ, ಹಲಗೆ ವಾದನ,ಕೊಂಬು ಊದುವುದು ಸೇರಿದಂತೆ ನಾನಾ ಬಗೆಯ ಸದ್ದುಗಳು ಮಾರ್ದನಿಸಿದವು. ಭಕ್ತಿಯ ಭಾವುಕತೆಯಲ್ಲಿ ತೇಲಿಸಿದವು.
ಅಮವಾಸ್ಯೆ ಮುನ್ನಾ ದಿನ ರಾತ್ರಿ ಒಂದು ದಿನ ವಸತಿ ಇದ್ದು, ಕೃಷ್ಣೆಯಲ್ಲಿ ಯುಗಾದಿ ಅಮವಾಸ್ಯೆ ಇಲ್ಲವೇ ಯುಗಾದಿ ಪಾಡ್ಯ ದಿನದಂದು ಮೂರ್ತಿಗಳಿಗೆ ಸ್ನಾನ ಮಾಡಿಸಿ, ತಾವೂ ಸ್ನಾನ ಮಾಡಿ ಮರಳಿ ಹೋಗುತ್ತಾರೆ ಭಕ್ತರು.
ಈ ಸಂಪ್ರದಾಯಕ್ಕೆ ಸುಮಾರು ಆರು ದಶಕಗಳ ಇತಿಹಾಸವಿದೆ. ನೂರಾರು ಕಿ.ಮೀ.ದೂರದಿಂದಲೇ ಸಾವಿರಾರು ಭಕ್ತರು ಉತ್ಸವ ಮೂತಿ೯,ಪಲ್ಲಕ್ಕಿ, ದೇವಸ್ಥಾನದ ಪರಿಕರಗಳೊಂದಿಗೆ ಇಲ್ಲಿಗೆ ಬರುತ್ತಾರೆ. ಇಂಡಿ, ಜಮಖಂಡಿ, ಸಿಂದಗಿ, ಬಾಗೇವಾಡಿ, ಮುದ್ದೇಬಿಹಾಳ, ಬಾಗಲಕೋಟೆ, ಬೀಳಗಿ ಮೊದಲಾದ ತಾಲ್ಲೂಕಿನ ಅನೇಕ ಗ್ರಾಮಗಳ ದೇವರುಗಳು ಆಲಮಟ್ಟಿಗೆ ಬರುವುದು ಹಿಂದಿನಿಂದ ಬಂದ ವಾಡಿಕೆ. ಯುಗಾದಿ ಅಮವಾಸ್ಯೆ ನಿಮಿತ್ಯ ಗುರುವಾರ ರಾತ್ರಿಯೇ ಪಲ್ಲಕ್ಕಿಗಳನೇಕ ಆಗಮಿಸಿದ್ದವು. ಶುಕ್ರವಾರ ಅಮವಾಸ್ಯೆ ದಿನ ಅವುಗಳನ್ನು ಕೃಷ್ಣೆಯ ಪವಿತ್ರ ಜಲದಿಂದ ಪಾವನಗೊಳಿಸಿ ಪೂಜಿಸಲಾಯಿತು.‌ವಿವಿಧ ಕಡೆಗಳಿಂದ ಬಂದ ಭಕ್ತರು ತಾವು ಮೊದಲ ನದಿಯಲ್ಲಿ ಮಿಂದು ಬಳಿಕ ಗಂಗಾ ಪೂಜೆ ನೆರವೇರಿಸಿದರು. ನಂತರ ಪಲ್ಲಕ್ಕಿಗಳನ್ನು ಶುಚಿಗೊಳಿಸಿ ಪೂಜಿಸಿದರು.
ಶಿವ, ಪಾರ್ವತಿ, ದುರ್ಗವ್ವ, ದ್ಯಾಮವ್ವ, ಶೆಟಗೆವ್ವಾ, ಹನುಮಪ್ಪ, ಆಂಜನೇಯ. ಬನಶಂಕರಿ, ಚಂದ್ರಮ್ಮಾ, ಬಸವೇಶ್ವರ, ಪರಮಾನಂದ, ವೀರೇಶ ಪ್ರಭು, ಅಂಬಾಭವಾನಿ, ರೇಣುಕಾ ದೇವಿ, ಮಲ್ಲಿಕಾರ್ಜುನ, ಲಕ್ಷ್ಮಿ, ಲಕ್ಕವ್ವ, ಮರಗಮ್ಮ, ಮಾಳಿಂಗರಾಯ, ಮಡಿವಾಳಪ್ಪ, ಹುಚ್ಚಯ್ಯಸ್ವಾಮಿ, ವೆಂಕಟಪ್ಪ, ವೀರೇಶ್ವರ, ಮಲ್ಲಯ್ಯ, ಅಮೋಘಸಿದ್ಧ, ಹೀಗೆ ಅನೇಕ ದೇವರುಗಳನ್ನು ಆಲಮಟ್ಟಿಗೆ ಕರೆತಂದು ಸ್ನಾನ ಮಾಡಿಸಿದರು. ದೇವತಾರಾಧನೆಯ ಭಕ್ತಿಯಲ್ಲಿ ಪೂಜಿಸಿ ಧನ್ಯತೆ ಅಪಿ೯ಸುತ್ತಿದ್ದ ನೋಟ ಸಾಮಾನ್ಯವಾಗಿತ್ತು.
ಜಾತಿ ಭೇದವಿಲ್ಲದೇ ಎಲ್ಲ ಜಾತಿಯ ದೇವರು ಇಲ್ಲಿ ಆಗಮಿಸಿದ್ದು ವಿಶೇಷ. ಬಂದ ಯುವಕ, ಯುವತಿಯರು, ಹಿರಿಯರೆಲ್ಲರೂ ಕೃಷ್ಣೆಯಲ್ಲಿ ಸ್ನಾನ ಮಾಡಿ, ಮಡಿಯಲ್ಲಿಯೇ ದೇವರುಗಳನ್ನು ಶುಚಿಗೊಳಿಸಿ ನಂತರ ಪಲ್ಲಕ್ಕಿಗಳನ್ನು ಹೂವಿನಿಂದ ಅಲಂಕರಿಸಿದರು.
ದೂರದ ಗ್ರಾಮಗಳ ಜನರು ಪಲ್ಲಕ್ಕಿಯಲ್ಲಿ ಮೂರ್ತಿಗಳನ್ನಿಟ್ಟು, ಹೊತ್ತುಕೊಂಡು ಭಕ್ತಿ ಭಾವದಿಂದ ಎರಡು ದಿನ ನಡೆದು ಬಂದು ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿ ಧನ್ಯತೆ ಮೆರೆದರು. ಕೆಲವರು ಟ್ರ್ಯಾಕ್ಟರ್‌ಗಳಲ್ಲಿಯೂ ಪಲ್ಲಕ್ಕಿಯೊಂದಿಗೆ ಬಂದರು. ಇದೇ ಪರಂಪರೆ ಮುಂದುವರಿದರೆ ಮುಂದೆ ವಾಹನಗಳಲ್ಲಿಯೇ ಮೂರ್ತಿಗಳು ಬರಬಹುದು.
ಬಹುತೇಕ ಗ್ರಾಮಗಳ ಜನರು ನದಿ ದಂಡೆಯಲ್ಲಿ ಹೋಳಿಗೆ ಮಾಡಿ ದೇವರಿಗೆ ನೈವೇದ್ಯ ಮಾಡಿ, ಪ್ರಸಾದ ಸ್ವೀಕರಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮಧ್ಯಾಹ್ನ ಪ್ರಖರ ಬಿಸಿಲಿನ ಮಧ್ಯೆಯೂ ಪಲ್ಲಕ್ಕಿಗಳ ವಿರಾಟ್ ರೂಪ ದರ್ಶನ ರಾರಾಜಿಸುತ್ತಿತ್ತು. ದೇವರ ಪಲ್ಲಕ್ಕಿ ತಂದ ಭಕ್ತರು ಆತ್ಮೋನ್ನತಿಯ ಶೃದ್ಧಾ,ಭಕ್ತಿ ಭಾವದ ಪರವಶತೆಯಲ್ಲಿ ಮಿಂದೆದ್ದರು.

