ಗದಗ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿರಬೇಕಿದ್ದ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಗ್ರಾಮವನ್ನೆ ಮಾರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಕೆರೆಯಲ್ಲಿ ಮೀನುಗಾರಿಕೆ ಮಾಡಲು ಲಕ್ಷಾಂತರ ರೂಪಾಯಿಗೆ ಟೆಂಡರ್ ಇಲ್ಲದೇ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಅನುಮತಿ ನೀಡಿದೆ. ಇದರಿಂದ ಗ್ರಾಮ ಪಂಚಾಯತಿಗೆ ಕಾನೂನಿನ ನಿಯಮ ಪಾಲನೆ ಆಗುವುದಿಲ್ಲವೇ..? ಅಥವಾ ಗ್ರಾಮ ಪಂಚಾಯತಿ ತಾನೇ ಹೊಸದೊಂದು ನಿಯಮ ಮಾಡಿಕೊಂಡಿತೆ? ಎಂದು ಜನ ಆರೋಪ ಮಾಡುತ್ತಿದ್ದಾರೆ. ಈ ಆರೋಪಕ್ಕೆ ಗುರಿಯಾಗಿದ್ದು ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮ ಪಂಚಾಯತಿ…!
ಹೌದು ಈ ಗ್ರಾಮ ಪಂಚಾಯತಿಯಲ್ಲಿ ಯಾವ ಕಾನೂನು ಲೆಕ್ಕಕ್ಕಿಲ್ಲ. ನಿಮಗೆ ಇಡೀ ಗ್ರಾಮ ಬೇಕಂದ್ರೂ ಲೆಟರ್ ಹೆಡ್ ಮೇಲೆ ಬರೆದು ಸಹಿ ಮಾಡಿ ಕೊಟ್ಟು ಬಿಡ್ತಾರೆ ಎಂದು ಜನ ವ್ಯಂಗ್ಯವಾಗಿ ಮಾತಾಡಿಕೊಳ್ಳುವಂತಾಗಿದೆ. ಇದಕ್ಕೆ ಇಲ್ಲಿನ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಮಾಡಿದ ಯಡವಟ್ಟು ಕಾರಣವಾಗಿದೆ. ಸ್ವತ: ಅಗಳತದಲ್ಲಿ ಮೀನುಗಾರಿಕೆ ಮಾಡಲು ಗ್ರಾಮ ಪಂಚಾಯತಿ ಅಧ್ಯಕ್ಷರು ಲೆಟರ್ ಹೆಡ್ ನಲ್ಲಿ ಅನುಮತಿ ನೀಡಿದ ಕುರಿತು ಬರೆದು ಕೊಟ್ಟು ಪತ್ರ ಈಗ ವಿವಾದಕ್ಕೀಡಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಅಗಳತ..!
ಗ್ರಾಮದ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 63 ರ ಬಳಿ ಇರುವ ಅಗಳತದಲ್ಲಿ ಕೆರೆಯಲ್ಲಿ ಮೀನುಗಾರಿಕೆಗೆ ಅನುಮತಿ ನೀಡಲಾಗಿದೆ. ಆದರೆ ಇದಕ್ಕೆ ಕಾನೂನಿಯ ಪ್ರಕಾರ ಯಾವುದೇ ನಿಯಮ ಪಾಲನೆಯಾಗಿಲ್ಲ. ಅಧ್ಯಕ್ಷರ ಅನುಮತಿ ಮೇಲೆಯೇ ಎಲ್ಲವೂ. ಅಂದರೆ ಅಧ್ಯಕ್ಷರು