ಉತ್ತರಪ್ರಭ ಸುದ್ದಿ
ಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಪಾರ್ಥಿವ ಶರೀರ ಭಾನುವಾರ ಮಾರ್ಚ 20ರ ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶುಕ್ರವಾರ ಅಂತರರಾಜ್ಯ ಜಲ ವಿವಾದ ಕುರಿತು ಸರ್ವ ಪಕ್ಷ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಈ ವಿಷಯವನ್ನು ಅವರು ತಿಳಿಸಿದರು. ನವೀನ್ ಮೃತದೇಹ ಈಗಾಗಲೇ ಪತ್ತೆಯಾಗಿದ್ದು, ಪಾರ್ಥಿವ ಶರೀರ ತರಲು ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಭಾನುವಾರ ಪಾರ್ಥಿವ ಶರೀರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗುವುದು ಎಂದರು. ಮಾರ್ಚ್ 1ರಂದು ಉಕ್ರೇನ್‌ನ ಖಾರ್ಕೀವ್‌ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ನವೀನ್ ಶೇಕರಪ್ಪ ಮೃತಪಟ್ಟಿದ್ದರು. ಯುದ್ಧದಿಂದಾಗಿ ಮೃತದೇಹ ತರಲು ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಶ್ರಮಪಟ್ಟಿತ್ತು ಇದರ ಫಲವಾಗಿ ನವೀನ ಮೃತ ದೇಹ ಭಾನುವಾರ ಬೆಂಗಳೂರು ತಲುಪಲಿದೆ ಎಂದು ತಿಳಿಸಿದರು.

