ನೋವು! ಯಾತನೆ! ಯಮಯಾತನೆ! ಇಡೀ ದೇಹವನ್ನೇ ಒಳ್ಳಲ್ಲಿ ಹಾಕಿ ಕುಟ್ಟಿದ ಅನುಭವ. ಸಾಕಪ್ಪ ಸಾಕು ಈ ಜೀವನ ಎನಿಸುವಷ್ಟು ವೈರಾಗ್ಯ.ಈ ಬದುಕೇ ಬೇಡ. ತಡೆದುಕೊಳ್ಳಲಾರೆ… ಸಹಿಸಲಾರೆ… ಅನುಭವಿಸಲಾರೆ. ಕಣ್ಣು ಬಿಡಲೂ ತ್ರಾಣವಿಲ್ಲ. ಯಾವುದೋ ಕೈಗಳು ಬಂದು ತಡವುತ್ತಿವೆ. ಹಣೆ ಮುಟ್ಟಿ ನೋಡಿದ ಸ್ಪರ್ಶದ ಅನುಭವ. ಆದರೂ ಕಣ್ಗಳು ಮೆತ್ತಿಕೊಂಡಿವೆ. ನರಳುವುದು, ಮುಲುಗುವುದು, ಒದ್ದಾಡುವುದ ಬಿಟ್ಟರೆ ಏನೂ ಮಾಡಲಾಗದ ಅಸಹಾಯಕತೆ.

ಆ ಕೈಗಳು ಥರ್ಮಾಮೀಟರನ್ನು ಕಂಕುಳಲ್ಲಿ ಸಿಕ್ಕಿಸಿದಂತೆ, ಬೆರಳ ತುದಿಗೆ ಆಕ್ಸೋಮೀಟರ್ ಹಚ್ಚಿದಂತೆ, ಹಣೆಯ ಮೇಲೆ ಮೃದುವಾದ ವಾತ್ಸಲ್ಯದ ಟಚ್! ಈ ಕ್ಷಣ ಬಹಳ ಕಠಿಣವಾಗಿತ್ತು ನಿಜ. ಆದರೆ ನಾ ಒಂಟಿಯಲ್ಲ ಎನ್ನುವ ಧೈರ್ಯ. ಹೌದಲ್ಲವೇ ಎಷ್ಟೇ ಕಷ್ಟ ಬಂದರೂ ಬದುಕ ಬೇಕೆನ್ನುವ ಆಸೆಗೆ ಕೊನೆಯೇ ಇಲ್ಲ. ಅರ್ಧ ಆಯಸ್ಸು ಕಳೆದು ಹಳೆಯದಾದರೂ ಜೀವನೋತ್ಸಾಹ ಬತ್ತಿರಲಿಲ್ಲ. ಆದರೆ ಈ ಅನಾರೋಗ್ಯದ ಸಮಯ ದೃತಿಗೆಡಿಸುತ್ತಿದೆ.

ಭರವಸೆ, ವಿಶ್ವಾಸ, ಮನೋಬಲ, ಆತ್ಮಸ್ಥರ್ಯ ಕಳೆದುಕೊಳ್ಳಬಾರದು. ಗಟ್ಟಿಯಾಗಿಯೇ ಇರಬೇಕು. ಇದು ಮನದ ಅಚಲ ನಿರ್ಧಾರ. ನಾ ಸಾಯಲಾರೆ, ನಾ ಸಾಯುವುದಿಲ್ಲ, ನಾ ಬದುಕಲೇ ಬೇಕು, ಬದುಕೇ ಬದುಕುತ್ತೇನೆ. ಮನಸು ಸಾವಿರ ಸಾವಿರ ಬಾರಿ ನುಡಿಯಲಿಲ್ಲ. ನಾ ನುಡಿಸಿದೆ.

ಆರಂಭದಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ.ಡಾಕ್ಟರ್ ಇದ್ದರೆ, ಬೆಡ್ಡಿಲ್ಲ. ಬೆಡ್ಡಿದ್ದರೆ ಮೆಡಿಸನ್ ಇಲ್ಲ. ಶತ ಪ್ರಯತ್ನದಲ್ಲಿ ಮನೆಯವರೆಲ್ಲಾ ಸೋತು ಹೋದರು. ಮನೆಯನ್ನೇ ಆಸ್ಪತ್ರೆ ಮಾಡುವ ಅನಿವಾರ್ಯತೆ. ಪಾಸಿಟಿವ್ ಎನ್ನುವ ಕೆಟ್ಟ ವೈಬ್ರೇಷನ್ ಇಡೀ ಜಗತ್ತನ್ನೇ ಆವರಿಸಿರುವಾಗ, ನಾ ಯಾವ ಗಿಡದ ತಪ್ಪಲು? ಆ ರಕ್ಕಸನ ಬಿಗಿಹಿಡಿತದಲ್ಲಿ ನಲುಗುತ್ತಿದ್ದೆನಾದರೂ ನನ್ನತನವ ಬಿಡದ ಹಟ ಅಂತರಂಗದಲ್ಲಿತ್ತು.

ನಾ ರೋಗಿ, ನಾ ಅಸಹಾಯಕಿ, ನಾ ಮೌನಿ. ಕೊನೆಗೆ ನಾಲ್ಕು ಗೋಡೆಯ ಮಧ್ಯೆ ಬಂಧನದಲ್ಲಿ ಬಿಟ್ಟು ಹೋದಂತೆ ಭಾಸ! ನಾ ಏಕಾಂಗಿಯೇ? ಹೌದು. ಯಾರೂ ಇಲ್ಲ. ಒಂಟಿತನವೇ?ಏಕಾಂಗಿತನವೇ? ಇಲ್ಲ ಇದು ಏಕಾಂತದ ಶುಶ್ರೂಷೆ! ಬದುಕಿಗಾಗಿ ಹೋರಾಡಲೇ ಬೇಕಾದ ಏಕಾಂತ ಸಮರ.ಮನಸಿಗೆ ಸಾಂತ್ವನ ಮೃದು ಮಧುರ ಮಾತುಗಳನು ಆ ಮನಸೇ ಆಡಬೇಕು.

ಒಂದು ವಾರದ ನಂತರ ಪರಿಸ್ಥಿತಿ ಹತೋಟಿಗೆ ಬಂದಿತ್ತು.ಮನೆಯವರು ಮನೆಯನ್ನೇ ಆಸ್ಪತ್ರೆಯಾಗಿಸಿ ಡಾಕ್ಟರ್, ನರ್ಸನ್ನು, ಇಟ್ಟಿದ್ದಾರೆ.ಸಧ್ಯ ಬದುಕಿದೆನಲ್ಲಾ?ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಸರಿಯಾಗಿ ಎಷ್ಟು ದಿನಗಳು ಕಳೆದಿವೆ ಅನಾರೋಗ್ಯದಲ್ಲಿ ಎನ್ನುವುದು ಸ್ಪಷ್ಟವಿಲ್ಲ.

ಈ ರೋಗವೇ ಹೀಗೆ. ನಮ್ಮವರು, ತಮ್ಮವರು ಎನ್ನುವಂತಿಲ್ಲ. ಅದೆಷ್ಟೋ ಜನ ಅನಾಥ ಹೆಣವಾಗಿ ಹೋಗಿ ಆಗಿದೆಯಲ್ಲ. ಈಗ ಅನಾಥ ರೋಗಿಯಾಗಿ ಉಳಿದಿರುವುದು ನನ್ನ ಪುಣ್ಯ! ಸಾಯಲಿಲ್ಲವಲ್ಲ. ಸತ್ತೇ ಹೋಗಿದ್ದರೆ, ಹೀಗೆಲ್ಲಾ ಯೋಚನೆ ಮಾಡುವ ಅವಕಾಶವೂ ಇರುತ್ತಿರಲಿಲ್ಲ. ಎಲ್ಲವೂ ಮೌನವಾಗಿರುತ್ತಿತ್ತು.ಇದ್ದವರು ಇರುತ್ತಾರೆ, ಹೋದವರು ಹೋಗಿರುತ್ತಾರೆ.ಅದಕ್ಕೆ ಗಾದೆ ಮಾತಿರೋದು, ‘ಇದ್ದವ್ರು ಎಲ್ಲಾ ಅನುಭವಿಸ್ತಾರ, ಹೋದವ್ರ ಬಾಯಾಗ್ ಮಣ್ಣ್ ಬಿತ್ತು’.

