ನವದೆಹಲಿ: ಭಾರತ – ಚೀನಾ ಗಡಿಯಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು, ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಕೊರೊನಾ ವೈರಸ್ ನಿರ್ವಹಣೆ ವಿಚಾರವಾಗಿ ನಡೆಯುತ್ತಿರುವ ಎಲ್ಲ ರಾಜ್ಯಗಳ ಸಿಎಂಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪಿಎಂ, ಮೊದಲು ಹುತಾತ್ಮ ಸೈನಿಕರ ಆತ್ಮಕ್ಕೆ 2 ನಿಮಿಷ ಶಾಂತಿ ಕೋರಿದರು. ಬಳಿಕ ಸೈನಿಕರ ಬಲಿದಾನದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತವು ಎಂದಿಗೂ ಶಾಂತಿ ಬಯಸುತ್ತದೆ. ಆದರೆ, ಪ್ರಚೋದಿಸಿದಾಗ ಯಾವುದೇ ರೀತಿಯ ಪರಿಸ್ಥಿತಿ ಇರಲಿ ಭಾರತ ಅದಕ್ಕೆ ಸೂಕ್ತ ತಿರುಗೇಟು ನೀಡಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಈ ಮೂಲಕ ನಾನು ದೇಶದ ಪ್ರಜೆಗಳಿಗೆ ಭರವಸೆ ನೀಡುತ್ತೇನೆ. ಅದೇನೆಂದರೆ ಸೈನಿಕರ ಬಲಿದಾನ ವ್ಯರ್ಥವಾಗದು. ನಮಗೆ, ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯವಾದದ್ದು. ಅದಕ್ಕೆ ಪ್ರಚೋದಿಸಿದರೆ ಅದಕ್ಕೆ ತಕ್ಕ ಶಾಸ್ತಿ ಖಂಡಿತ ಮಾಡುತ್ತೇವೆ ಎಂದು ಗುಡುಗಿದ್ದಾರೆ.