ವರದಿ : ಗುಲಾಬಚಂದ ಜಾಧವ
ನಿಡಗುಂದಿ : ವೈದ್ಯ ವೃತ್ತಿ ಅತ್ಯಂತ ಪವಿತ್ರ. ಎಲ್ಲ ವೃತ್ತಿಗಳಲ್ಲೇ ಶ್ರೇಷ್ಠ. ಆದರೆ ಈ ವೃತ್ತಿ ಇಂದು ವ್ಯಾಪಾರೀಕರಣಗೊಳ್ಳುತ್ತಿರುವುದು ವಿಷಾಧ. ಬಡರೋಗಿಗಳ ಸೇವೆಯೇ ಮುಖ್ಯ ಧೈಯ, ಪ್ರಮುಖ ಉದ್ದೇಶವಾಗಬೇಕು ಎಂದು ಶಾಸಕ ಶಿವಾನಂದ ಪಾಟೀಲ ಅಭಿಪ್ರಾಯಿಸಿದರು.
ಪಟ್ಟಣದ ಜಿವಿವಿಎಸ್ ಕಾಂಪ್ಲೆಕ್ಸ್ ನಲ್ಲಿ ನೂತನ ಚರಕ ಕ್ಲಿನಿಕ್, ವೀರಭದ್ರೇಶ್ವರ ಔಷಧ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಅಪ್ಪಟ ಶಿಕ್ಷಣ ಪ್ರೇಮಿ,ನಿಡಗುಂದಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಚೇರಮನ್ನ ಜಿ.ಎಸ್.ನಾಗಠಾಣ ಸರಳ,ಸಜ್ಜನ ವ್ಯಕ್ತಿತ್ವದ ಹಿರಿಯ ಮುತ್ಸದಿ. ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಹೆಮ್ಮರವಾಗಿ ಬೆಳೆಸಿದ್ದಾರೆ.ಜೊತೆಗೆ ಲಕ್ಷಾಂತರ ಮಕ್ಕಳಿಗೆ ಜ್ಞಾನ ಧಾರೆಯ ಹಸುವನ್ನು ಇಂಗಿಸಿದ್ದಾರೆ. ಪರಿಣಾಮ ಅದೆಷ್ಟೋ ವಿದ್ಯಾರ್ಥಿಗಳ ಬಾಳು ಬೆಳಗಿದೆ. ಶೈಕ್ಷಣಿಕ ಕ್ರಾಂತಿಯೊಂದಿಗೆ ಗೈದಿರುವ ಸಮಾಜಮುಖಿ ಪರ ಸೇವಾ ಕೈಂಕರ್ಯಗಳೆಲ್ಲ ಅಪರೂಪಮಯವಾಗಿವೆ ಎಂದು ಜಿ.ಎಸ್.ನಾಗಠಾಣ ಅವರ ವ್ಯಕ್ತಿತ್ವ ಬಣ್ಣಿಸಿದರು.

ಸ್ವಾಮಿ ವಿವೇಕಾನಂದ ಬ್ಯಾಂಕ್ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಾಗಠಾಣರು ಇದೀಗ ವೈದ್ಯಕೀಯ ರಂಗದಲ್ಲಿ ಅಳಿಲು ಸೇವೆ ಸಲ್ಲಿಸುವ ಸದಾಶಯದೊಂದಿಗೆ ತಮ್ಮ ಚಿರಂಜೀವಿ ಡಾ. ಅನುಪ ನಾಗಠಾಣ ಅವರ ನೇತೃತ್ವದಲ್ಲಿ ಕ್ಲಿನಿಕ್ ಹಾಗು ಮೆಡಿಕಲ್ ಶಾಪ್ ಇಲ್ಲಿ ಪ್ರಾರಂಭಿಸಿರುವ ಕಾರ್ಯ ಶ್ಲಾಘನೀಯ ಎಂದರು.