ರೋಬೋಟ್ ವೇಷಧಾರಿಯಂತೆ ಇರುವ ವ್ಯಕ್ತಿ ಆಗಾಗ ಬಂದು ಇಂಜೆಕ್ಷನ್, ಮಾತ್ರೆ, ಔಷಧ ಕೊಟ್ಟು ಹೋಗುತ್ತಿತ್ತು.ಪಾಪ ಡ್ಯೂಟಿ. ನಮ್ಮಂಥ ಪೇಶಂಟ್ ಸಿಕ್ಕರೆ ತಮ್ಮ ಕಾಯಕ ತಾವು ಮಾಡಬೇಕು.ತಮ್ಮ ಜೀವವನ್ನೇ ಒತ್ತೆ ಇಟ್ಟು ಮಾಡುವ ಸೇವೆ. ಇದಕ್ಕೇನು ಬೆಲೆ ಕಟ್ಟಲಾದೀತೆ? ಅಯ್ಯೋ ಯಾರ ಮಕ್ಕಳೋ ಏನೋ? ಈ ಸೃಷ್ಟಿಕರ್ತ ಎಲ್ಲರನ್ನೂ ಕಾಪಾಡಲಿ ಎಂದು ಮನಸು ಆರ್ತವಾಗಿ ರೋಧಿಸುತ್ತ ಬೇಡಿಕೊಂಡಿತು.

ಯುಸ್ ಎಂಡ್ ಥ್ರೊ ಪ್ಲೇಟ್, ಲೋಟಗಳಲ್ಲಿ ಆಹಾರ ಬರುತ್ತಿತ್ತು.ರೋಬೋಟ್ ವೇಷಧಾರಿಯನ್ನು ಮಾತನಾಡಿಸಲು ಮನಸ್ಸಾಗಲಿಲ್ಲ. ಎಲ್ಲಿ ನನ್ನ ರೋಗ ಇನ್ನೊಬ್ಬರಿಗೆ ತಗಲುವುದೋ ಎನ್ನುವ ಭಯ.ಈ ವೈರಾಣು ನನ್ನಲ್ಲೇ ಸತ್ತು ಹೋಗಲಿ.ಬೇರೆಯವರಿಗೆ ಕೊಡುವುದು ಬೇಡ. ಪತಿ, ಮಕ್ಕಳು ವಿಡಿಯೋ ಕಾಲ್ ಮಾಡಿ ವಿಚಾರಿಸುತ್ತಿದ್ದರು. ನಿಧಾನಕೆ ಚೇತರಿಸಿಕೊಂಡೆ. ಹತ್ತು, ಹನ್ನೊಂದು, ಹನ್ನೆರಡು ದಿನ ಎಂದು ಎಣಿಸುವಾಗ ಔಟ್ ಆಫ್ ಡೇಂಜರ್ ಎನ್ನುವ ಸಿಹಿ ಸುದ್ದಿ. ಮನಸು ಹುಚ್ಚೆದ್ದು ಕುಣಿಯುವಂತಾಯಿತು. ಹುಸಿ ಭರವಸೆಯಿಂದ ಭರವಸೆಯೆಡೆಗೆ ಸಾಗಿದಾಗ ಬದುಕಿನ ಅಸಲಿಯತ್ತು ಅರ್ಥವಾಗಿತ್ತು.

