
ದೇವನೂರು ಮಹಾದೇವ ಅವರು ಕನ್ನಡದ ದಲಿತ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ದಲಿತ ಸಂವೇದನೆಗಳನ್ನು ಅತ್ಯಂತ ಸೃಜನಶೀಲವಾಗಿ ಪ್ರಕಟಿಸಿದ ಪ್ರಸಿದ್ಧ ಕಥೆಗಾರರು.
ಕಾದಂಬರಿಕಾರ ಹಾಗೂ ಸಾಮಾಜಿಕ ಹೋರಾಟಗಾರ ಹೌದು. ಅವರ ನಿಜವಾದ ಹೆಸರು ಎನ್.ಮಹಾದೇವಯ್ಯ ಅಂತ. ಅವರು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವನೂರಲ್ಲಿ 10 ಜೂನ್ 1948 ರಂದು ಜನಿಸಿದವರು. ತಂದೆ ನಂಜಯ್ಯ ಪೊಲೀಸ್ ಕಾನ್ಸ್‍ಟೇಬಲ್ ಆಗಿದ್ದವರು. ತಾಯಿ ನಂಜಮ್ಮ. ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ದೇವನೂರು ಮಹಾದೇವ ಅವರ ವಿದ್ಯಾಭ್ಯಾಸ ಜರುಗಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು. ಅನಂತರ ಕೆಲಕಾಲ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಅಧ್ಯಾಪಕ ಸಂಶೋಧಕರಾಗಿ ಕಾರ್ಯನಿರ್ವಹಿಸಿದರು. ಅನಂತರದ ವರ್ಷದಲ್ಲಿ ಪೂರ್ಣಾವಧಿ ವ್ಯವಸಾಯಗಾರರಾದವರು.
ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿಯೇ ದೇವನೂರು ಮಹಾದೇವ ಸಾಹಿತ್ಯ ರಚನೆಯಲ್ಲಿ ತೊಡಗಿದ್ದವರು. ಆರಂಭದಲ್ಲಿ ಇವರು ಬರೆದದ್ದು ಕವನಗಳನ್ನು. ನವ್ಯಸಾಹಿತ್ಯ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲದಲ್ಲಿ ಇವರು ಕಥಾ ರಚನೆಯಲ್ಲಿ ತೊಡಗಿದ್ದವರು. ಅಮಾಸ, ಡಾಂಬರು ಬಂದುದು, ಮಾರಿಕೊಂಡವರು ಮೊದಲಾದ ದಲಿತ ಸಂವೇಧನೆಯನ್ನೊಳಗೊAಡ ಮೌಲಿಕ ಕಥೆಗಳನ್ನು ಪ್ರಕಟಿಸಿದವರು.
ಕನ್ನಡ ಸಾಹಿತ್ಯ ವಲಯದಲ್ಲಿ ಈ ಕಥೆಗಳು ಬಹುಬೇಗ ಚರ್ಚೆಯ ವಸ್ತುಗಳಾದುವು. ಜೊತೆಗೆ ನವ್ಯೋತ್ತರದ ಅಗ್ರಗಣ್ಯ ಲೇಖಕನೆನಿಸುವ ಸೂಚನೆಗಳನ್ನೂ ನೀಡಿದವು. ಕಾಲಕ್ರಮದಲ್ಲಿ ಇವರು ದ್ಯಾವನೂರು (ಕಥಾಸಂಕಲನ), ಒಡಲಾಳ, ಕುಸುಮಬಾಲೆ (ಕಾದಂಬರಿ) ಈ ಕೃತಿಗಳನ್ನು ಹೊರತಂದವರು. ಸಂಖ್ಯಾದೃಷ್ಟಿಯಿAದ ಕೃತಿಗಳು ಕಡಿಮೆ ಎನಿಸಿದರೂ ಸತ್ತ್ವದ ದೃಷ್ಟಿಯಿಂದ, ಹಿರಿಮೆಯ ದೃಷ್ಟಿಯಿಂದ ಮಹತ್ತ್ವದ ಕೃತಿಗಳು ಇವು. ಸ್ವಾತಂತ್ರ‍್ಯಾ ನಂತರದ ದಿನಗಳಲ್ಲಿ ರೂಢಿಗೆ ಬಂದ ಶಿಕ್ಷಣ ಕ್ರಮ ಅಂಬೇಡ್ಕರ್ ಚಳವಳಿಯ ಪ್ರಭಾವ ಮತ್ತು ಆಧುನಿಕ ವಿದ್ಯಮಾನಗಳಿಂದಾದ ದೃಷ್ಟಿಕೋನಗಳಿಂದ ದಲಿತರಲ್ಲಿ ಜಾಗೃತಿ ಮೂಡಿ ದಲಿತ ಲೇಖಕರು, ದಲಿತ ಪ್ರಪಂಚದ ಒಳ ಹೊರಗನ್ನು ಅದುವರೆಗೆ ಕಂಡರಿಯದ ರೀತಿಯಲ್ಲಿ ಅನಾವರಣ ಮಾಡತೊಡಗಿದವರು.
