ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ, 80 ಹಾಗೂ 63 ಸೆಕ್ಷನ್ಗಳನ್ನು ರದ್ದುಗೊಳಿಸಲು ಹೊರಟಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ಉಳುವವರಿಂದ ಭೂಮಿ ಕಿತ್ತುಕೊಂಡು ಉಳ್ಳವರನ್ನು ಭೂಮಿಯ ಒಡೆಯರನ್ನಾಗಿ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ರೈತವಿರೋಧಿ ಹ್ಯಾಷ್ ಟ್ಯಾಗ್ ಅಡಿ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಕೃಷಿಭೂಮಿ ಹೊಂದಲು ಆದಾಯದ ಮಿತಿ ಹೇರಿದ್ದ ಸೆಕ್ಷನ್ 79A, ಕೃಷಿಕರಲ್ಲದವರಿಗೆ ಭೂಮಿ ಖರೀದಿಸುವುದನ್ನು ನಿಷೇಧಿಸಿದ್ದ ಸೆಕ್ಷನ್ 79B, ಸುಳ್ಳು ಪ್ರಮಾಣಪತ್ರ ಸಲ್ಲಿಸಿದವರಿಗೆ ದಂಡ ವಿಧಿಸಿದ್ದ ಸೆಕ್ಷನ್ 79C, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80 ಅನ್ನು ರದ್ದುಪಡಿಸುವುದು ಭೂಮಿತಾಯಿಗೆ ಬಗೆವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಇನ್ನಷ್ಟು ಬಲಪಡಿಸಿ ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರು. ಬಿ.ಎಸ್.ಯಡಿಯೂರಪ್ಪ ಸರ್ಕಾರ ಉಳುವವನನ್ನು ಒಕ್ಕಲೆಬ್ಬಿಸಲು ಹೊರಟಿದೆ ಎಂದಿದ್ದಾರೆ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ತಿದ್ದುಪಡಿ, ಪ್ರಮುಖ ಬೆಳೆಗಳನ್ನು ಅಗತ್ಯವಸ್ತುಗಳ ಕಾಯ್ದೆಯಿಂದ ಹೊರಗಿಡುವ ತಿದ್ದುಪಡಿ, ಬೀಜ-ಗೊಬ್ಬರಗಳ ಮೇಲೆ ಜಿ ಎಸ್ ಟಿ.. ಹೀಗೆ ರೈತರ ಮೇಲೆ ಪ್ರಹಾರ ಮಾಡುತ್ತಾ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ರೈತರಿಂದ ಭೂಮಿಯನ್ನೇ ಕಿತ್ತುಕೊಳ್ಳಲು ಹೊರಟಿವೆ ಎಂದು ಅವರು ಹೇಳಿದ್ದಾರೆ.
ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ರೈತರ ಹಿತದೃಷ್ಟಿಯ ಲವಲೇಶವೂ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಹಸಿರು ಶಾಲು ಹೊದ್ದುಕೊಂಡು ತಾನೊಬ್ಬ ರೈತ ನಾಯಕ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಿರುವ ಬಿ.ಎಸ್.ಯಡಿಯೂರಪ್ಪ ಅವರ ಮುಖವಾಡ ಕಳಚಿ ಬಿದ್ದಿದೆ. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರನ್ನು ಗುಂಡಿಕ್ಕಿ ಕೊಂದರು, ಈಗ ಅವರಿಂದ ಭೂಮಿ ಕಿತ್ತುಕೊಂಡು ಸಾಯಿಸಲು ಹೊರಟಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಈ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ನಮ್ಮ ಪಕ್ಷ ಸದನದ ಒಳಗೆ ಮತ್ತು ಹೊರಗೆ ಬಲವಾಗಿ ವಿರೋಧಿಸಲಿದೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ರೈತರಿಗೆ ತಿಳುವಳಿಕೆ ನೀಡಿ ಗ್ರಾಮೀಣ ಮಟ್ಟದಿಂದಲೇ ಹೋರಾಟವನ್ನು ರೂಪಿಸಲು ನಿರ್ಧರಿಸಿದ್ದೇವೆ. ಬಿಜೆಪಿಯ ರೈತವಿರೋಧಿ ನೀತಿಯನ್ನು ಮನೆಮನೆಗೂ ಮುಟ್ಟಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!

ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಪಾಪ ಆ ತಾಯಿ ಹೃದಯ ತನ್ನ ಮಗಿವಿನ ಅನ್ನಕ್ಕಾಗಿ ಎಷ್ಟು ಪರದಾಡ್ತು ಅಂತಿರಿ. ಈ ದೃಷ್ಯ ಎಂಥವರ ಕರಳು ಹಿಂಡುತ್ತೆ..!

ಎಬಿವಿಪಿಯಿಂದ ಕಾಲೇಜು ಕಟ್ಟಡದ ದುರಸ್ತಿಗಾಗಿ ಪ್ರತಿಭಟನೆ.

ಉತ್ತರ ಪ್ರಭ ಸುದ್ದಿರೋಣ : ಪಟ್ಟಣದ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು…