ಹೊಸದೆಹಲಿ: ಕೊರೊನಾ ಯೋಧರಿಗೂ ಸೋಂಕು ತಗುಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶಾದ್ಯಂತ ಇಲ್ಲಿಯವರೆಗೂ 548 ವೈದ್ಯರು, ದಾದಿಯರಿಗೆ ಕೊರೊನಾ ತಗುಲಿದ್ದು, ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ 69 ವೈದ್ಯರಿಗೆ ಹಾಗೂ 274 ದಾದಿಯರಿಗೆ ಕೊರೊನಾ ವೈರಸ್ ಅಂಟಿದೆ. ವೈದ್ಯರು ಮತ್ತು ದಾದಿಯರಿಗೆ ಸೋಂಕಿತರ ಚಿಕಿತ್ಸೆ ವೇಳೆ ಸೋಂಕು ತಗುಲಿದೆಯೇ ಅಥವಾ ಸಮುದಾಯದಿಂದ ವೈರಸ್ ಅಂಟಿದೆಯೋ ಎಂಬುವುದನ್ನು ಸರ್ಕಾರ ಇದುವರೆಗೂ ಸ್ಪಷ್ಟಪಡಿಸಿಲ್ಲ. ನಾಲ್ಕು ತಿಂಗಳಿಗೂ ಹಿಂದೆ ಕೇರಳದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಬಳಿಕ ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. 1650 ಜನರು ಬಲಿಯಾಗಿದ್ದಾರೆ.
ಇನ್ನೊಂದು ಆತಂಕಕಾರಿ ಸಂಗತಿ ಎಂದರೆ ಕಳೆದ ಮೂರು ದಿನಗಳಲ್ಲಿಯೇ 10 ಸಾವಿರ ಜನರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಒಂದೇ ದಿನ 1,233 ಪ್ರಕರಣಗಳು ವರದಿಯಾಗಿವೆ. ಅಲ್ಲಿ ಸೋಂಕಿತರ ಸಂಖ್ಯೆ 1,6750ರ ಗಡಿ ದಾಟಿದೆ.