ಗದಗ: ದಯಾಮರಣ ಕೋರಿ ಮಾಜಿ ಸೈನಿಕ ಹಾಗೂ ಕುಟುಂಬಸ್ಥರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದ ಮಾಜಿ ಸೈನಿಕ ಈರಣ್ಣ ಅಣ್ಣಿಗೇರಿ ತಮಗೆ ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಬಂದಿರುತ್ತೇನೆ. ಆದರೆ ಗ್ರಾಮದಲ್ಲಿ ನನಗೆ ವಾಸಿಸಲಿಕ್ಕೆ ಸ್ವಂತ ಮನೆ ಇಲ್ಲದ ಕಾರಣ ಲಕ್ಷ್ಮೇಶ್ವರದ ಈಶ್ವರ ನಗರದಲ್ಲಿ ನಾನು ಸೇವೆ ಸಲ್ಲಿಸುತ್ತಿರುವಾಗಲೇ ನಿವೇಶನವನ್ನು ಖರೀದಿಸಿದ್ದೆ. ಆದರೆ ಇದೀಗ ನಿವೃತ್ತಿ ನಂತರ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸೇನೆ ಸೇರುವ ಬಗ್ಗೆ ಉಚಿತ ತರಬೇತಿ ನೀಡುವ ಉದ್ದೇಶದಿಂದ ತರಬೇತಿ ಕೇಂದ್ರ ತೆರೆಯಬೇಕು ಎಂದಿಕೊಂಡಿದ್ದೇನೆ. ಖರೀದಿಸಿರುವ ನಿವೇಶನದಲ್ಲಿಯೇ ತರಬೇತಿ ಕೇಂದ್ರ ತೆರೆದು ಗ್ರಾಮೀಣ ಭಾಗದ ಯುವಕರಿಗೆ ತರಬೇತಿ ನೀಡಬೇಕು ಎನ್ನುವುದು ನನ್ನ ಬಯಕೆ. ಜೊತೆಗೆ ಮಕ್ಕಳ ಶಿಕ್ಷಣಕ್ಕಾಗಿ ಮನೆ ಕಟ್ಟಬೇಕು ಎನ್ನುವ ಕಾರಣದಿಂದ ಕಟ್ಟಡ ನಿರ್ಮಾಣ ಆರಂಭಿಸಿದ್ದೇನೆ. ಆದರೆ ಈ ಕಾಮಗಾರಿ ತಡೆಯಲು ಜಿಲ್ಲಾಧಿಕಾರಿಗಳಿಗೆ ಹಾಗೂ ಯೋಜನಾ ನಿರ್ದೇಶಕರಿಗೆ ದುರುದ್ದೇಶದಿಂದ ಸಾರ್ವಜನಿಕರ ಹೆಸರಿನಲ್ಲಿ ಸುಳ್ಳು ದೂರು ನೀಡಲಾಗಿದೆ.
ಲಕ್ಷ್ಮೇಶ್ವರ ಪಟ್ಟಣದ ಗಂಗಾಧರ್, ಸೋಮಪ್ಪ ಹಾಗೂ ಮಂಜುನಾಥ ಇವರು ಸಾರ್ವಜನಿಕರ ಹೆಸರಲ್ಲಿ ಸುಳ್ಳು ದೂರು ನೀಡಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತಡೆಯುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನು ನಗರದಲ್ಲಿರುವ ನನ್ನ ಬಾಡಿಗೆ ಮನೆಗೆ ಗೂಂಡಾಗಳನ್ನು ಕಳುಹಿಸಿ ಮಾನಸಿಕವಾಗಿ ಕಿರುಕುಳ ನೀಡುವ ಜೊತೆಗೆ ಜೀವಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ನನಗೆ ಹಾಗೂ ನನ್ನ ವೃದ್ಧ ತಾಯಿ, ಹೆಂಡತಿ, ಮಕ್ಕಳಿಗೆ, ನನ್ನ ಸಹೋದರರ ಕುಟುಂಬದವರಿಗೆ ಜೀವರಕ್ಷಣೆ ಕೊಡಬೇಕು. ಹಾಗೂ ಮನವಿ ಸಲ್ಲಿಸಿದ ಹತ್ತು ದಿನಗಳೊಳಗೆ ನಗರದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಗೆ ಪರವಾನಿಗೆ ನೀಡಬೇಕು. ಇಲ್ಲವಾದಲ್ಲಿ ನಮಗೆ ಕುಟುಂಬ ಸಮೇತರಾಗಿ ದಯಾಮರಣ ಹೊಂದಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕುಟುಂಬಸ್ಥರಾದ ಕವಿತಾ ಅಣ್ಣಿಗೇರಿ, ಪ್ರಕೃತಿ, ಪ್ರಣಿತಾ, ಶಿವಲಿಂಗಪ್ಪ, ಶೋಭಾ, ಶಿವಯೋಗೀಶ, ಆದಿತ್ಯ ಮನವಿ ಸಲ್ಲಿಸುವ ವೇಳೆ ಪಾಲ್ಗೊಂಡಿದ್ದರು.