ಶತಶತಮಾನಗಳಿಂದ ದಲಿತರನ್ನು ಕಾಡುತ್ತ ಬಂದಿರುವ ಅಸ್ಪ್ನೃಶ್ಯತೆ, ಧಾರ್ಮಿಕ, ಸಾಮಾಜಿಕ ಅಮಾನುಷ ಪದ್ಧತಿಗಳು, ಅಪಮಾನದ ಸಂಗತಿಗಳು ಸಾಹಿತ್ಯದಲ್ಲಿ ಅನಾವರಣಗೊಳ್ಳತೊಡಗಿದವು. ದಲಿತನೊಬ್ಬನ ಸಂಕಷ್ಟಗಳು ಸಾಮಾಜಿಕ ಸಂಘರ್ಷವೊoದಕ್ಕೆ ಪ್ರೇರಣೆಯಾಗಬೇಕು ಎಂಬುದು ದಲಿತ ಸಾಹಿತ್ಯದ ಮುಖ್ಯ ಲಕ್ಷಣವೆನಿಸಿತು. ಪೂರ್ಣವಾಗಿ ದಲಿತ ಲೋಕವನ್ನು, ದಲಿತ ಸಂಸ್ಕೃತಿಯ ಸೂಕ್ಷ್ಮಗಳನ್ನು ತೆರೆದಿಡುವುದೇ ಇಲ್ಲಿ ಪ್ರಮುಖ ವಿಷಯವಾಯಿತು. ದೇವನೂರ ಮಹಾದೇವ ಅವರ ಕಥಾ ಸಾಹಿತ್ಯ ಈ ಮಾತಿಗೆ ಉದಾಹರಣೆಯಾಗಿದೆ. ಸಾಮಾನ್ಯವಾಗಿ ಇವರ ಕಥೆಗಳಲ್ಲಿ ಬರುವ ದಲಿತರ ವಾಸಸ್ಥಾನ, ಹಟ್ಟಿ, ಹರಿದಿರುವ ಬಟ್ಟೆ, ಊರಿನ ದಾರಿಯ ವಿವರಗಳು ಕುವೆಂಪು ಅವರ ಕಾದಂಬರಿಗಳಲ್ಲಿನ ಕಾಡಿನ ವಿವರಗಳಂತೆ ದಟ್ಟವಾಗಿರುವುದನ್ನು ಕಾಣಬಹುದು.
ಒಂದು ದಹನದ ಕತೆಯಲ್ಲಿ ನಾಯಕ ಕಾಣುವ ತನ್ನ ಹಟ್ಟಿಯ ವರ್ಣನೆ ಈ ಮೇಲಿನ ಮಾತಿಗೆ ಉದಾಹರಣೆ ಎಂಬAತಿದೆ. ಇಂಥ ಬರೆವಣಿಗೆಯ ಮೂಲಕ ಪ್ರಪ್ರಥಮಬಾರಿಗೆ ದಲಿತರ ಊರು ಕೇರಿಗಳ ವಿಷಯ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಯಿತು. ದ್ಯಾವನೂರು ಕಥಾಸಂಕಲನದ ಅನಂತರ ಬಂದ ಒಡಲಾಳ ಕಾದಂಬರಿ ದಲಿತ ಕುಟುಂಬಗಳ ಬದುಕನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ ಕೃತಿಗಳಾದವು. ದಲಿತ ಬದುಕಿನ ವಿವಿಧ ಮುಖಗಳನ್ನು ಚಿತ್ರಿಸುವಲ್ಲಿ ದೇವನೂರು ಮಹಾದೇವ ಅವರು ಯಶಸ್ವಿ ಬರೆಹಗಾರರಾಗಿದ್ದಾರೆ.
