ಮಹಿಳೆ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡಿದ್ದಾಳೆ ಎಂದು ಏಕಾಏಕಿ ಹೇಳಬಾರದು. ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲೆಂದೇ ಸಂಪರ್ಕಿಸಿದಾಗ ಆ ವಿಳಾಸದಲ್ಲಿ ಅವರಿಲ್ಲ. ಸ್ವಲ್ಪ ಕಾಯುವ ತಾಳ್ಮೆ ಇರಲಿ.
ಗದಗ: ‘ಕ್ವಾರಂಟೈನ್ ಗೆ ನಿನ್ನೆ ಪಾಸಿಟಿವ್ ದೃಢಪಟ್ಟ ಮಹಿಳೆ ತಪ್ಪಿಸಿಕೊಂಡಿದ್ದಾಳೆ ಎನ್ನುವುದೇ ತಪ್ಪು. ಅವರನ್ನು ಕ್ವಾರಂಟೈನ್ ಒಳಪಡಿಸಲೆಂದೇ ಸಂಪರ್ಕಕ್ಕೆ ಯತ್ನಿಸಿದಾಗ ಆ ವಿಳಾಸದಲ್ಲಿ ಅವರು ಸಿಕ್ಕಿಲ್ಲ. ನಗರಸಭೆ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯವರು ಹುಡುಕುತ್ತಿದ್ದಾರೆ. ಸ್ವಲ್ಪ ಕಾಯೋಣ ಎಂದು ಡಿಸಿ ಸುಂದರೇಶ ಬಾಬು ಸ್ಪಷ್ಟಪಡಿಸಿದ್ದಾರೆ.

ವಾಲಂಟಿಯರ್ ಆಗಿ ನಮ್ಮವರು (ಆರೋಗ್ಯ ಇಲಾಖೆ) ಟೆಸ್ಟಿಂಗ್ ಮಾಡಲು ಕೆಲವು ಏರಿಯಾಗಳಲ್ಲಿ ಗಂಟಲುದ್ರವ ಸಂಗ್ರಹಿಸುತ್ತಾರೆ. ಆಗ ತೀವ್ರ ಲಕ್ಷಣ ಇದ್ದವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುತ್ತೇವೆ. ಲಕ್ಷಣಗಳೇ ಇಲ್ಲದ ಅಥವಾ ಸೌಮ್ಯ ಲಕ್ಷಣ ಇರುವವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಿ ಅವರ ವಿಳಾಸ ಪಡೆದಿರುತ್ತಾರೆ. ಇದು ಕೋವಿಡ್ ಮಾರ್ಗಸೂಚಿ ಕೂಡ ಎಂದು ಡಿಸಿ ಉತ್ತರಪ್ರಭಕ್ಕೆ ಸ್ಪಷ್ಟಪಡಿಸಿದರು.
ವಿಳಾಸ ತೆಗೆದುಕೊಳ್ಳುವಾಗ ಅವರು ತಮಗೇ ಅರಿವಿಲ್ಲದಂತೆ ತಪ್ಪಾಗಿ (ಕ್ರಾಸ್ ಅಥವಾ ಓಣಿ) ಕೊಟ್ಟಿರಬಹುದು ಅಥವಾ ನಮ್ಮವರೇ ತಪ್ಪಾಗಿ ನಮೂದಿಸಿರಬಹುದು. ತಮಗೆ ಪಾಸಿಟಿವ್ ಬರಲಿಕ್ಕಿಲ್ಲ ಎಂದು ಆ ಮಹಿಳೆ ಸಂಬಂಧಿಕರ ಮನೆಗೆ ಹೋಗಿರಬಹುದು. ಈಗ ನಾವು ಹುಡುಕದೇ ಅವರು ತಪ್ಪಸಿಕೊಂಡಿದ್ದಾರೆ ಎಂದುಬಿಟ್ಟರೆ, ಆ ಮಹಿಳೆ ಏನೂ ತಪ್ಪೇ ಮಾಡಿರದಿದ್ದರೆ ಅವರಿಗೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಅವರ ಮೇಲಾಗುವ ಸೈಕಾಲಜಿಕಲ್ ಪರಿಣಾಮ, ಒತ್ತಡವನ್ನು ಊಹಿಸಲು ಅಸಾಧ್ಯ. ಹೀಗಾಗಿ ಅವಸರಿಸುವುದು ಬೇಡ. ನಂತರ ತೀರ್ಮಾನಿಸೋಣ. ಹೇಗೂ ನಮ್ಮವರು ತೀವ್ರ ಶೋಧ ನಡೆಸುತ್ತಿದ್ದಾರಲ್ಲ ಎಂದು ಡಿಸಿ ಹೇಳಿದರು.