ಅದ್ಯಾಕೋ ಗೊತ್ತಿಲ್ಲ ನಾನು ಅವಳಿಗೆ ಫಿದಾ ಆಗಿಬಿಟ್ಟಿದ್ದೆ. ಕ್ಷಣವೂ ಬಿಟ್ಟಿರದಷ್ಟು ಗಾಢ ಪ್ರೀತಿ ಬೆಳೆದಿತ್ತು. ನಮ್ಮಿಬ್ಬರ ಪ್ರೀತಿಯ ಬೆಸುಗೆಗೆ ಮೂರು ವರ್ಷವಾಗಿತ್ತು. ನನ್ನ ಹೃದಯದ ಭಾಷೆ ಅವಳಿಗೆ ಗೊತ್ತು. ನನ್ನ ಪ್ರತಿ ಕೆಲಸಕ್ಕೂ ಆಕೆಯದೇ ಸಾಥ್. ನನ್ನ ವ್ಯವಹಾರಕ್ಕೆ ಆಕೆಯೇ ಸಂಪರ್ಕ ಸೇತು. ಆಕೆಯ ಜೊತೆ ಮನಬಿಚ್ಚಿ ಮಾತಾಡಿದ್ದು, ಹೃದಯದ ಗೂಡಲ್ಲಿ ಅದೆಷ್ಟೋ ನನ್ನ ಅನುಭವಗಳನ್ನು ಬಚ್ಚಿಟ್ಟಿದ್ದು ಬೆಲೆ ಕಟ್ಟಲೂ ಅಸಾಧ್ಯ. ಆಕೆಯೊಂದಿಗಿನ ಒಡನಾಟದ ಕ್ಷಣಗಳು ಮಾತ್ರ ನನ್ನ ಎದೆಯಾಂತರಾಳದಲ್ಲಿ ಹಚ್ಚ ಹಸಿರು. ನನ್ನ ಭಾವನೆಗಳೊಂದಿಗೆ ಬೆಸುಗೆ ಹಾಕಿದ ಆಕೆ ವರ್ತನೆ ಒಂದೊಂದು ಸಾರಿ ಕಿರಿಕಿರಿಯಾದರೂ, ಅದಲ್ಲೂ ಒಂದು ಥರಾ ಖುಷಿ. ನಮ್ಮಿಬ್ಬರ ಈ ಸಂಬಂಧ ನನ್ನಾಕೆಗೂ ಹೊಟ್ಟೆಕಿಚ್ಚಾಗಿತ್ತು. ಆದರೆ ಇದೀಗ ಆಕೆ ಏಕಾಏಕಿ ನನ್ನ ಕೈಬಿಟ್ಟು ಹೋಗಿದ್ದಾಳೆ. ಹೀಗಾಗಿ ನನಗರಿವಿಲ್ಲದೇ ನನ್ನನ್ನು ಆವರಿಸಿದವಳು ಬಿಟ್ಟು ಎಲ್ಲಿ ಹೋದಳು ಎನ್ನುವ ಹುಡುಕಾಟ ಹಾಗೂ ತಾಕಲಾಟದಲ್ಲಿ ನಾನಿದ್ದೇನೆ. ಅರೇ ಇದ್ಯಾವ ಪ್ರೇಮ್ ಕಹಾನಿ ಎನ್ನುವ ಕುತೂಹಲ ಸಹಜವಾಗಿಯೇ ಮೂಡಿರಬೇಕಲ್ಲ?

ಸಂಗಾತಿಯ ಸಾಂಗತ್ಯದ ಕಥೆ

ಇದು ನನ್ನ ಜೊತೆ ಮೂರು ವರ್ಷದಿಂದ ಸಖ್ಯ ಬೆಳೆಸಿ ನನ್ನಾಕೆಗೆ ಹೊಟ್ಟೆ ಕಿಚ್ಚು ತರಿಸಿದ ಸಂಗಾತಿಯ ಕಥೆ. ಇದೇನಪ್ಪಾ ನನ್ನಾಕೆ ಅಂತಾರೆ? ನನ್ನಾಕೆಗೆ ಹೊಟ್ಟೆ ಕಿಚ್ಚು ತರಿಸಿದಾಕೆ ಅಂತಾರೆ? ಸಂಗಾತಿ ಕೂಡ ಅಂತಾರೆ? ಹೀಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟುತ್ತಿರಬಹುದಲ್ಲವಾ? ಹೌದು, ಇಂದು ಪ್ರತಿಯೊಬ್ಬರ ಜೀವನದಲ್ಲಿ ಮನುಷ್ಯ ಸ್ನೇಹದಷ್ಟೆ ಮೊಬೈಲ್ ನೊಂದಿಗಿನ ಸಂಬಂಧವೂ ಹೆಚ್ಚಾಗುತ್ತಿದೆ. ಏಕಾಏಕಿ ಕೈಯಲ್ಲಿದ್ದ ಮೊಬೈಲ್ ಕಳೆದು ಹೋದಾಗ ಅದೆಷ್ಟೋ ಜನ ಎಷ್ಟು ಪರಿತಪಿಸಬಹುದು. ಮೊಬೈಲ್ ಕಳೆದುಕೊಂಡ ಪ್ರತಿಯೊಬ್ಬರಿಗೂ ಅದರ ಹಿಂದೆ ಇಂಥದ್ದೆ ಒಂದೊಂದು ಕಥೆ ಇದ್ದೆ ಇರುತ್ತದೆಯಲ್ಲ?