ಭಾರತಾಂಭೆಯ ರಕ್ಷಣಾ ಸೇವೆಗೈದಿರುವ ನಿವೃತ್ತ ಯೋಧರನ್ನು ಇಲ್ಲಿ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿದ್ದು ಒಳ್ಳೆಯ ಕಾರ್ಯ. ಪತ್ರಿಕಾರಂಗ ಇಲ್ಲದಿದ್ದರೆ ಸಮಾಜ ಆರಾಜಕತೆ, ಸವಾ೯ಧಿಕಾರಿ ವ್ಯವಸ್ಥೆಗೆ ಸಾಗುವ ಅಪಾಯವೇ ಹೆಚ್ಚು ಇರುತ್ತಿತ್ತು. ಖಡ್ಗಕ್ಕಿಂತಲೂ ಲೇಖನಿ ಮೇಲು.ಹಾಗಾಗಿ ಪತ್ರಕರ್ತ ಮಿತ್ರರನ್ನು ಸನ್ಮಾನಿಸಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಔಷಧ ಮಳಿಗೆ ಉದ್ಘಾಟಿಸಿ ಮಾತನಾಡಿದ ಭಾರತೀಯ ಔಷಧ ವ್ಯಾಪಾರ ಸಂಘದ ಅಧ್ಯಕ್ಷ ಡಿ.ಎಸ್.ಗುಡ್ಡೋಡಗಿ, ಕಾಯಕದಲ್ಲಿ ಭೇದಭಾವ ತೋರಬಾರದು. ಸರ್ವಕಾಯಕಗಳು ಶ್ರೇಷ್ಠ. ಗೈಯುವ ಕಾಯಕದಲ್ಲಿ ಶೃದ್ಧೆ, ಆತ್ಮವಿಶ್ವಾಸ, ನಿರಂತರ ಪ್ರಯತ್ನ ಇರಬೇಕು. ಎಲ್ಲಕ್ಕಿಂತ ಹೆಚ್ಚು ಸೇವಾಮನೋಭಾವ ಇದ್ದರೆ ಯಾವುದೇ ಕಾಯಕದಲ್ಲಿ ಯಶಸ್ಸು ಪಡೆಯಬಹುದು.ವಿಶೇಷವಾಗಿ ಬಡರೋಗಿಗಳಿಗೆ ಸೇವೆಯನ್ನು ಸಲ್ಲಿಸಿ ಅವರ ದೃಷ್ಟಿಯಲ್ಲಿ ದೈವತ್ವ ಪಡೆಯಬೇಕು. ವೈದ್ಯರನ್ನು ನಮ್ಮ ಜನ ದೇವರೆಂದು ಭಾವಿಸುತ್ತಾರೆ. ಈ ವೃತ್ತಿಯನ್ನು ಗೌರವಿಸುತ್ತಾರೆ.ವೈದ್ಯಕೀಯ ಲೋಕ ಕರೋನಾ ರೋಗದಿಂದ ಹೊಸ ಸವಾಲುಗಳನ್ನು ತೆರೆದಿಡುತ್ತಿದೆ. ನಮ್ಮ ವೈದ್ಯರು ಸವಾಲುಗಳನ್ನು ಮೆಟ್ಟಿನಿಂತು ಸೇವೆ ಗೈದಿರುವುದು ಯಾರು ಮರೆಯುವಂತಿಲ್ಲ ಎಂದರು.
ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ,ಸತ್ಕಾರ್ಯಗಳನ್ನು ಇರಿಸಿಕೊಂಡು ಮಾಡುವ ಕೆಲಸದಲ್ಲಿ ನೆಮ್ಮದಿ ಇದೆ. ಅದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ದಯವಿಲ್ಲದ ಧರ್ಮವಿಲ್ಲ.ಮಾನವೀಯ ಮೌಲ್ಯ ರೂಢಿಸಿಕೊಂಡು ಮುನ್ನಡೆಯ ಬೇಕು. ಗುರುಗಳನ್ನು ಮುಂದಿಟ್ಟುಕೊಂಡು ಮಾಡುವ ಕಾರ್ಯಗಳಿಗೆ ಸೋಲಿಲ್ಲ ಎಂದರು.
ನೂತನವಾಗಿ ಆಯ್ಕೆಯಾಗಿರುವ ಪಟ್ಟಣ ಪಂಚಾಯತ ಸದಸ್ಯರಿಗೆ, ಪತ್ರಕರ್ತರಿಗೆ, ಮಾಜಿ ಸೈನಿಕರಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಸಂಗಮೇಶ ಕೆಂಭಾವಿ, ಅನುಪಮ ಸೇವೆ ಸಲ್ಲಿಸುತ್ತಿರುವ ಆರ್.ಎನ್.ಪವಾರ ಅವರುಗಳಿಗೆ ಶಾಸಕರು,ಸ್ವಾಮೀಜಿ ಶಾಲು ಹೊದಿಸಿ ಸನ್ಮಾನಿಸಿದರು.
ಜೆ.ಎಸ್.ಹಕ್ಕಿಮಠ ಪ್ರಾಥಿ೯ಸಿದರು.ಸಂಗಮೇಶ ಕೆಂಭಾವಿ ಸ್ವಾಗತಿಸಿದರು. ಎನ್.ಸಿ.ಆಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹಂಚಲಿ ನಿರೂಪಿಸಿದರು. ಯಾಸೀನ ಮುಲ್ಲಾ ವಂದಿಸಿದರು.