ಮಸ್ಕಿ: ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ ವೇಳೆ ಹಗ್ಗ ತುಂಡಾಗಿ ವ್ಯಕ್ತಿಯೋರ್ವ ಹಳ್ಳದಲ್ಲಿ ಕೊಚ್ಚಿಹೋದ ಘಟನೆ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ನಡೆದಿದೆ.
ಪಟ್ಟಣದ ಹಿರೇಹಳ್ಳದ ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ ವೇಳೆಯಲ್ಲಿ ಹಗ್ಗ ತುಂಡಾಗಿದೆ. ಭಾರಿ ಮಳೆಯಿಂದಾಗಿ ಮಸ್ಕಿ ಜಲಾಶಯ ಭರ್ತಿ ಆಗಿದೆ. ಹೀಗಾಗಿ ಜಲಾಶಯದ ನೀರು ಹಳ್ಳಕ್ಕೆ ಬಿಡಲಾಗಿತ್ತು. ಬೆಳಗಿನ ವೇಳೆ ಶೌಚಕ್ಕೆ ತೆರಳಿದ ಯುವಕರು ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿದ್ದರು.
ರಕ್ಷಣೆ ಮಾಡಲು ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಹಗ್ಗದ ಗುಣಮಟ್ಟ ಪರಿಶೀಲಿಸದೇ, ಹಾಗೂ ಯುವಕನಿಗೆ ರಕ್ಷಾ ಕವಚ ಹಾಕದೇ ರಕ್ಷಣೆ ಮಾಡಲು ಹೋಗಿದ್ದರು. ಇದ್ರಿಂದ ನೀರಿನಲ್ಲಿ ಹಗ್ಗ ತುಂಡಾಗಿ ಯುವಕ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ನಡೆಯಿತು. ಅಗ್ನಿ ಶಾಮಕ ಸಿಬ್ಬಂದಿ ರಕ್ಷಾ ಕವಚ ಹಾಕಿರುವುದರಿಂದ ಗಿಡಗಂಟಿ ಹಿಡಿದುಕೊಂಡು ಜೀವ ಉಳಿಸಿಕೊಂಡರು.
ಆದರೆ ಯುವಕ ಚನ್ನಬಸವ ಮಾತ್ರ ನೀರಿನಲ್ಲಿ ಕೊಚ್ಚಿ ಹೋದ್ದಾನೆ. ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿದ ಇನ್ನೊಬ್ಬ ಯುವಕನನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಿ ಪ್ರಾಣ ಉಳಿಸಲಾಯಿತು. ಹಳ್ಳದ ಸಮೀಪ ಸಾವಿರಾರು ಜನ ಸೇರಿದ್ದರು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಕೊಚ್ಚಿ ಹೋದ ಯುವಕನನ್ನು ಹುಡುಕಲು ತಾಲೂಕ ಆಡಳಿತ ಶೋಧ ನಡೆಸಿದೆ.
ಕಾರ್ಯಾಚರಣೆ ವೇಳೆಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್ ಐ ಸಣ್ಣ ಈರೇಶ ಇದ್ದರು. ಸುದ್ದಿ ತಿಳಿದ ಕೂಡಲೇ ಲಿಂಗಸ್ಗೂರಿನ ಸಾಹಾಯಕ ಆಯುಕ್ತ ರಾಜಶೇಖರ ಡಂಬಳ ಸ್ಥಳಕ್ಕೆ ಭೇಟಿ ನೀಡಿದರು.