ಸಾಕವ್ವ ಈ ಕಾದಂಬರಿಯ ಕೇಂದ್ರ ಪಾತ್ರವಾಗಿದೆ. ಇವಳ ಸುತ್ತ ಹಬ್ಬಿರುವ ವರ್ತಮಾನದ ಶೋಷಣೆ ಮೂಲ ಬದುಕಿನ ನಿರೂಪಣೆಯ ಈ ಬರೆವಣಿಗೆಗೆ ಲಾಲಿತ್ಯವಿದೆ. ಹಾಸ್ಯವಿದೆ, ಮೇಲುದನಿ ಇದೆ, ಅಭಿವ್ಯಕ್ತಿ ಕ್ರಮದಲ್ಲಿ ಕುವೆಂಪು ಮತ್ತು ಮಾಸ್ತಿಯವರನ್ನು ನೆನಪಿಸುವಂತಿದೆ. ಅಷ್ಟರಮಟ್ಟಿಗೆ ದಲಿತ ಸಂವೇದನೆ ಪ್ರಕಟವಾಗಿದೆ. ಕುಸುಮಬಾಲೆ ದೇವನೂರು ಮಹಾದೇವ ಅವರ ಮೂರನೆಯ ಕೃತಿ. ಈ ಕಾದಂಬರಿಯ ರಚನಾಸ್ವರೂಪ ವಿಶಿಷ್ಟವಾದದ್ದು. ನಿರ್ದಿಷ್ಟ ಕಾಲದಲ್ಲಿ ಕತೆಯನ್ನು ಹೇಳದೇ ಭೂತ, ವರ್ತಮಾನ ಮತ್ತು ಭವಿಷ್ಯತ್ಕಾಲಗಳಲ್ಲಿ ಹೇಳತೊಡಗಿರುವುದು ಕಂಡುಬರುತ್ತದೆ.
ಹೊಲೆಯರ ಕೇರಿಯಲ್ಲಿ ಜರುಗುವ ಕಾರ್ಯಾಚರಣೆಗಳೆಲ್ಲ ವರ್ತಮಾನಕ್ಕೂ ಅಕ್ಕಮಹಾದೇವಮ್ಮ ಮತ್ತು ಯಾಡರ ವಿವರಗಳು ಭೂತಕಾಲಕ್ಕೂ ಪರ್ಯಾದ (ಕುಸುಮಳ ತಮ್ಮ), ಈರಿಯ ಮಗು ಕೆಂಪಿಯ ಗರ್ಭದಲ್ಲಿರುವ ಶಿಶು ಇವು ಭವಿಷ್ಯತ್ಕಾಲಕ್ಕೂ ಸಂಬoಧಿಸಿದವಾಗಿವೆ. ಜೀವಾತ್ಮಕ್ಕೂ ಮಂಚಕ್ಕೂ ನಡೆಯುತ್ತಿದ್ದ ಸಂಭಾಷಣೆ, ಜೋತಮ್ಮಗಳ ನಡುವೆ ನಡೆಯುತ್ತಿದ್ದ ಚರ್ಚೆ, ಜನನ ಮರಣಗಳಿಗೆ ಸಂಬAಧಿಸಿದ ಜಾನಪದಗಳು ಇತ್ಯಾದಿಗಳಲ್ಲೇ ಮತ್ತೊಂದು ಹಂತವನ್ನು ತಲುಪುವಂಥವು.