ಹದಿಮೂರು, ಹದಿನಾಲ್ಕು ಎಣಿಸುತ್ತ ಐಸೋಲೇಶನ್ ದಿನಗಳು ಭರ್ತಿಯಾಗಿದ್ದವು. ಪಾಸಿಟಿವ್ ನಿಂದ ನೆಗೆಟಿವ್ ಆಗಿ ಪರಿವರ್ತನೆಗೊಂಡಿದ್ದೆ.ಈ ವಿಷಯ ಮರುಜನ್ಮದಷ್ಟು ಸಂತಸ ತಂದಿತು.ಮನೆಯವರೆಲ್ಲಾ ವಿಡಿಯೊ ಕಾಲ್ ನಲ್ಲಿ ಸಂಭ್ರಮಿಸಿದರು. ನಾನಿನ್ನು ಪಂಜರದ ಪಕ್ಷಿಯೇ ಆಗಿದ್ದೆ. ನಾಲ್ಕು ಗೋಡೆಯ ಮಧ್ಯದಿಂದ ಬಿಡುಗಡೆ ಹೊಂದಲು ಕಾತುರಳಾಗಿದ್ದೆ.

ಮರುದಿನ ಬಿಡುಗಡೆಯೂ ಆಯಿತು.ರೂಮೆಲ್ಲಾ ಸ್ಯಾನಿಟೈಸ್ ಮಾಡಿದರು.ನಾನೂ ಶವರ್ ಅಡಿಯಲ್ಲಿ ನಿಂತು ಗಂಗೆ, ಯಮುನೆಯರಿಂದ ಪಾವನಳಾದ ಭ್ರಮೆ.ಇಡೀ ಜಗತ್ತನ್ನೇ ಆವರಿಸಿದ ಪುಟ್ಟ ಕ್ರಿಮಿ ದೂರಾಗಿ ಹೋಗಲೆಂದು ಮೈ ತೊಳೆದು ಕೊಡವಿಕೊಂಡೆ. ಮಕ್ಕಳೆಲ್ಲರೂ ಬಂದು ಅಪ್ಪಿಕೊಂಡು ಮುದ್ದಾಡಿದರು. ಅದೆಷ್ಟೋ ಯುಗಗಳ ನಂತರ ಭೇಟಿಯಾದ ಅನುಭವ. ಇದೀಗ ನಿರಾಳವಾದಂತೆ ನಿಟ್ಟುಸಿರು ಬಿಟ್ಟರು.

ಆಗ ನಾ ಕೇಳಿದೆ.’ನನ್ನನ್ನು ದಿನಾ ನೋಡಿಕೊಳ್ಳುತ್ತಿದ್ದ ಆ ರೋಬೋಟ್ ಈಗ ಹೇಗಿದ್ದಾರೆ?ಅವರಿಗೊಂದು ಥ್ಯಾಂಕ್ಸ್ ಹೇಳಬೇಕು.ನನ್ನಿಂದ ಆ ಪುಣ್ಯಾತ್ಮರಿಗೆ ಏನೂ ಆಗದಿದ್ದರೆ ಸಾಕು.ಅವರ ಹೆಸರೇನು?’

ನನ್ನ ಮುಗ್ದ ಪ್ರಶ್ನೆಗೆ ಮನೆಯವರೆಲ್ಲಾ ಕಕ್ಕಾಬಿಕ್ಕಿಯಾದರು.’ಯಾಕೆ ನಾನೇನಾದರು ತಪ್ಪು ಕೇಳಿದೆನಾ?’ನನ್ನನ್ನು ನಾನು ಸರಿಪರಿಡಿಸಿಕೊಳ್ಳುವ ಇರಾದೆಯಿಂದ ಮತ್ತೆ ಕೇಳಿದೆ. ಆಗ ಮಗ, ‘ಅಮ್ಮ ಅವಳು ನಿನ್ನ ಡಾಕ್ಟರ್ ಮಗಳು.ಯಾವ ರೋಬೋಟ್ ಅಲ್ಲ ಏನೂ ಅಲ್ಲ’. ಒಂದು ಕ್ಷಣ ತೆರೆದ ಬಾಯಿ ಮುಚ್ಚಲೇ ಇಲ್ಲ. ಇಷ್ಟು ದಿನ ಆರೈಕೆ ಮಾಡಿದವಳು ಮಗಳು! ನನ್ನ ಕರುಳ ಕುಡಿ.ಮನಸು, ಹೃದಯ ತುಂಬಿ ತುಂಬಿ ಬಂತು.ಹೆತ್ತು, ಹೊತ್ತು, ಸಾಕಿ, ಸಲಹಿದ ರುಣ ಹರಿದು ಹೋಗಿತ್ತು.ಅವಳೇ ಇಡೀ ಮನೆಯನ್ನು ನಿಭಾಯಿಸಿದ್ದಳು.ಅಡಿಗೆ, ಊಟ, ಔಷದೋಪಚಾರ ಎಲ್ಲವೂ ಅವಳೇ.