ಅರೇ ಏನ್ ಕಿರಿಕಿರಿಯಪ್ಪ, ಈ ಮೊಬೈಲ್ ಸಹವಾಸವೇ ಸಾಕು ಎಂದು ಅದೆಷ್ಟೋ ಜನ ಅಂದುಕೊಳ್ಳುವುದುಂಟು. ಆದರೆ ಕ್ಷಣಮಾತ್ರಕ್ಕೆ ಮತ್ತೆ ಮೊಬೈಲ್ ಗೆ ಮಾರುಹೋಗುವುದು ಸಹಜ ಗುಣ. ನಮಗರಿವಿಲ್ಲದೇ ಜೀವನದ ಭಾಗವಾಗಿ ಬಿಡುವ ಮೊಬೈಲ್ ಫೋನ್ ನಮ್ಮ ಭಾವನೆಗಳನ್ನು ಮನಸ್ಸು ಬಿಚ್ಚಿ ಮಾತಾಡಿದಾಗ ಅಷ್ಟೆ ಸೌಜನ್ಯದಿಂದ ಕೇಳಿಕೊಳ್ಳುವ ಉತ್ತಮ ಸಂಗಾತಿಯ ಪಾತ್ರವೂ ನಿರ್ವಹಿಸುತ್ತದೆ.

ಅತಿಯಾದ ಮೊಬೈಲ್ ಬಳಕೆಯಿಂದ ಅಪ್ಪ, ಅಮ್ಮ, ಹೆಂಡತಿ, ಮಗು ಹೀಗೆ ಅದೆಷ್ಟೋ ಸಂಬಂಧಗಳಿಗೆ ಕೊಡಬೇಕಾದ ಸಮಯವನ್ನು ಕಸಿಯುವುದು ಸಹಜ. ಆದಾಗ್ಯೂ ಕೆಲವೊಬ್ಬರು ಮಿತಿಯಾಗಿ ಮೊಬೈಲ್ ಬಳಿಸಿದಾಗಲೂ ಅದರಲ್ಲಿಟ್ಟ ಫೋಟೋ, ಅಪರೂಪದ ಡೇಟಾ ನಮ್ಮಲ್ಲಿ ಬೆಲೆ ಕಟ್ಟೋಕಾಗದಷ್ಟು ಮೌಲ್ಯದ್ದು.  ಕಳೆದುಹೋದ ಘಟನೆಗಳನ್ನು ಕಣ್ಣೆದುರಿಗೆ ತಂದುಕೊಡುತ್ತದೆ. ಬೆರಳ ತುದಿಯಲ್ಲಿ ನೆನಪಿನ ಪರದೆಯಲ್ಲಿ ಬಚ್ಚಿಟ್ಟ ಅದೆಷ್ಟೋ ವಿಷಯಗಳನ್ನು ಕಣ್ಣೆದುರಿಗೆ ತರುತ್ತದೆ. ಹೀಗಾಗಿ ಅಯ್ಯೋ ಮೊಬೈಲ್ ಬೆಲೆ ಎಷ್ಟಾದ್ರೂ ಆಗ್ಲಿ, ಮೊಬೈಲ್ ಹೋದ್ರು ಪರವಾಗಿಲ್ಲ. ಅದರಲ್ಲಿ ನನ್ನ ಜೀವ ಇತ್ತು ಎಂದು ಬಹುತೇಕರು ನೊಂದುಕೊಳ್ಳುತ್ತಾರೆ.

ಪ್ರೀತಿ ಪ್ರಪಂಚದ ಪಯಣ, ಅಪ್ಪ-ಅಮ್ಮಂದಿರ ಅಕ್ಕರೆ, ಮಕ್ಕಳ ತುಂಟಾಟ, ನಲ್ಲೆಯ ನಲಿವು ಹೀಗೆ ಹೇಳುತ್ತಾ ಹೋದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಮೊಬೈಲ್ ಹಾಸುಹೊಕ್ಕಾಗಿರುತ್ತದೆ. ಈ ಕಾರಣಕ್ಕೆ ಮೊಬೈಲ್ ಕಳೆದು ಹೋದಾಗ ಅದರ ಬೆಲೆಗಿಂತ ಅದರಲ್ಲಿನ ನಮ್ಮ ನೆನಪಿನ ಬುತ್ತಿ ಕಳೆದುಹೋಯ್ತಲ್ಲ ಎನ್ನುವ ನೋವು ಪ್ರತಿಯೊಬ್ಬರನ್ನು ಬಾಧಿಸದೇ ಇರಲಾರದು. ಭಾವನಾತ್ಮಕತೆ ಮನುಷ್ಯ ಸಹಜ ಗುಣ ಈ ಕಾರಣದಿಂದ ಕೈಯಲ್ಲಿದ್ದ ಮೊಬೈಲ್ ಕಳೆದಾಗ ನಮ್ಮಲ್ಲಿ ಏಕಾಂಗಿತನ ಕಾಡುವುದು ಸಹಜ. ಇರಲಿ ಇಂಥ ಅದೆಷ್ಟೋ ಘಟನೆಗಳು ಸಾಕಷ್ಟು ಜನರ ಅನುಭವಕ್ಕೆ ಬಂದಿರುತ್ತೆ.