ಅಲ್ಲಲ್ಲಿ ಕಲಸು ಮೇಲೋಗರವಾಗಿರುವ, ಎಲ್ಲೆಲ್ಲೋ ಹರಡಿಕೊಂಡಿರುವ ವಿವರಗಳನ್ನು ತುಂಬ ಎಚ್ಚರಿಕೆಯಿಂದ ಗಂಭೀರವಾಗಿ ಗಮನಿಸುತ್ತ ಕ್ರೋಡೀಕರಿಸುತ್ತ ಹೋದರೆ ಕಾದಂಬರಿಯ ಆರಂಭದಲ್ಲಿ ಲೇಖಕರು ಸಂಗ್ರಹಿಸಿಕೊAಡಿರುವ ಕತೆಯನ್ನು ಅದರ ವಸ್ತುವನ್ನು ಅರ್ಥಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿಯೇ ದೇವನೂರು ಮಹಾದೇವ ಅವರ ಉಳಿದೆರಡು ಕೃತಿಗಳಿಗಿಂತ ಇದು ಭಿನ್ನ ಸ್ವರೂಪದ್ದಾಗಿದೆ. ಇಲ್ಲಿಯ ಭಾಷೆ ಅದುವರೆಗೂ ಕನ್ನಡ ಸಾಹಿತ್ಯದಲ್ಲಿ ದಾಖಲಾಗಿರದ ಗ್ರಾಮ್ಯ ಸೊಗಡಿನಿಂದ ಕೂಡಿದ್ದು ವಿಶಿಷ್ಟವಾಗಿದೆ.
ಏನೂ ಅರಿಯದ ಪರ್ಸಾದನಂಥವರು ಪಡುವ ಸಂತೋಷ, ಕುಸುಮ ಈರಿಯಂಥವರು ಅನುಭವಿಸುವ ಯಾತನೆ, ತಮ್ಮ ಮಿತಿಯಲ್ಲಿಯೇ ಗಾರಸಿದ್ಧಮಾವ, ಯಾಡ, ಅಮಾಸ ಮೊದಲಾದವರು ಪಡುವ ಶ್ರಮ, ಸಂದಿಗ್ಧತೆಯ ಸಂದರ್ಭಗಳು ಬಂದೊದಗಿದ್ದರೂ ತಮ್ಮ ಜೀವನದಲ್ಲಿ ಸುಖ ಸಂತೋಷಗಳಿಗೆ ಧಕ್ಕೆಯನ್ನುಂಟು ಮಾಡಿಕೊಳ್ಳಲಾರದ ಚೆನ್ನನ ಅಪ್ಪನಂಥವರ ಲವಲವಿಕೆಯ ಬದುಕು ಇತ್ಯಾದಿಗಳೆಲ್ಲ ಸಂವೇದನಾಶೀಲ ಚೌಕಟ್ಟಿನೊಳಗೇ ನಡೆಯುತ್ತವೆ.
ಹೀಗಾಗಿಯೇ ಇಲ್ಲಿಯ ಬದುಕಿನಲ್ಲಿ ವೈವಿಧ್ಯತೆ ಇದೆ. ಇದಕ್ಕೆ ಪ್ರೇರಕವಾಗಿರುವ ಪರಿಸರದ ಸಾಂಸ್ಕೃತಿಕ ವಿವರಗಳನ್ನು ಕೇವಲ ಚರ್ಚೆಗೆ, ಪರಿಶೀಲನೆಯ ಹಂತಕ್ಕೆ ಸೀಮಿತಗೊಳಿಸದೇ ಮೌಖಿಕ ಅಂಶಗಳನ್ನೆಲ್ಲಾ ಒಟ್ಟಾರೆಯಾಗಿ ಸಂಗ್ರಹಿಸಿ ಸುಂದರ ಕಥಾ ಚೌಕಟ್ಟಿನಲ್ಲಿ ಅಳವಡಿಸುವ ಕುಶಲಗಾರಿಕೆಯನ್ನು ಕಾದಂಬರಿಗಾರರು ಪ್ರದರ್ಶಿಸಿರುವುದು ಕಂಡುಬರುತ್ತದೆ. 60-70 ರ ದಶಕದಲ್ಲಿನ ಲೋಹಿಯಾವಾದಿ ಸಮಾಜವಾದಿ ಪಕ್ಷ, ಸಮಾಜವಾದಿ ಯುವಜನ ಸಭಾದ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿದ್ದ ದೇವನೂರು ಮಹಾದೇವ ಅವರ ವ್ಯಕ್ತಿತ್ವದ ಮೇಲೆ ಅನಂತಮೂರ್ತಿ, ಅಲನಹಳ್ಳಿಕೃಷ್ಣ ಮೊದಲಾದ ಲೇಖಕರ ಪ್ರಭಾವವೂ ಆಗಿತ್ತೆಂದು ಹೇಳಬಹುದು.
