ನಿಂಬೆರಸ, ಅರಿಶಿಣ ಪುಡಿ, ಮೆಣಸು ಯಾವುದೂ ಪರಿಹಾರವಲ್ಲ
ಗದಗ: ಮತ್ತೆಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ತಡೆ ಮತ್ತು ನಿವಾರಣೆಗೆ ನಿಂಬೆರಸ, ಅರಿಶಿಣ, ಮೆಣಸು, ಬೆಲ್ಲ ಮತ್ತು ಶುಂಠಿ ಪರಿಹಾರ ಎಂಬ ಸಂದೇಶ ವಿವಿಧ ರೂಪದಲ್ಲಿ ಹರಿದಾಡುತ್ತಿದೆ. ಎರಡು ದಿನದ ಹಿಂದೆ, ಮುಂಬೈನ ನಾನಾವತಿ ಕೋವಿಡ್ ಆಸ್ಪತ್ರೆಯ ವೈದ್ಯರು ಕೋವಿಡ್ ರೋಗಿಗಳಿಗೆ ನಿಂಬೆರಸ, ಅರಿಶಿಣ ಪುಡಿ, ಶುಂಠಿ ಸೇವೆನೆಯನ್ನು ನೀಡುತ್ತಿದ್ದಾರೆ ಮತ್ತು ಅದನ್ನು ಶಿಫಾರಸು ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ನಾನಾವತಿ ಆಸ್ಪತ್ರೆಯವರು ಇದನ್ನು ಅಲ್ಲಗಳೆದು ಪ್ರಕಟಣೆ ನೀಡಿದ ಮೇಲೂ ಆ ಸಂದೇಶ ವೈರಲ್ ಆಗುತ್ತಲೇ ಇರುವುದರಿಂದ ಈ ಮಿಥ್ಯವನ್ನು ನಿವಾರಿಸಲು ಕೆಲವು ವೈಜ್ಞಾನಿಕ ಸತ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಅಲ್ಟ್ ನ್ಯೂಸ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ಒ) ಮಾರ್ಚ್ ತಿಂಗಳಿನಿಂದಲೂ ಇಂತಹ ಮಿಥ್ಯಗಳನ್ನು ಹೊಡೆದು ಹಾಕಿ, ಸತ್ಯವನ್ನು ಪ್ರತಿಪಾದಿಸುತ್ತ ಬಂದಿವೆ. ಕೆಲವು ಆಯುರ್ವೇದ ವೈದ್ಯರು ಕೂಡ ಮೇಲಿನಂತಹ ಶಿಫಾರಸುಗಳನ್ನು ಮಾಡಿದ ಪರಿಣಾಮ ಜನರಲ್ಲಿ ಗೊಂದಲಗಳು ಉಂಟಾಗುತ್ತಿವೆ.
ಮೊದಲಿಗೆ, ನಿಂಬೆರಸ, ಅರಿಶಿಣ, ಬೆಲ್ಲ, ಮೆಣಸು, ಶುಂಠಿ ದೇಹಕ್ಕೆ ಅಗತ್ಯ ವಸ್ತುಗಳೇ. ಇವುಗಳಿಂದ ಕೆಲವು ಸೋಂಕು ಮತ್ತು ಅಸ್ವಸ್ಥತೆ ತಡೆಯುವ ರೋಗ ನಿರೋಧಕ ಶಕ್ತಿ ಲಭಿಸುತ್ತದೆ. ಆದರೆ ಕೋವಿಡ್ ರೋಗಕ್ಕೆ ಇವು ಯಾವ ರೀತಿಯಿಂದಲೂ ಪ್ರತಿರೋಧ ಉಂಟು ಮಾಡಲಾರವು ಎಂಬುದು ವೈಜ್ಞಾನಿಕ, ವೈದ್ಯಕೀಯ ಸತ್ಯ.
ನಿಂಬೆರಸ ವಿಟಾಮಿನ್ ‘ಸಿ’ ಹೊಂದಿದ್ದು , ಪಚನಶಕ್ತಿ ವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ಒಂದು ಮಟ್ಟಿಗಿನ ರೋಗ ಪ್ರತಿರೋಧಕ ಶಕ್ತಿ ನೀಡುತ್ತದಾದರೂ, ಅದರಿಂದ ಕೋವಿಡ್ ತಡೆಯಲು ಅಥವಾ ಉಪಶಮನ ಮಾಡಲು ಆಗುತ್ತದೆ ಎಂಬುದಕ್ಕೆ ಯಾವುದೇ ವೈದ್ಯಕೀಯ ಆಧಾರಗಳಿಲ್ಲ. ನಿಂಬೆರಸ ಕ್ಯಾನ್ಸರ್ ರೋಗಕ್ಕೂ ಮದ್ದು ಎನ್ನುವುದಕ್ಕೆ, ಅದು ರಕ್ತದೊತ್ತಡ ನಿಯಂತ್ರಿಸುತ್ತದೆ ಮತ್ತು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ ಎಂಬುದಕ್ಕೂ ಯಾವುದೇ ಆಧಾರಗಳಿಲ್ಲ.