Leave a Reply

Your email address will not be published. Required fields are marked *

You May Also Like

ಅಲ್ಲಿ ಮಹಾಮಳೆ ಆಲಮಟ್ಟಿಯಲ್ಲಿ ಜಲಕಳೆ..!!!

ಉತ್ತರಪ್ರಭಗುಲಾಬಚಂದ ಜಾಧವಆಲಮಟ್ಟಿ: ಇಲ್ಲಿ ಮಳೆ ಬಂದ್ರೂ ಅಷ್ಟೇ ಬಿಟ್ರೂ ಅಷ್ಟೇ ! ಏನು ಫರಕ್ ಬಿಳಾಂಗಿಲ್ರೀ…

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳ-ಹೊರಹರಿವು ಯಥಾಸ್ಥಿತಿ..!

ಉತ್ತರಪ್ರಭಆಲಮಟ್ಟಿ: ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಕೃಷ್ಣಾ ನದಿಯ ಮೂಲಕ ಹರಿದು ಬರುತ್ತಿರುವ ನೀರಿನ…

ಇಂದು ಕೃಷ್ಣೆ ಮಡಿಲಿನ ಆರಾಧ್ಯ ದೇವತೆ ಚಂದ್ರಗಿರಿ ಜಾತ್ರಾ ವೈಭವ

ಗುಲಾಬಚಂದ ಜಾಧವ ಉತ್ತರಪ್ರಭಆಲಮಟ್ಟಿ: ಜಂಗಮರ ನೆಲೆ ಆಲಮಟ್ಟಿ ಬಹುಭಾಗ ಲಾಲ್ ಬಹದ್ದೂರ್ ಜಲಾಶಯದ ತೆಕ್ಕೆಯಲ್ಲಿದೆ. ಹಲ…

ಲೋಕಸಭೆಯಲ್ಲಿ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಮಂಡನೆ –ಮತದಾರರ ಪಟ್ಟಿಗೆ ಆಧಾರ ಜೊಡಣೆ ಪ್ರತಿಪಕ್ಷ ವಿರೋಧ

ದೆಹಲಿ:ಲೋಕಸಭೆಯಲ್ಲಿ ಚುಣಾವಾಣಾ ಕಾನೂನು (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ತಿದ್ದುಪಡಿಯಲ್ಲಿ ಮುಖ್ಯವಾಗಿ ನಕಲಿ ಮತದಾರರನ್ನು ತಡೆಯುವುದು…