ವಿದ್ಯಾರ್ಥಿ ದೆಸೆಯಲ್ಲಿಯೇ ನರ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕ ಪ್ರಕಾಶಕರಾಗಿದ್ದ ದೇವನೂರು ಮಹಾದೇವ ಅವರು 1975 ರಲ್ಲಿ ಜಯಪ್ರಕಾಶ ನಾರಾಯಣರು ಮೈಸೂರಿಗೆ ಬಂದಿದ್ದಾಗ ಸಾರ್ವಜನಿಕ ಸಭೆಯೊಂದರ ಅಧ್ಯಕ್ಷತೆ ವಹಿಸಿ ಗೌರವಕ್ಕೆ ಪಾತ್ರರಾಗಿದ್ದರು. ಇವರು 1979 ರಲ್ಲಿ ದಲಿತ ಬಂಡಾಯ ಸಾಹಿತ್ಯ ಚಳವಳಿಯ ನಿಕಟ ಸಂಬAಧ ಹೊಂದಿದ್ದ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಘಟಕರಾಗಿಯೂ ಕಾರ್ಯನಿರ್ವಹಿಸಿದವರು. 1989ರಲ್ಲಿ ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ ನಡೆದ ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಮ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದವರು. ಇವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದವರು.
ದೇವನೂರ ಮಹಾದೇವ ಅವರ ಕಥಾ ಸಾಹಿತ್ಯದಲ್ಲಿ ಗಮನ ಸೆಳೆದ ಒಡಲಾಳ, ಕುಸುಮಬಾಲೆ ಮತ್ತು ಅಮಾಸ ಇವೆಲ್ಲ ನಾಟಕಗಳಾಗಿ ರೂಪಾಂತರಗೊAಡು ರಂಗಭೂಮಿಯಲ್ಲಿ ಯಶಸ್ವಿಯಾಗಿವೆ. 1984 ರಲ್ಲಿ ಕಲ್ಕತ್ತೆಯ ಭಾರತೀಯ ಭಾಷಾ ಪರಿಷತ್ತು ಒಡಲಾಳಕ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. 1991 ರಲ್ಲಿ ಕುಸುಮಬಾಲೆಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. 1995 ರಲ್ಲಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಲಭಿಸಿದವು. ಇವರ ಕೃತಿಗಳು ಇಂಗ್ಲಿಷ್ ಹಾಗೂ ಮತ್ತಿತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಯಾರ ಜಪ್ತಿಗೂ ಸಿಗದ ನವಿಲುಗಳು ಇವರ ಸಾಹಿತ್ಯ ಕುರಿತ ಚರ್ಚೆ ಹಾಗೂ ವಿಮರ್ಶೆಯ ವಿಶೇಷ ಬಗೆಯ ಕೃತಿಯಾಗಿದೆ..!
ಇನೊಮ್ಮೆ ಹೇಳಬೇಕೆಂದರೆ ದೇವನೂರ ಮಹಾದೇವ ಅವರು ಬರೆದದ್ದು ಕಡಿಮೆ ಎನಿಸಿದರೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿ ಚರ್ಚೆಗೆ ಒಳಗಾಗಿ, ದಲಿತರ ನೋವು-ನಲಿವು, ಬದುಕು-ಬವಣೆಗಳ ಬಗ್ಗೆ ಮೇಲ್ವರ್ಗದ ಸಾಹಿತಿಗಳು ಸಾಹಿತ್ಯ ರಚಿಸಿದ್ದರೂ, ದಲಿತ ವರ್ಗದವರಿಂದಲೇ ತಮ್ಮ ದುಃಖ ದುಮ್ಮಾನಗಳಿಗೆ ಸಾಹಿತ್ಯದ ಅಭಿವ್ಯಕ್ತಿ ನೀಡಲಾರಂಭಿಸಿದ ಎನ್.ಮಹಾದೇವಯ್ಯನವರು ಹುಟ್ಟಿದ್ದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ.
ತಂದೆ ನಂಜಯ್ಯ, ತಾಯಿ ನಂಜಮ್ಮ, ತಂದೆ ಕಾನ್‌ಸ್ಟೇಬಲ್ ಹುದ್ದೆಯಲ್ಲಿದ್ದವರು. ಪ್ರಾರಂಭಿಕ ಶಿಕ್ಣಣ ಚಿಕ್ಕಕವಲಂದೆ, ಹಂಪಾಪುರ, ಸಾಲಿಗ್ರಾಮ ಮುಂತಾದ ಕಡೆಗಳಲ್ಲಿ ಪ್ರೌಢ ಶಿಕ್ಷಣ ಮೈಸೂರಿನಲ್ಲಿ ಆಯಿತು.
ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ, ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಿAದ ಪಡೆದ ಎಂ.ಎ. ಪದವಿ, ಹಾಗೂ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಕೆಲ ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿ, ಮೈಸೂರು ಸಮೀಪ ಹುಯಿಲಾಳು ಗ್ರಾಮದ ಜಮೀನಿನಲ್ಲಿ ವ್ಯವಸಾಯದಲ್ಲಿ ನಿರತರಾದವರು ದೇವನೂರು ಮಹಾದೇವ. ಹೈಸ್ಕೂಲು ಓದುತ್ತಿದ್ದಾಲೇ ಇವರ ಮೇಲೆ ಪ್ರಭಾವ ಬೀರಿದ ಕೃತಿಯೆಂದರೆ ‘ನೊಂದ ಜೀವಿ’ (ಲೇ. ಮಿಸರಬಲ್ – ವಿಕ್ಟರ್ ಹ್ಯೂಗೋ) ಇವರನ್ನು ಚಿಂತನೆಗೆ ಹಚ್ಚಿ ಬಹಳಷ್ಟು ದಿವಸ ಕಾಡಿದ ಕೃತಿ.
ಇವರ ಮೇಲೆ ಪ್ರಭಾವ ಬೀರಿದ ಸಾಹಿತಿಗಳೆಂದರೆ ಬೇಂದ್ರೆ, ಕುವೆಂಪು, ಯು.ಆರ್. ಅನಂತಮೂರ್ತಿ, ಲಂಕೇಶ್, ಚಂದ್ರಶೇಖರ ಕಂಬಾರ, ಪೂರ್ಣ ಚಂದ್ರ ತೇಜಸ್ವಿ, ಕೃಷ್ಣ ಆಲನಹಳ್ಳಿ ಮುಂತಾದವರುಗಳು. ವಿದ್ಯಾರ್ಥಿಯಾಗಿದ್ದಾಗಲೇ ಸಮಾಜವಾದಿ ಯುವಜನ ಸಭಾದ ಕಾರ್ಯಕರ್ತರಾಗಿದ್ದವರು ದೇವನೂರು ಮಹಾದೇವ ಅವರು. ಕೆಲವು ಗೆಳೆಯರೊಂದಿಗೆ ಸೇರಿ ವಿದ್ಯಾರ್ಥಿ ಸಮುದಾಯಕ್ಕೆ ‘ನರ’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದವರು. ಪ್ರೊ.ಎಂ.ಡಿ.ನAಜುAಡಸ್ವಾಮಿಯವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ ‘ಮಾನವ’ ಪತ್ರಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಅವರು.
ಇವರು ಬರೆದ ಕಥೆಗಳು ಆಂದೋಲನ, ಪ್ರಜಾವಾಣಿ, ಉದಯವಾಣಿ, ಸಾಕ್ಷಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ದ್ಯಾವನೂರು ಎಂಬ ಕಥಾ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದ ವಿಮರ್ಶಕರ, ಸಾಹಿತ್ಯಾಭಾಸಿಗಳ, ಸಾಹಿತ್ಯಾಸಕ್ತರ ಗಮನ ಸೆಳೆದವರು. ದಲಿತ ಸಮಾಜದ ಒಳ ಜೀವನದ ತುಡಿತ-ಮಿಡಿತಗಳನ್ನು ಸಶಕ್ತವಾಗಿ, ಸಮಾಜದ ಎಲ್ಲ ಸಂಕೀರ್ಣತೆಗಳೊAದಿಗೇ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಕಲಾತ್ಮಕವಾಗಿ, ಕಥನಗಾರಿಕೆಯನ್ನು ತಮ್ಮ ಕಥೆಗಳಲ್ಲಿ ಪ್ರಕಟಿಸಿದವರು.