ಅನುಮತಿ ಪತ್ರ ನೀಡಿದರೆ ಏನು ಬೇಕಾದರೂ ಸಾಧ್ಯ ಎನ್ನುವಂತಾಗಿದೆ. ಅಗಳತ ಎಂದರೆ ಗ್ರಾಮದ ಕೊಳಚೆ ನೀರು ಸಂಗ್ರಹ ಗುಂಡಿಯಾಗಿದೆ. ಆ ಸಂಗ್ರಹವಾದ ನೀರಿನಲ್ಲಿ ಮೀನುಗಾರಿಕೆಗೆ ಗದಗ ನಗರದ ರಾಜೀವ್ ಗಾಂಧಿ ನಗರದ ಮಾರುತಿ ಜಂಬಣ್ಣ ರಾಹುಲ್, ಅವರಿಗೆ ಗ್ರಾ.ಪಂ ಅಧ್ಯಕ್ಷರು ಆಡಳಿತ ಮಂಡಳಿಯ ಹೆಸರಲ್ಲಿ 05-02-2019 ರಂದು ಅನುಮತಿ ಪತ್ರ ನೀಡಿದ್ದಾರೆ. ಈ ಬಗ್ಗೆ ಯಾವುದೇ ಠರಾವು ಹಾಗೂ ಟೆಂಡರ್ ಪಕ್ರಿಯೇ ಇಲ್ಲದಿದ್ದರೂ ಗ್ರಾಮ ಪಂಚಾಯತಿ ಅಧ್ಯಕ್ಷರೇ ಇಲ್ಲಿ ಸುಪ್ರೀಂ ಎನ್ನುವಂತಾಗಿದೆ. ಎಸ್.ಎಮ್.ಬೂದಿಹಾಳ್, ಅಧ್ಯಕ್ಷರಾಗಿದ್ದ ವೇಳೆ ಗ್ರಾಮ ಪಂಚಾಯತಿ ಲೆಟರ್ ಹೆಡ್ ಮೇಲೆ ಅನುಮತಿ ನೀಡಿದ್ದಾರೆ.
ಲೆಟರ್ ಹೆಡ್ ದುರ್ಬಳಕೆ ಆರೋಪ..?
05-02-2019 ರಂದು ಇಲ್ಲಿನ ಅಗಳತದಲ್ಲಿ ಮೀನುಗಾರಿಕೆಗೆ ಅನುಮತಿ ನೀಡಲಾಗಿದೆ. ಅಂದರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಲೆಟರ್ ಹೆಡ್ ನಲ್ಲಿ ಏನು ಬೇಕಾದರೂ ಬರೆದು ಕೊಟ್ಟು ಬಿಡಬಹುದಾ ಎಂದು ಜನ ಮಾತಾಡಿಕೊಳ್ಳುವಂತಾಗಿದೆ. ಹೀಗಾಗಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಲೆಟರ್ ಹೆಡ್ ದುರ್ಬಳಕೆ ಆರೋಪಕ್ಕೂ ಗುರಿಯಾಗಿದೆ.
ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಜೊತೆಗೆ ಆಸ್ಪತ್ರೆ ಮತ್ತು ಶಾಲೆ, ದೇವಸ್ಥಾನಗಳ ಸಮೀಪದಲ್ಲಿಯೇ ಅಗಳತ ವಿದ್ದು ಇದರಲ್ಲಿ ಮೀನುಗಾರಿಕೆಗೆ ಅನುಮತಿ ಕೊಡುವುದು ಎಷ್ಟು ಸರಿ? ಮೊದಲೇ ಕೊಳಚೆ ನೀರು ಸಂಗ್ರಹವಾಗಿರುತ್ತೆ. ಇನ್ನು ಮೀನುಗಾರಿಕೆಯಿಂದ ಮತ್ತಷ್ಟು ಮಲೀನವಾಗುತ್ತದೆ. ಇನ್ನು ಗ್ರಾಮ ಪಂಚಾಯತಿ ಯಾವುದೇ ಠರಾವ್ ಇಲ್ಲದೇ ಮೀನುಗಾರಿಕೆಗೆ ಅವಕಾಶ ನೀಡುವುದು ಎಷ್ಟು ಸರಿ..? ಇದರಿಂದ ಅಧಿಕಾರ ದುರುಪಯೋಗ ಮಾಡಿಕೊಂಡಂತಾಗಿದೆ.
ಉಸ್ಮಾನಲಿ ನಮಾಜಿ, ಗ್ರಾಮಸ್ಥ
ಹಣದ ಆಸೆಗೆ ಆರೋಗ್ಯ ಒತ್ತೆ..!
ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕಾಗಿದ್ದು ಗ್ರಾಪಂ ಕರ್ತವ್ಯ. ಆದರೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿಯ ಅಗಳತದಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಇದರ ಪಕ್ಕದಲ್ಲಿಯೇ ಭೀಮಾಂಬಿಕಾ, ವೀರಭದ್ರೇಶ್ವರ ದೇವಸ್ಥಾನ ಹಾಗೂ ಪ್ರಾಥಮಿಕ ಶಾಲೆ ಇದೆ. ಜೊತೆಗೆ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಹೀಗಿದ್ದಾಗ್ಯೂ ಗ್ರಾಮದ ಚರಂಡಿ ನೀರು ಸಂಗ್ರಹವಾಗಿ ಕೊಳಚೆ ನೀರ್ಮಾಣವಾದ ಅಗಳತದಲ್ಲಿ ಸ್ವಚ್ಛತೆಯ ಅವಶ್ಯಕತೆ ಇದೆ. ಆದರೆ ಕೊಳಚೆ ನೀರು ಸಂಗ್ರಹವಾದಂತೆ ಮಾಡಿ ಅದರಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದರೆ ಮತ್ತಷ್ಟು ನೈರ್ಮಲ್ಯಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಹೀಗಾಗಿ ಹಣದ ಆಸೆಗೆ ಗ್ರಾಮದ ಜನರ ಆರೋಗ್ಯವನ್ನೆ ಒತ್ತೆ ಇಡಲು ಹೊರಟಿತ್ತಾ ಗ್ರಾಮ ಪಂಚಾಯತಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಗ್ರಾಪಂ ಅಧ್ಯಕ್ಷರು ಲೆಟರ್ ಹೆಡ್ ನಲ್ಲಿ ಅನುಮತಿ ನೀಡಿರುವುದು ನನ್ನ ಗಮನಕ್ಕಿಲ್ಲ. ಈಗಾಗಲೇ ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ. ಈ ಹಿಂದೆ ಅಧ್ಯಕ್ಷರು ಅಥವಾ ಆಡಳಿತ ಮಂಡಳಿ ಅನುಮತಿ ನೀಡಿರುವುದು ನನಗೆ ಮಾಹಿತಿ ಇಲ್ಲ.
ಮಂಜುಳಾ ಹೊಸಮನಿ, ಪಿಡಿಓ
ಟೆಂಡರ್ ಗೆ ಡಂಗೂರ..!
ಇಷ್ಟೆಲ್ಲ ಆದ ಮೇಲೂ ಇನ್ನೇನು ಗ್ರಾಮ ಪಂಚಾಯತಿ ಇಅಗಳತದಲ್ಲಿ ಮೀನುಗಾರಿಕೆಗೆ ಟೆಂಡರ್ ಕರೆಯಲಾಗಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ತಾಂತ್ರಿಕ ಕಾರಣದ ನೆಪವೊಡ್ಡಿ ಟೆಂಡರ್ ಪ್ರಕ್ರಿಯೇ ಮುಂದೂಡಲಾಯಿತು. ಒಂದೆಡೆ ಅನಾರೋಗ್ಯಕ್ಕೀಡು ಮಾಡುವ ಅಗಳತದಲ್ಲಿ ಮೀನುಗಾರಿಕೆ ಮಾಡಿದರೆ ಮತ್ತಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂಬುದು ಕೆಲವರ ಆರೋಪ. ಇನ್ನು ಟೆಂಡರ್ ಹಾಗೂ ಠರಾವ್ ಇಲ್ಲದೇ ಗ್ರಾಮ ಪಂಚಾಯತಿ ಅಧ್ಯಕ್ಷರು ಯಾವ ಆಧಾರದ ಮೇಲೆ ಅನುಮತಿ ನೀಡಿದರು ಎನ್ನುವುದು ಇನ್ನು ಕೆಲವರ ಪ್ರಶ್ನೆ.