ಊರ ತುಂಬ ಪ್ರಕ್ಷುಬ್ಧ ವಾತಾವರಣದಲ್ಲಿ ಎಲ್ಲಿ ಅಲೆಯುವುದೆಂದು, ಅದೇ ತಾನೇ ಮೆಡಿಕಲ್ ಮುಗಿಸಿದ ಮಗಳು ತನ್ನ ವೃತ್ತಿ ಸೇವೆಯನ್ನು ತನ್ನ ‘ಅವ್ವ’ನ ಮೇಲೇ ಶುರು ಮಾಡಿದ್ದಳು. ಡೆತ್ ಬೆಡ್ ಮೇಲೆ ಮಲಗಿದ್ದಾಗ, ಸ್ಪರ್ಶಿಸುತ್ತಿದ್ದ ಪುಟ್ಟ ಕೈಗಳು, ಶುಶ್ರೂಷೆ ಮಾಡಿದ ಜೀವ, ನಾ ಹೆತ್ತ ಕೂಸು! ಆ ಕೂಸೇ ನನಗೆ ಪುನರ್ ಜನ್ಮ ನೀಡಿತು!

ಕರುಳ ಕುಡಿಯ ಜೋಗುಳದಲಿ ಮರಳಿ ಬದುಕಿ ಬಂದೆ.

‘ಸಿಕಾ’, ಕಲಬುರಗಿ

 

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮ ಮಾರಾಟ: ನಾಲ್ವರ ಬಂಧನ

ಗದಗ: ಈಗಾಗಲೇ ರಾಜ್ಯದಲ್ಲಿ ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಮದ್ಯೆ ಗದಗನಲ್ಲಿ ಕಾಳಸಂತೆಯಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಡವನ್ನು ಗದಗ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.

ಕೊರೋನಾ : ನಗರ ಪ್ರದೇಶಗಳ ಆತಂಕ

ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ. ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ…

ಮುಳಗುಂದದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ತಾಡಪತ್ರಿ ಕಳ್ಳತನ.

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯ್ತಿಯ ಘನತ್ಯಾಜ್ಯ ವೈಜ್ಞಾನಿಕ ನಿರ್ವಹಣೆಗಾಗಿ ಅಳವಡಿಸಿದ್ದ ಎಚ್.ಟಿ.ಪಿ ತಾಡಪತ್ರಿ ಒಂದು ಭಾಗದಲ್ಲಿ ಕತ್ತರಿಸಿ ಕಳ್ಳತನ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಗದಗ ಜಿಲ್ಲಾಡಳಿತಕ್ಕೆ 40 ಲಕ್ಷ ವೈದ್ಯಕೀಯ ಸಾಮಾಗ್ರಿ ನೆರವು ನೀಡಿದ ಐಪಿಎಸ್ ಅಧಿಕಾರಿ ಸಜ್ಜನ್.

ಗದಗ: ಮೂಲತಃ ಗದಗ ಜಿಲ್ಲೆಯವರಾದ ತೆಲಂಗಾಣ ರಾಜ್ಯದ ಸೈಬರ್ ಪೋಲಿಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಅಂದಾಜು 40 ಲಕ್ಷ ಮೌಲ್ಯದ ವೈಧ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ನೆರವು ನೀಡಿದ್ದಾರೆ.