ನಂಜನಗೂಡಿನ ಕಡೆಯ ತಮ್ಮ ಜನರ ಆಡುಮಾತಿನ ಶೈಲಿ ಬಳಸುವ ದೇವನೂರು ಮಹಾದೇವ ಅವರು ಕಥೆಗಳಲ್ಲಿ ಭಾಷೆ, ನುಡಿಗಟ್ಟುಗಳ ಪಾತ್ರ ಮಹತ್ವಪೂರ್ಣವಾದದ್ದು. ನಂಜನಗೂಡಿನ ಮಹಿಳಾ ವಿದ್ಯಾಪೀಠದಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಬರೆದ ಕಿರು ಹೊತ್ತಿಗೆ ‘ನಂಬಿಕೆಯ ನೆಂಟ’. ನಂತರ ಮೊದಲ ಕಥೆ ಬರೆದದ್ದು ಪಿ.ಯು. ತರಗತಿಯಲ್ಲಿದ್ದಾಗ 1967-68 ರ ಸುಮಾರಿನಲ್ಲಿ.
ಇವರ ಮೊದಲ ಕಥಾ ಸಂಕಲನ ದ್ಯಾವನೂರು ವಿನಲ್ಲಿ ಮಾರಿಕೊಂಡವರು, ಗ್ರಸ್ತರು, ಒಂದು ದಹನದ ಕಥೆ, ದತ್ತ, ಡಾಂಬರು ಬಂದುದು, ಮೂಡಲ ಸೀಮೆಯಲ್ಲಿ ಕೊಲೆಗಿಲೆ ಮುಂತಾಗಿ, ಅಮಾಸ ಮೊದಲಾದ ಏಳು ಕಥೆಗಳಿವೆ. ಈ ಕಥಾಸಂಕಲನವು ಪ್ರಕಟವಾದುದು 1973 ರಲ್ಲಿ. ನಂತರ 1979 ರಲ್ಲಿ ಒಡಲಾಳ, 1984 ರಲ್ಲಿ ಕುಸುಮಬಾಲೆ ಕಿರು ಕಾದಂಬರಿಗಳು ಪ್ರಕಟಗೊಂಡವು. ಒಡಳಾಳ ಕೃತಿಯು ಮೊದಲು ಪ್ರಕಟವಾದುದು ಪ್ರಜಾವಾಣಿಯ ದೀಪಾವಳಿಯ ವಿಶೇಷ ಸಂಚಿಕೆಯಲ್ಲಿ. ಕೆಳವರ್ಗದ ಜನರ ಬದುಕು, ಅವರಲ್ಲಿ ಮಡುಕಟ್ಟಿರುವ ಆಸೆ, ಅಭಿಮಾನ, ಅಸಹಾಯಕತೆಗಳೇ ಕಾದಂಬರಿಯ ವಸ್ತು. ಇದು ಕಾದಂಬರಿಯಾಗಿ ಅಲ್ಲದೇ ನಾಟಕ ರೂಪಾಂತರವಾಗಿಯೂ ಬಹಳಷ್ಟು ಯಶಸ್ಸು ಕಂಡ ಕೃತಿಯಾಗಿದೆ. ಈ ಕೃತಿಗೆ ಕಲ್ಕತ್ತೆಯ ಭಾರತೀಯ ಭಾಷಾ ಪರಿಷತ್ತಿನ ಎಚ್.ಇ.ಜಿ. ಭಿಲ್ವಾರ ಪ್ರಶಸ್ತಿಯನ್ನು (1984) ಪಡೆದುಕೊಂಡಿದೆ. ನಂತರ ಪ್ರಕಟಗೊಂಡ ಕೃತಿ ಕುಸುಮಬಾಲೆ (1989), ಅಕ್ಕ ಮಹಾದೇವಮ್ಮ ಅವಳ ಮಗ ಯಾಡ, ಅವನ ಮಗ ಸೋಮಪ್ಪ, ಅವನ ಮಗಳು ಕುಸುಮ, ಹೀಗೆಯೇ ನಾಲ್ಕು ತಲೆಮಾರುಗಳ ಕಿರು ಕಾದಂಬರಿಯ ಹರವು 77 ಪುಟಗಳಲ್ಲಿ ಪ್ರವಹಿಸುತ್ತದೆ.
