ಗಜೇಂದ್ರಗಡ: ವಿದ್ಯಾರ್ಥಿಗಳು ಜೀವನದಲ್ಲಿ ಒತ್ತಡ ನಿರ್ವಹಿಸುವ ಕಲೆ ರೂಢಿಸಿಕೊಳ್ಳಬೇಕು. ಕೇವಲ ಪರೀಕ್ಷೆಯಲ್ಲಿ ಪಾಸಾದರೆ ಸಾಲದು, ಜೀವನದ ಪರೀಕ್ಷೆಯಲ್ಲಿ ಯಶಸ್ಸು ಕಾಣಬೇಕು ಎಂದು ಪ್ರಾಚಾರ್ಯ ಎಸ್.ಎಸ್.ಕೆಂಚನಗೌಡರ ಹೇಳಿದರು.
ಪಟ್ಟಣದ ಬಿ.ಎಸ್.ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ವಿದ್ಯಾಲಯದ ಐಕ್ಯೂಎಸಿ ಮತ್ತು ಉದ್ಯೋಗ ಮಾಹಿತಿ ಘಟಕ ಹಾಗೂ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಜೀವನ ಕೌಶಲ್ಯ ಮತ್ತು ಅರಿವು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಉದ್ಯೋಗ ಮಾಹಿತಿ ಘಟಕ ಸಂಚಾಲಕ ಮಹೇಂದ್ರ. ಜಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕಿಂತ ಹೆಚ್ಚಾಗಿ ಜೀವನದ ಕೌಶಲ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಬದುಕುವ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಗಳಾಗಳು ಸಾಧ್ಯ. ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಗೂ ಸಮಸ್ಯೆ, ಒತ್ತಡಗಳು ಇರುತ್ತವೆ. ಪ್ರತಿಯೊಂದು ಸಮಸ್ಯೆಗಳಿಗೂ ತನ್ನದೇ ಆದ ವ್ಯಾಪ್ತಿಯಿರುತ್ತದೆ. ಆ ವ್ಯಾಪ್ತಿ ಅಡಿಯಲ್ಲಿ ನಾವು ಸಮಸ್ಯೆ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಯುವ ಸ್ಪಂದನ ಕೇಂದ್ರ ತರಬೇತಿ ಅಧಿಕಾರಿ ಚೇತನ್, ಡಾ.ಪಿ.ಎಚ್.ಕ್ಯಾರಕೊಪ್ಪ, ಲಕ್ಷ್ಮಿ ಪಿ, ಲಕ್ಕಣ್ಣ ಈ.ಎನ್, ಸರಸ್ವತಿ ಕೆ, ಡಾ.ಕರುಣೇಶ್‌ಕುಮಾರ್ ಕೆ, ಹಿತೇಶ್ ಬಿ, ಸಿದ್ದೇಶ ಕೆ, ರೂಪ ಟಿ.ಪಿ, ಮಹಾಂತೇಶ ಜೀವಣ್ಣವರ, ಆರ್.ವಿ.ಸುಂಕದ, ಬಿ.ವಿ.ಮನವಳ್ಳಿ ಇದ್ದರು.