ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರ ಆರೋಪ
ಗದಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಸಮೀಪದ ದೂಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಟ್ರಾನ್ಸ್ ಫಾರ್ಮರ್ ತೊಂದರೆಯನ್ನು ಸರಿಪಡಿಸುವ ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ, ಲೈನ್ ಮ್ಯಾನ್ ಸಾವನ್ನಪ್ಪಿರೋ ಘಟನೆ ಶುಕ್ರವಾರ ಮಧ್ಯಾಹ್ನ ಭದ್ರಾಪುರದಲ್ಲಿ ನಡೆದಿದೆ.


ಮೃತ ಮೆಸ್ಕಾಂ ನೌಕರಸ್ಥ ರವಿ ಪೀರಪ್ಪ ಚವ್ಹಾಣ(31) ಎಂಬ ದುರ್ಧೈವಿಯು ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದ ಖಾಯಂ ನಿವಾಸಿಯಾಗಿದ್ದಾನೆ. ಕೆಲವೇ ವರ್ಷಗಳ ಹಿಂದೆ ಮೆಸ್ಕಾಂ ನಲ್ಲಿ ಲೈನ್ʼಮ್ಯಾನ್ ಆಗಿ ಸೇವೆಗೆ ಸೇರಿಕೊಂಡಿದ್ದನು. ಶುಕ್ರವಾರ ಟ್ರಾನ್ಸ್ ಫಾರ್ಮರ್ ಕೈಕೊಟ್ಟ ಕಾರಣದಿಂದ ಉಂಟಾದ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವಲ್ಲಿ ನಿರತರಾಗಿದ್ದರು. ಈ ವೇಳೆ 11 ಕೆವಿ ಮಾರ್ಗದ ವಿದ್ಯುತ್ ಶಾಕ್ ಹೊಡೆದಿದೆ. ಮೇಲಿಂದ ಕೆಳಗೆ ನೆಲಕ್ಕೆ ಬಿದ್ದ ಅವರನ್ನು ಕೂಡಲೇ ಸಾಗರ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೇ ಮಾರ್ಗ ಮಧ್ಯೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಅವಘಡಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಯಾವುದೇ ಸುರಕ್ಷಾ ಹಾಗೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದ ಕಾರಣದಿಂದಾಗಿ ಅವಘಡ ನಡೆದು ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶುಕ್ರವಾರ ರಾತ್ರಿ ಗಜೇಂದ್ರಗಡ ಪಟ್ಟಣದಿಂದ ಸೊರಬಕ್ಕೆ ಹೋದ ಕುಟುಂಬಸ್ಥರು ಶನಿವಾರ ಬೆಳಗಿನವರೆಗೆ ಅಧಿಕಾರಿಗಳ ಸಹಾಯಕ್ಕಾಗಿ ಕಾಯ್ದು ಕುಳಿತಿದ್ದಾರೆ.
ಟ್ರಾನ್ಸ್ ಫಾರ್ಮರ್ ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ರವಿ ಪೀರಪ್ಪ ಚವ್ಹಾಣ ಸಾವನ್ನಪ್ಪಿದ್ದು ಬಹು ದೊಡ್ಡ ದುರಂತ ಮತ್ತು ದು:ಖಕರ ಸಂಗತಿ ಇಂತಹ ಘಟನೆ ಎಲ್ಲಿಯೂ ನಡೆಯಬಾರದು, ರವಿಯ ಕುಟುಂಬಕ್ಕೆ ದು:ಖ ಬರಿಸುವ ಶಕ್ತಿ ಆ ಭಗವಂತ ನೀಡಲಿ. ಸರ್ಕಾರ ಈ ಕೂಡಲೇ ಮೃತ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಮತ್ತು ರವಿ ಪತ್ನಿಗೆ ನೌಕರಿ ನೀಡುವುದರೊಂದಿಗೆ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಬೇಕು ಇದರೊಂದಿಗೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು.
-ರವಿಕಾಂತ ಅಂಗಡಿ, ರಾಜ್ಯಾಧ್ಯಕ್ಷರು, ಗೋರ ಸೇನಾ ಮತ್ತು ಉತ್ತರ ಕರ್ನಾಟಕ ಮಾಹಾಸಭಾ
ಸ್ಥಳದಲ್ಲಿ ಕುಟುಂಬಸ್ಥರ ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ. ವಿವಿಧ ಸಂಘಟನೆಯ ಮುಖಂಡರು ವಾಸ್ತವ ಸಂಗತಿ ಅರಿತು ಬಡಕುಟುಂಬಕ್ಕೆ ಸಹಾಯ ಮಾಡುವಂತೆ ಒತ್ತಡ ಹಾಕಿದ ನಂತರ ಒಂದು ಕೋಟಿ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಹಾಗೂ ಸ್ಥಳದಲ್ಲೆ ಎರಡುವರೆ ಲಕ್ಷ ಅಂತ್ಯ ಸಂಸ್ಕಾರ ಹಾಗೂ ವಿಧಿವಿಧಾನಗಳ ಪ್ರಕ್ರಿಯೆಗೆ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಮೃತ ರವಿ ಪೀರಪ್ಪ ಚವ್ಹಾಣ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಅವರ ಅಗಲಿಕೆಯಿಂದಾಗಿ ತಾಯಿ, ಪತ್ನಿ, ಮಕ್ಕಳ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂತ್ಯಕ್ರಿಯೇ ಸ್ವಗ್ರಾಮದಲ್ಲಿ ಶನಿವಾರ ರಾತ್ರಿ 8 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದರು.
ಟ್ರಾನ್ಸ್ ಫಾರ್ಮರ್ ತೊಂದರೆಯ ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ರವಿ ಪೀರಪ್ಪ ಚವ್ಹಾಣ ಸಾವನ್ನಪ್ಪಿದ್ದಾನೆ. ಬಡತನ ಮೂಲದಿಂದ ಬಂದಿರುವ ಲೈನ್ ಮ್ಯಾನ್ ಕುಟುಂಬಕ್ಕೆ ಸರ್ಕಾರದಿಂದ ಒಂದು ಕೋಟಿ ಪರಿಹಾರ ನೀಡಬೇಕು. ಪತ್ನಿಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಬೇಕು. ಭರವಸೆ ನೀಡಿದ ಮಾತಿನಂತೆ ನಡೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟಕ್ಕೆ ಮುಂದಾಗುತ್ತೇವೆ
ಡಿ.ಆರ್. ಗಿರೀಶ್, ರಾಜ್ಯಾಧ್ಯಕ್ಷರು ಬಂಜಾರ ವಿದ್ಯಾರ್ಥಿ ಸಂಘ, ಶಿವಮೊಗ್ಗ