ಇದು ರಂಗದ ಮೇಲೆಯೂ ಹಲವಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿತು. ಕುಸುಮಬಾಲೆಯಲ್ಲಿ ಬಳಸಿರುವ ಭಾಷಿ ವಿಶಿಷ್ಟ ಬಗೆಯದು. ನಂಜನಗೂಡಿನ ಪರಿಸರದ ದಲಿತರ ಉಪಭಾಷೆಯಲ್ಲಿ ಇಡೀ ವೃತ್ತಾಂತವನ್ನು ನಿರೂಪಿಸಿದ್ದಾರೆ ಅವರು. ಈ ಕೃತಿಯು 1990 ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗೂ ಪಾತ್ರವಾಯಿತು. 1992 ರಲ್ಲಿ ಸಮಗ್ರ ಕೃತಿಗಳು ಪ್ರಕಟಗೊಂಡು 1995 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವಕ್ಕೂ ಪಾತ್ರರಾದವರು. ಇವರ ಇತ್ತೀಚಿನ ಕೃತಿ ‘ಎದೆಗೆ ಬಿದ್ದ ಅಕ್ಷರ’. ಅಮೆರಿಕದ ಅಯೋವ ವಿಶ್ವವಿದ್ಯಾಲಯದಲ್ಲಿ ನಡೆದ ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂನಲ್ಲಿ (1989) ಕರ್ನಾಟಕವನ್ನು ಪ್ರತಿನಿಧಿಸಿದ್ದವರು ಅವರು.
ಅಮೆರಿಕ ಫೋರ್ಡ್ ಫೌಂಡೇಷನ್ನಿನವರು ನೀಡಿದ ಫೆಲೋಷಿಪ್ಪನ್ನು ನಿರಾಕರಿಸಿದರಾದರೂ ಭಿಲ್ವಾರ ಪ್ರಶಸ್ತಿಯ ಮೊತ್ತವನ್ನು ದಲಿತ ನಿಧಿಗೆ ನೀಡಿದವರು ದೇವನೂರು ಮಹಾದೇವ ಅವರು. 1979 ರಲ್ಲಿ ರಾಜ್ಯ ಬಂಡಾಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದವರು. ರಾಜಕೀಯದಲ್ಲೂ ಗುರುತಿಸಿಕೊಳ್ಳಲು ಅಪೇಕ್ಷಿಸಿ ಕಟ್ಟಿದ ಪಕ್ಷ ಸರ್ವೋದಯ ಕರ್ನಾಟಕ. ಅವರನ್ನು ಹುಡುಕಿಕೊಂಡು ಬಂದ ಇತರ ಪ್ರಶಸ್ತಿಗಳೆಂದರೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1987), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ನೃಪತುಂಗ ಪ್ರಶಸ್ತಿ 2010 ರಲ್ಲಿ ಈ ಪ್ರಶಸ್ತಿಯನ್ನು ಪ್ರಖ್ಯಾತ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಮ್ಮೇಳನಾಧ್ಯಕ್ಷರಾಗಿದ್ದ (ಗಂಗಾವತಿ- 2011) ಸಿ.ಪಿ.ಕೆ.ಯವರೊಂದಿಗೆ ಹಂಚಿಕೊAಡಿವರು ಮತ್ತು 2011 ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (2013) ಗೌರವಕ್ಕೂ ಪಾತ್ರರಾಗಿದ್ದವರು.
ದೇವನೂರರ ಕೃತಿ ಮತ್ತು ಇವರ ಬಗ್ಗೆ ಸಾಹಿತಿಗಳು, ಮಿತ್ರರು, ಕುಟುಂಬದವರು ಬರೆದಿರುವ, ಹೇಳಿರುವ ನೆನಪುಗಳು, ಕೃತಿಗಳ ಬಗ್ಗೆ ಹಿರಿಯ ಸಾಹಿತಿಗಳ ಅನಿಸಿಕೆಗಳು, ಸ್ನೇಹಿತರು ಬರೆದಿರುವ ಪತ್ರಗಳು, ಛಾಯಾಚಿತ್ರಗಳಿಂದ ಕೂಡಿದ್ದು, ಒಂದು ರೀತಿಯ ಅಭಿನಂದನಾ ಗ್ರಂಥವೆನಿಸುವAತಹ ‘ಯಾರ ಜಪ್ತಿಗೂ ಸಿಗದ ನವಿಲುಗಳು’ 2000 ದಲ್ಲಿ ಪ್ರಕಟವಾಗಿದೆ..!
- ಕೆ.ಶಿವು.ಲಕ್ಕಣ್ಣವರ