ಮಹಾಲಿಂಗಪುರ:ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ, ಸೂಫಿ ಸಂತ, ತತ್ವಪದ ಗಾಯಕ ಇಬ್ರಾಹಿಂ ಸುತಾರ(76) ವಿಧಿವಶರಾಗಿದ್ದಾರೆ. ತಮ್ಮ ಪ್ರವಚನ ಮತ್ತು ಸಂವಾದಗಳ ಮೂಲಕ ಹಿಂದೂ-ಮುಸ್ಲೀಮರ ಮಧ್ಯೆ ಭಾವೈಕ್ಯತೆಯನ್ನು ಹರಡಿದವರು. ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಭಕ್ತರಲ್ಲಿ ಒಬ್ಬರಾಗಿದ್ದ ಇಬ್ರಾಹಿಂ ಸುತಾರ್. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಬಡ ಕುಟುಂಬದಲ್ಲಿ ಇಬ್ರಾಹಿಂ ಸುತಾರ 1940ರ ಮೇ 10ರಂದು ಜನಿಸಿದರು. ಇವರ ತಂದೆ ನಬಿಸಾಹೇಬ್ ಮತ್ತು ತಾಯಿ ಅಮೀನಾಬಿ. ಇವರ ತಂದೆ ಬಡಗಿ ವೃತ್ತಿಯನ್ನು ಮಾಡಿಕೊಂಡಿದ್ದು, ಬಡ ಕುಟುಂಬದಲ್ಲಿ ಜನಿಸಿದ ಇಬ್ರಾಹಿಂ ಸುತಾರ ಅವರಿಗೆ ಓದಲು ಸಾಧ್ಯವಾಗಲಿಲ್ಲ.

ಮೂರನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ ಇಬ್ರಾಹಿಂ ಸುತಾರರು, ಮಹಾಲಿಂಗಪುರದ ಬಹುಸಂಖ್ಯಾತರು ಮಾಡುತ್ತಿದ್ದ ನೇಕಾರಿಕೆಯನ್ನೇ ಕಲಿತುಕೊಂಡರು. ತದನಂತರದಲ್ಲಿ ನೇಕಾರಿಕೆಯನ್ನೇ ತಮ್ಮ ಉದ್ಯೋಗವಾಗಿ ಆರಿಸಿಕೊಂಡಿದ್ದರು.
ಬಾಲ್ಯದಲ್ಲಿ ಕುರಾನ್ ಅಧ್ಯಯನ ಚಿಕ್ಕಂದಿನಲ್ಲೇ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಇಬ್ರಾಹಿಂ ಸುತಾರ, ಧರ್ಮಗುರುಗಳ ಮಾರ್ಗದರ್ಶನದಲ್ಲಿ ಕುರಾನ್ ಅಧ್ಯಯನ ಮಾಡಿಕೊಂಡರು. ಈ ವೇಳೆ ಬೇರೆ ಧರ್ಮಗ್ರಂಥಗಳಲ್ಲಿ ಸಾರವನ್ನು ತಿಳಿದುಕೊಳ್ಳುವ ಆಸೆ ಚಿಗುರಿತು. ಊರಿನಲ್ಲಿದ್ದ ಸಾಧುವಿನ ಭಜನಾ ಸಂಘ ಬೆಂಬಲ ನೀಡಿತು. ಧಾರ್ಮಿಕರ ಜೊತೆಯಲ್ಲಿ ತತ್ವಪದ ಮತ್ತು ವಚನಗಳನ್ನು ಕಲಿತುಕೊಂಡರು. .
ರಾಜ್ಯ ಮತ್ತು ದೇಶದ ಜನರಲ್ಲಿ ಭಾವೈಕ್ಯತೆಯನ್ನು ಸಾರುವ ಪ್ರವಚನಗಳನ್ನು ಮಾಡಿ ಜನರಲ್ಲಿ ಭಾವೈಕ್ಯತೆಯ ಭಾವನೆಯನ್ನು ಬಿತ್ತಿದ್ದಾರೆ. ಅವರು ಪ್ರವಚನಗಳ ಮೂಲಕ ಜನಮನ ಗೆದ್ದವರು. ಅಲ್ಲದೇ ಬಣವಣ್ಣನವರ ಅನುಯಾಯಿಗಳಾಗಿದ್ದರು.ಇಬ್ರಾಹಿಂ ಸುತಾರ ನಿಧನಕ್ಕೆ ಅನೇಕ ಗಣ್ಯರ ಸಂತಾಪ ಸೂಚಿಸಿದ್ದಾರೆ