ಕಳೆದ ಭಾನುವಾರ ಮತ್ತು ಸೋಮವಾರ ಕೋರೊನಾ ಲಸಿಕೆ ಕುರಿತಂತೆ ಫೇಕ್ ಸುದ್ದಿಯನ್ನು ನಂಬಿದ ದೈತ್ಯ ಮೀಡಿಯಾ ಕಂಪನಿಗಳು ಎಡವಟ್ಟು ಮಾಡಿಕೊಂಡವು. ಆದರೆ ಉತ್ತರಪ್ರಭ ಸತ್ಯ ಪ್ರಕಟಿಸಿತ್ತು. ಈಗ ಅದನ್ನೇ ದೇಶದ ಮುಂಚೂಣಿ ಫ್ಯಾಕ್ಟ್ ಚೆಕ್ ಕಂಪನಿ ಅಲ್ಟ್ ನ್ಯೂಸ್ ಹೇಳಿದೆ.
ಗದಗ: ‘ನಾವು ಅವಸರಕ್ಕೆ ಬೀಳುವುದಿಲ್ಲ, ಹಾಗಂತ ತೀರಾ ಲೇಟೂ ಆಗುವುದಿಲ್ಲ. ಸತ್ಯ ನಮ್ಮ ಮೊದಲ ಆದ್ಯತೆ’ ಎಂದು ‘ಉತ್ತರಪ್ರಭ’ ಟೀಮ್ ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದಿದೆ.
ಕಳೆದ ಸೋಮವಾರ ರಷ್ಯಾ ಲಸಿಕೆ ಸುದ್ದಿ ನಮ್ಮ ತಂಡದ ಒಬ್ಬರ ವ್ಯಾಟ್ಸಾಪ್ಗೆ ಬಂದಾಗ, ನಾವು ಕೂಡಲೇ ಪ್ರಕಟ ಮಾಡಲಿಲ್ಲ. ಮಾನವರ ಮೇಲಿನ ಮೊದಲ ಕೋರೊನಾ ಲಸಿಕೆ ಎಂದೆಲ್ಲ ಓದಿದ ನಂತರ ನಮಗೆ ಇದ್ಯಾಕೋ ಸಂಪೂರ್ಣ ಸತ್ಯವಲ್ಲ ಎನಿಸಿತು.

ನಾವು ನಮ್ಮ ಸೀಮಿತ ಸಂಪನ್ಮೂಲದಲ್ಲಿ ಹುಡುಕಾಟ ನಡೆಸಿದಾಗ, ರಷ್ಯಾದ ತಾಸ್ (TASS) ಸುದ್ದಿ ಸಂಸ್ಥೆ ಈ ಪ್ರಯೋಗದ ಮೇಲೆ ನಿರಂತರವಾಗಿ ವರದಿ ಮಾಡಿದ್ದು ಗಮನಕ್ಕೆ ಬಂತು. ಕೂಡಲೇ ನಾವು, ರಷ್ಯಾ ಲಸಿಕೆ ಬರಲು ಸಾಕಷ್ಟು ಸಮಯ ಬೇಕು ಎಂಬ ವರದಿ ಮಾಡಿದೆವು. ಇದಿನ್ನೂ ಮೊದಲ ಹಂತವನ್ನೇ ಮುಗಿಸಿಲ್ಲ ಎಂದೂ ಬರೆದೆವು. ಅದೀಗ ಸತ್ಯವಾಗಿದೆ.
ಈ ವಿಷಯವಾಗಿ ಫ್ಯಾಕ್ಟ್ ಚೆಕಿಂಗ್ ಸಂಸ್ಥೆ ಅಲ್ಟ್ ನ್ಯೂಸ್ ನಡೆಸಿದ ಹುಡುಕಾಟ ಕೂಡ ನಮ್ಮ ನಿಲುವನ್ನೇ ಬೆಂಬಲಿಸಿದೆ. ಟೈಮ್ಸ್ ಆಫ್ ಇಂಡಿಯಾ, ಫೈನಾನ್ಸಿಯಲ್ ಎಕ್ಸ್ ಪ್ರೆಸ್, ದಿ ಪ್ರಿಂಟ್. ಇಂಡಿಯಾ ಟುಡೇ, ನ್ಯೂಸ್ 18, ಲೈವ್ ಮಿಂಟ್ ಸೇರಿದಂತೆ ದೇಶದ ಪ್ರತಿಷ್ಠಿತ 30ಕ್ಕೂ ಹೆಚ್ಚು ಮಾಧ್ಯಮಗಳು ‘ಆ ಅರೆಬರೆ ವ್ಯಾಟ್ಸಾಪ್’ ಸುದ್ದಿಯನ್ನೇ ಸತ್ಯ ಎಂಬಂತೆ ಪ್ರಕಟಿಸಿದವು. ಕನ್ನಡದ ವಿಶ್ವಾಸಾರ್ಹ ಪತ್ರಿಕೆ/ಪೋರ್ಟಲ್ಸ್ ಕೂಡ ಯಾಮಾರಿಬಿಟ್ಟವು. ಆದರೆ ಗದಗಿನಂತಹ ಪುಟ್ಟ ನಗರದ ಉತ್ತರಪ್ರಭ ಅವಸರ ಮಾಡದೇ ಸತ್ಯವನ್ನು ಬರೆದಿತ್ತು. ಅಲ್ಟ್ ನ್ಯೂಸ್ ಕೂಡ ನಾವು ಶೋಧಿಸಿದ ರೀತಿಯಲ್ಲೇ ಸತ್ಯ ಕಂಡು ಹಿಡಿದಿದೆ.
ನೆನಪಿರಲಿ, ಸ್ಪೀಡ್ ಮುಖ್ಯ, ಆದರೆ ಸತ್ಯವಿಲ್ಲದೇ ಇದ್ದಾಗ ಆ ಸ್ಪೀಡ್ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಉತ್ತರಪ್ರಭ ನಂಬಿದೆ. ನಾವೂ ಆಕಸ್ಮಾತ್ ತಪ್ಪು ಮಾಡಬಹುದು. ತಿದ್ದಲು ನೀವಿದ್ದೀರಲ್ಲ?
2 comments
Keep it uttaraprabha team, cogrates, even i had believed it
ನಿಮ್ಮ ತೀರ್ಮಾನ ಸ್ವಾಗತಾರ್ಹ