ಬಿಡದ ಮೊಬೈಲ್ ಎಂಬ ಮಾಯೆ

ಮೊಬೈಲ್ ಕಳೆಯಿತಲ್ಲ ಎಂದು ಕೊಂಚ ಬೇಸರದ ಮೂಡಿನಲ್ಲಿ ನಾನಿದ್ದರೆ ನನ್ನಾಕೆ ನಸುನಕ್ಕು, ಓಹೋ ಅಂತು ನನಗೆ ಸವತಿ ಕಾಟದಿಂದ ಮುಕ್ತಿ ಸಿಕ್ತು ಅಂದಳು. ಪಕ್ಕದಲ್ಲಿದ್ದ ನನ್ನಜ್ಜಿಯದು ಯಾವುದನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು ಅಂತ ಅದಕ್ಕೆ ಹೇಳೋದು ಅನ್ನೋ ಅನುಭವದ ಮಾತು. ಇಷ್ಟಾದ ಕೆಲ ಘಂಟೆಗಳಲ್ಲಿ ನನ್ನ ಕೈಸೇರಿದ ಹೊಸ ಮೊಬೈಲ್ ಮನೆಗೆ ತೆಗೆದುಕೊಂಡು ಹೋದಾಗ ಮತ್ತೆ ನನ್ನಾಕೆಯದ್ದು ಅದೇ ಹಳೆಯ ವರಸೆ. ಅದಕ್ಕೆ ಹೇಳೋದು ಬಿಡುವೆನೆಂದರೂ, ಬಿಡದೀ ಮಾಯೇ ಎನ್ನುವಂತೆ ಮೊಬೈಲ್ ಕೂಡ ಮಾಯೆಯಾಗಿದೆ. ಈ ಅನುಭವ ನಿಮಗೂ ಆಗಿರಬೇಕಲ್ಲಾ ಪ್ರೆಂಡ್ಸ್?

Leave a Reply

Your email address will not be published. Required fields are marked *

You May Also Like

ಕೇಸ್ ನಂ 1 ರಿಂದ ಕೊರೊನಾ ಸೋಂಕು 8 ಲಕ್ಷ ತಲುಪಿದ್ದು ಹೇಗೆ? : ಮೂರೇ ದಿನದಲ್ಲಿ 1 ಲಕ್ಷ ಹೊಸ ಪಾಸಿಟಿವ್

ನವದೆಹಲಿ: ಮೂರು ದಿನದ ಹಿಂದಷ್ಟೇ ದೇಶದಲ್ಲಿ 7 ಲಕ್ಷ ದಾಟಿದ್ದ ಕೋರೊನಾ ಸೋಂಕಿತರ ಸಂಖ್ಯೆ ಈಗ…

ಕಂಟೈನ್ಮೆಂಟ್ ಪ್ರದೇಶ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆ

ಬೆಂಗಳೂರು : ಸತತವಾಗಿ ಮುಂದುವರೆದ ಲಾಕ್ ಡೌನ್ ನಿಂದಾಗಿ ರಾಜ್ಯದ ಬೊಕ್ಕಸ ಬರಿದಾಗಿದೆ. ಕಂಟೈನ್ಮೆಂಟ್ ಪ್ರದೇಶಗಳನ್ನು…

ಹೀಗೆ ಮುಂದುವರೆದರೆ ಸೋಂಕಿತರ ಸಂಖ್ಯೆ ಆಗಷ್ಟ್ ನಲ್ಲಿ ಎಷ್ಟಾಗಲಿದೆ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರೆದರೆ ಆಗಸ್ಟ್ 15ರ ವೇಳೆಗೆ ಸೋಂಕಿತರ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೋವಿಡ್-19 ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಅಂದಾಜಿಸಿದ್ದಾರೆ.

ಸಂಕಷ್ಟದಲ್ಲೂ ಪರೋಪಕಾರಿ ಈ ಆಟೋ ಚಾಲಕ

ಲಾಕ್ ಡೌನ್ ಹಿನ್ನಲೆ ದುಡಿಮೆಯನ್ನೆ ನಂಬಿದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ತನಗೆಷ್ಟೆ ಸಂಕಷ್ಟ ಎದುರಾದರೂ ಆಟೋ ಚಾಲಕನೊಬ್ಬ ಜನಸೇವೆಗೆ ನಿಂತಿದ್ದಾನೆ.