ಅರಶಿಣ ಮಿಶ್ರಿತ ಬಿಸಿನೀರು ಕುಡಿಯುವುದರಿಂದ ಗಂಟಲಲ್ಲಿರುವ ಕೊರೋನಾ ವೈರಸ್ ಜಠರ ತಲುಪಿ ಅಲ್ಲಿ ನಾಶವಾಗುತ್ತದೆ ಎಂಬುದು ಮಿಥ್ಯವೇ. ಅದು ಶ್ವಾಸಕೋಶ ತಲುಪುವ ಮಾರ್ಗವೇ ಬೇರೆ, ನಡುವೆ ಬೇರೆಲ್ಲೂ ಅದು ಶೇಖರಣಗೊಳ್ಳವುದಿಲ್ಲ. ( ಚಿತ್ರವನ್ನು ನೋಡಿ)

ಮೆಣಸು, ಬೆಳ್ಳುಳ್ಳಿ ಕೂಡ ಮದ್ದಲ್ಲ
ಮೆಣಸು ಅಥವಾ ಬೆಳ್ಳುಳ್ಳಿ ಕೂಡ ಕೋವಿಡ್ ತಡೆಯಲಾರವು ಮತ್ತು ಕೋವಿಡ್ ಚಿಕಿತ್ಸೆಗೆ ನೆರವಾಗಲಾರವು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಸ್ಪಷ್ಟಪಡಿಸಿದೆ.
ಸದ್ಯಕ್ಕೆ ಯಾವುದೇ ಲಸಿಕೆ, ಔಷಧವಿಲ್ಲ
ಕೋವಿಡ್ ಮಹಾರೋಗವಲ್ಲ, ಅದು ಮಹಾಮಾರಿಯೂ ಅಲ್ಲ. ಸೋಂಕಿತರ ಪೈಕಿ ವಯಸ್ಸಾದವರು, ಇತರ ರೋಗಗಳಿದ್ದವರು ಸೇರಿ ಶೇ. 2ರಷ್ಟು ಜನ ಮಾತ್ರ ಮೃತರಾಗಿದ್ದಾರೆ. ಶೇ. 98ರಷ್ಟು ಜನರು ಗುಣಮುಖರಾಗಿದ್ದಾರೆ.
ಇತರರಿಂದ ಕನಿಷ್ಟ 1 ಮೀ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈ ತೊಳೆಯುವುದು, ಮಾಸ್ಕ್ ಧರಿಸುವುದು- ಇವಿಷ್ಟನ್ನು ಮಾಡಿದರೆ ಸಾಕು.
ಕೋವಿಡ್ ಕಾಲವಿರಲಿ ಅಥವಾ ಯಾವುದೇ ಸಂದರ್ಭವಿರಲಿ, ಸಹಜ ಆರೋಗ್ಯಕ್ಕೆ, ಎಲ್ಲ ಪೌಷ್ಟಿಕಾಂಶಗಳಿರುವ ಊಟ, ಹೆಚ್ಚು ಪ್ರಮಾಣದಲ್ಲಿ ನೀರು, ಒಳ್ಳೆ ನಿದ್ದೆ ಮತ್ತು ಒಂದಿಷ್ಟು ವ್ಯಾಯಾಮವನ್ನು ಮಾಡಬೇಕು.
ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ: ಕೋವಿಡ್ ರೋಗ ತಡೆಯಲು ಅಥವಾ ಶಮನ ಮಾಡಲು ಸದ್ಯಕ್ಕೆ ಯಾವುದೇ ಔಷಧಿ/ಲಸಿಕೆ ಇನ್ನೂ ಸಿದ್ಧವಾಗಿಲ್ಲ. ಅದಕ್ಕೆ ಯಾವ ಮನೆಮದ್ದೂ ಪರಿಹಾರವಲ್ಲ. ಮನೆಮದ್ದು ಪರಿಹಾರ ಎಂಬ ಸಂದೇಶ ನಂಬದಿರಿ. ಸಮಸ್ಯೆಯಾದಾಗ ತಜ್ಞ ವೈದ್ಯರನ್ನು ಸಂಪರ್ಕಿಸಿ.