ಮುಂಡರಗಿ: ಪಶ್ಚಿಮ ಬಂಗಾಳ ರಾಜ್ಯವು ಗೂಂಡಾ ರಾಜ್ಯವಾಗಿ ಪರಿವರ್ತನೆಯಾಗಬಹುದು ಎಂಬ ದೃಷ್ಟಿಯಿಂದ ಹೌರಾ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ತೇಜಸ್ವಿ ಸೂರ್ಯ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಪವನ್ ಮೇಟಿ ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡಿಸಿ ನಬನ್ನಾ ಚಲೋ ಜಾಥಾ ವೇಳೆ ಬಾಂಬ್ ಗಳನ್ನು ಎಸೆದಿರುವ ಪ್ರಕರಣ ಖಂಡಿಸಿ ಪತ್ರಿಕಾ ಪ್ರಕಟಣೆ ನೀಡಿ ಘಟನೆಯನ್ನು ಖಂಡಿಸಿದ್ದಾರೆ.
ಪಶ್ಚಿಮ ಬಂಗಾಳದ ಟಿಎಂಸಿ ಕಾರ್ಯಕರ್ತರು ಈ ಮೆರವಣಿಗೆಯ ಮೇಲೆ ದೇಶಿಯ ಬಾಂಬುಗಳನ್ನು ಎಸೆಯುವುದರ ಮೂಲಕ ಅಲ್ಲಿನ ಸರಕಾರ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಕಾನೂನುಗಳನ್ನು ಮಮತಾ ಬ್ಯಾನರ್ಜಿ ಸರ್ಕಾರವು ಹಾಡಹಗಲೇ ಕೊಲೆ ಮಾಡಿದೆ. ಈ ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕವಾಗಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಕೂಡ ಇದೆ. ಈ ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವಂತಹ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದ್ದಂತಹ ಶಾಂತಿಯುತ ಪ್ರತಿಭಟನೆ ಹತ್ತಿಕ್ಕಲು ನಡೆದ ಘಟನೆ ಇದಾಗಿದೆ ಎಂದು ಆರೋಪಿಸಿದರು.
ಈ ಘಟನೆಗೆ ಮಮತಾ ಬ್ಯಾನರ್ಜಿ ಅವರೇ ನೇರ ಕಾರಣವಾಗಿದ್ದು ಈ ಕೃತ್ಯ ಖಂಡನೀಯ ಎಂದು ಪವನ್ ವಿರೋಧ ವ್ಯಕ್ತ ಪಡಿಸಿದರು.